ಭಾರತ್ ಬಂದ್ ಪ್ರತಿಭಟನಾಕಾರರ ಕರೆದೊಯ್ಯಲು ದಾರೀಲಿ ಹೋಗ್ತಿದ್ದ 'ಬಿಎಂಟಿಸಿ ಬಸ್ ಪ್ರಯಾಣಿಕರನ್ನ ಕೆಳಗಿಳಿಸಿದ' ಪೊಲೀಸರು!

Published : Feb 12, 2026, 01:43 PM ISTUpdated : Feb 12, 2026, 01:49 PM IST

ಬೆಂಗಳೂರಿನ ಟೌನ್ ಹಾಲ್ ಬಳಿ ನಡೆದ ಭಾರತ್ ಬಂದ್ ಪ್ರತಿಭಟನೆಯು ಪೊಲೀಸ್ ಮತ್ತು ಪ್ರತಿಭಟನಾಕಾರರ ಸಂಘರ್ಷಕ್ಕೆ ಕಾರಣವಾಯಿತು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಪೊಲೀಸರು ಪ್ರಯಾಣಿಕರಿದ್ದ ಬಿಎಂಟಿಸಿ ಬಸ್ಸನ್ನು ಬಳಸಿಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

PREV
15

ಬೆಂಗಳೂರು (ಫೆ.12): ದೇಶಾದ್ಯಂತ ಕರೆ ನೀಡಲಾಗಿರುವ 'ಭಾರತ್ ಬಂದ್' ಬಿಸಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಾರಕಕ್ಕೇರಿದೆ. ಅದರಲ್ಲೂ ನಗರದ ಕೇಂದ್ರ ಭಾಗವಾದ ಟೌನ್ ಹಾಲ್ ಆವರಣ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಯಿತು. ಪ್ರತಿಭಟನಾಕಾರರನ್ನು ಹತ್ತಿಕ್ಕುವ ಭರದಲ್ಲಿ ಪೊಲೀಸರು ಸಾರ್ವಜನಿಕ ಪ್ರಯಾಣಿಕರನ್ನೇ ಬಸ್ಸಿನಿಂದ ಕೆಳಗಿಳಿಸಿ, ಆ ಬಸ್ಸುಗಳನ್ನು ಪ್ರತಿಭಟನಾಕಾರರನ್ನು ಕರೆದೊಯ್ಯಲು ಬಳಸಿಕೊಂಡಿದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

25

ಟೌನ್ ಹಾಲ್ ಬಳಿ ವಿವಿಧ ಕಾರ್ಮಿಕ ಸಂಘಟನೆಗಳು ಜಮಾಯಿಸುತ್ತಿದ್ದಂತೆ, ಅವರನ್ನು ವಶಕ್ಕೆ ಪಡೆಯಲು ಪೊಲೀಸರ ಬಳಿ ಸಾಕಷ್ಟು ವಾಹನಗಳಿರಲಿಲ್ಲ. ಈ ವೇಳೆ ಮೆಜೆಸ್ಟಿಕ್‌ನಿಂದ ಗಿರಿನಗರಕ್ಕೆ ತೆರಳುತ್ತಿದ್ದ ಬಿಎಂಟಿಸಿ (BMTC) ಬಸ್ಸನ್ನು ಪೊಲೀಸರು ಅರ್ಧದಲ್ಲೇ ತಡೆದರು. ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ತಕ್ಷಣ ಕೆಳಗಿಳಿಯುವಂತೆ ಸೂಚಿಸಿದರು. ಇದರಿಂದ ದಿಕ್ಕೆಟ್ಟ ಪ್ರಯಾಣಿಕರು, 'ನಾವು ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದೇವೆ, ನಮ್ಮನ್ನು ಅರ್ಧದಲ್ಲೇ ಇಳಿಸಿದರೆ ಹೇಗೆ?' ಎಂದು ಪ್ರಶ್ನಿಸಿದರು.

35

ಇದಕ್ಕೆ ಉತ್ತರಿಸಿದ ಪೊಲೀಸರು, 'ನಿಮಗೆ ಶಕ್ತಿ ಯೋಜನೆಯಡಿ ಫ್ರೀ ಬಸ್ ಇದೆ, ಬೇರೆ ಬಸ್ ಹತ್ತಿ ಹೋಗಿ' ಎಂದು ಅಸಡ್ಡೆಯಿಂದ ವರ್ತಿಸಿದರು ಎನ್ನಲಾಗಿದೆ. ಇದು ಮಹಿಳಾ ಪ್ರಯಾಣಿಕರನ್ನು ಕೆರಳಿಸಿತು. 'ಪೊಲೀಸರು ತಮ್ಮ ಕಾರ್ಯಾಚರಣೆಗೆ ಪ್ರತ್ಯೇಕ ಬಸ್ಸುಗಳನ್ನು ವ್ಯವಸ್ಥೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಜನಸಾಮಾನ್ಯರು ಓಡಾಡುವ ಬಸ್ಸನ್ನು ಕಿತ್ತುಕೊಂಡರೆ ಕೆಲಸಕ್ಕೆ ಹೋಗುವವರ ಪಾಡೇನು?' ಎಂದು ಮಹಿಳೆಯರು ಪೊಲೀಸರ ವಿರುದ್ಧ ರೇಗಾಡಿದರು. ಪುರುಷ ಪ್ರಯಾಣಿಕರಿಗೂ ಟಿಕೆಟ್ ತೋರಿಸಿ ಬೇರೆ ಬಸ್ ಹತ್ತಿ ಎಂದು ಹೇಳಿ ಬಲವಂತವಾಗಿ ಕೆಳಗಿಳಿಸಲಾಯಿತು.

45

ಈ ಬಾರಿಯ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದು ಸ್ವಾತಿ ಎಂಬ ಮಹಿಳೆಯ ಧೈರ್ಯ. ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಸ್ವಾತಿ ಅವರು, ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಲು ತಮ್ಮ 8 ತಿಂಗಳ ಪುಟ್ಟ ಮಗುವನ್ನು ಎತ್ತಿಕೊಂಡು ಟೌನ್ ಹಾಲ್ ಬಳಿ ಆಗಮಿಸಿದ್ದರು. 'ಮಗುವಿನ ಭವಿಷ್ಯಕ್ಕಾಗಿ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ನಾನು ಬಂದಿದ್ದೇನೆ' ಎಂದ ಸ್ವಾತಿ ಅವರನ್ನು ಪೊಲೀಸರು ಮಗುವಿನ ಸಮೇತ ವಶಕ್ಕೆ ಪಡೆದರು. ಎಂಟು ತಿಂಗಳ ಹಸುಳೆಯನ್ನು ಎತ್ತಿಕೊಂಡೇ ತಾಯಿ ಸ್ವಾತಿ ಬಿಎಂಟಿಸಿ ಬಸ್ ಹತ್ತಿ ಬಂಧನಕ್ಕೆ ಒಳಗಾದ ದೃಶ್ಯ ನೆರೆದಿದ್ದವರ ಮನಸ್ಸಿಗೆ ಘಾಸಿ ಉಂಟುಮಾಡಿತು.

55

ಟೌನ್ ಹಾಲ್ ಬಳಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ಮೊದಲೇ ಘೋಷಿಸಿದ್ದರು. ಆದರೂ ಎರಡು ಲಾರಿಗಳಲ್ಲಿ ನೂರಾರು ಕಾರ್ಮಿಕರು ಜಮಾಯಿಸಿ ರಸ್ತೆ ತಡೆ ನಡೆಸಲು ಮುಂದಾದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪೊಲೀಸರು ಸಾರಾಸಗಟು ಬಂಧನ ಪ್ರಕ್ರಿಯೆ ಆರಂಭಿಸಿದರು. ಸುಮಾರು 5 ಬಿಎಂಟಿಸಿ ಬಸ್ಸುಗಳಲ್ಲಿ 500ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ನಗರದ ಹೊರವಲಯದ ಮೈದಾನಗಳಿಗೆ ಕರೆದೊಯ್ದರು.

'ಪ್ರತಿಭಟನಾಕಾರರು ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಲಿ, ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಸಹಿಸುವುದಿಲ್ಲ' ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆಯಾಗಿ ಭಾರತ್ ಬಂದ್ ಹಿನ್ನೆಲೆಯಲ್ಲಿ ಟೌನ್ ಹಾಲ್ ರಣರಂಗದಂತಾಗಿದ್ದು, ಸಾರ್ವಜನಿಕರು ಮಾತ್ರ ಪೊಲೀಸರ ಮತ್ತು ಸಂಘಟನೆಗಳ ನಡುವೆ ಸಿಲುಕಿ ಪರದಾಡುವಂತಾಯಿತು.

Read more Photos on
click me!

Recommended Stories