ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರ ಮನೆಯಲ್ಲಿ ಹಿಡನ್ ಕ್ಯಾಮರಾ ಇಟ್ಟು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರ ಗ್ಯಾಂಗ್ ಅನ್ನು ಬಂಧಿಸಲಾಗಿದೆ. ಆರೋಪಿಗಳ ಮೊಬೈಲ್‌ನಿಂದ 100ಕ್ಕೂ ಹೆಚ್ಚು ಖಾಸಗಿ ವಿಡಿಯೋಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಕಲಿ ಪತ್ರಕರ್ತರ ಗ್ಯಾಂಗ್ ಮೊಬೈಲ್‌ನಲ್ಲಿ ರಾಶಿ ರಾಶಿ ವಿಡಿಯೋ
ಬೆಳಗಾವಿ (ಫೆ.21): ಕುಂದಾನಗರಿ ಬೆಳಗಾವಿಯಲ್ಲಿ ಸಂಚಲನ ಮೂಡಿಸಿದ್ದ ಮಹಿಳಾ ಅಧಿಕಾರಿಯ ಮನೆಯಲ್ಲಿ ‘ಹಿಡನ್ ಕ್ಯಾಮರಾ’ ಇಟ್ಟಿದ್ದ ಪ್ರಕರಣ ಇದೀಗ ಮತ್ತಷ್ಟು ಭೀಕರ ತಿರುವು ಪಡೆದುಕೊಂಡಿದೆ. ಬಂಧಿತ ನಕಲಿ ಪತ್ರಕರ್ತರ ಗ್ಯಾಂಗ್‌ನ ಮೊಬೈಲ್ ಡೇಟಾವನ್ನು ಪೊಲೀಸರು ರಿಟ್ರೀವ್ (Data Restore) ಮಾಡಿದಾಗ, ಕೇವಲ ಒಬ್ಬರಲ್ಲ, ಬದಲಿಗೆ ನೂರಕ್ಕೂ ಹೆಚ್ಚು ಬೆತ್ತಲೆ ವಿಡಿಯೋಗಳು ಮತ್ತು ಮತ್ತೋರ್ವ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಯ ಖಾಸಗಿ ಜೀವನವನ್ನು ಹರಾಜು ಹಾಕಿದ ಭಯಾನಕ ಸತ್ಯ ಹೊರಬಿದ್ದಿದೆ.
26
ಬಲ್ಬ್ ಹೋಲ್ಡರ್ ಒಳಗೆ 'ರಹಸ್ಯ ಕಣ್ಣು'
ಈ ಖತರ್ನಾಕ್ ಗ್ಯಾಂಗ್ ಅಧಿಕಾರಿಗಳ ಮನೆಯೊಳಗೆ ನುಗ್ಗಿ ಯಾರಿಗೂ ಅನುಮಾನ ಬಾರದಂತೆ ಶೌಚಾಲಯ ಮತ್ತು ಬೆಡ್‌ರೂಮ್‌ಗಳ ವಿದ್ಯುತ್ ಬಲ್ಬ್‌ನ ಹೋಲ್ಡರ್‌ಗಳಲ್ಲಿ ಅತ್ಯಾಧುನಿಕ ರಹಸ್ಯ ಕ್ಯಾಮರಾಗಳನ್ನು ಅಳವಡಿಸುತ್ತಿದ್ದರು. ಈ ಹಿಂದೆ ಓರ್ವ ಮಹಿಳಾ ಅಧಿಕಾರಿಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಈ ಕಿರಾತಕರು, ಈಗ ಮತ್ತೊಬ್ಬ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಯನ್ನೂ ಇದೇ ರೀತಿ ಬಲೆಗೆ ಕೆಡವಿರುವುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ.
36
ಮೊಬೈಲ್‌ನಲ್ಲಿ ಸಿಕ್ಕಿತು ನೂರಾರು ವಿಡಿಯೋಗಳ ರಾಶಿ
ಬಂಧಿತ ಆರೋಪಿಗಳಾದ ಸಮೀರ್ ಶೇಖ್, ಅಬ್ದುಲ್ ರಶೀದ್ ಮಕಾಂದಾರ್ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಮತ್ತೆ ಕಸ್ಟಡಿಗೆ ಪಡೆದಿದ್ದಾರೆ. ಮಾಳಮಾರುತಿ ಠಾಣೆಯ ಪೊಲೀಸರು ಆರೋಪಿಗಳ ಮೊಬೈಲ್ ಫೋನ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ಡೇಟಾ ಮರುಪಡೆದಾಗ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಅದರಲ್ಲಿ ಬೇರೆ ಬೇರೆ ಸಮಯಗಳಲ್ಲಿ ಚಿತ್ರೀಕರಿಸಲಾದ 100ಕ್ಕೂ ಹೆಚ್ಚು ನಗ್ನ ವಿಡಿಯೋಗಳು ಪತ್ತೆಯಾಗಿವೆ. ಈ ವಿಡಿಯೋಗಳನ್ನು ಇಟ್ಟುಕೊಂಡು ಕಿರಾತಕರು ಅಧಿಕಾರಿಗಳಿಂದ ಲಕ್ಷ ಲಕ್ಷ ಹಣ ಪೀಕುತ್ತಿದ್ದರು.
ನಕಲಿ ಪತ್ರಕರ್ತರ ಈ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಹೆದರಿದ ಹಿರಿಯ ಅಧಿಕಾರಿಯೊಬ್ಬರು ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಆರೋಪಿಗಳು ಕೇಳಿದಷ್ಟು ಹಣ ನೀಡುತ್ತಾ ಬಂದಿದ್ದರು. 'ಹಣ ನೀಡದಿದ್ದರೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತೇವೆ ಅಥವಾ ಮೇಲಧಿಕಾರಿಗಳಿಗೆ ಕಳುಹಿಸುತ್ತೇವೆ' ಎಂದು ಆರೋಪಿಗಳು ಬೆದರಿಕೆ ಹಾಕುತ್ತಿದ್ದರು. ಮಹಿಳಾ ಅಧಿಕಾರಿಯ ಪ್ರಕರಣ ಬೆಳಕಿಗೆ ಬರುವ ಮುನ್ನವೇ ಈ ಗ್ಯಾಂಗ್ ಮತ್ತೋರ್ವ ಅಧಿಕಾರಿಯನ್ನು ಕಾಡಿತ್ತು ಎಂಬುದು ಈಗ ಬಯಲಾಗಿದೆ.
56
ಪೊಲೀಸ್ ತನಿಖೆ ತೀವ್ರ
ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಮತ್ತು ಡಿಸಿಪಿ ನಾರಾಯಣ ಭರಮನಿ ಅವರ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ. ಸೋಕೋ (SOCO) ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಯುತ್ತಿದೆ. ನಕಲಿ ಪತ್ರಕರ್ತರ ಸೋಗಿನಲ್ಲಿ ಅಧಿಕಾರಿಗಳ ಖಾಸಗಿ ಜೀವನಕ್ಕೆ ಕನ್ನ ಹಾಕುತ್ತಿದ್ದ ಈ ತಂಡದ ವಿರುದ್ಧ ಬೆಳಗಾವಿ ಜನರು ಮತ್ತು ಅಧಿಕಾರಿಗಳ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
66
ಸಾರ್ವಜನಿಕರಿಗೆ ಎಚ್ಚರಿಕೆ
ಈ ಘಟನೆ ಅಧಿಕಾರಿಗಳ ವಲಯದಲ್ಲಿ ಮಾತ್ರವಲ್ಲದೆ ಸಾರ್ವಜನಿಕರಲ್ಲೂ ಭೀತಿ ಹುಟ್ಟಿಸಿದೆ. ಅಪರಿಚಿತ ವ್ಯಕ್ತಿಗಳು ಅಥವಾ ಸೇವಾ ಸಿಬ್ಬಂದಿ ಮನೆಯೊಳಗೆ ಬಂದಾಗ ಎಚ್ಚರದಿಂದಿರಬೇಕು ಮತ್ತು ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಅಸಹಜ ಬದಲಾವಣೆಗಳಿವೆಯೇ ಎಂದು ಪರಿಶೀಲಿಸುವುದು ಅಗತ್ಯ ಎಂದು ಪೊಲೀಸರು ಸಲಹೆ ನೀಡಿದ್ದಾರೆ.