ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿ ಕಡಲ ತೀರದಲ್ಲಿ ಪತ್ತೆಯಾಗಿರುವುದು ಬಲೀನ್ ತಿಮಿಂಗಲದ ಮೃತದೇಹವಾಗಿದೆ. ಬಲೀನ್ ವೇಲ್ ಎಂದು ಗುರುತಿಸಲ್ಪಡುವ ಈ ತಿಮಿಂಗಲ ಸುಮಾರು 46 ಫೀಟ್ ಉದ್ದ, 9 ಫೀಟ್ ಎತ್ತರವಿದೆ.
ಸಾಮಾನ್ಯವಾಗಿ 10ಮೀಟರ್‌ನಿಂದ 102ಮೀಟರ್‌ವರೆಗೆ ಈ ಬಲೀನ್ ಜಾತಿಯ ತಿಮಿಂಗಿಲ ಬೆಳೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಅತೀ ವಿರಳವಾಗಿ ಕಾಣುವ ಹಾಗೂ ಅಳಿವಿನಂಚಿನಲ್ಲಿರುವ ಬೃಹತ್ ಗಾತ್ರದ ತಿಮಿಂಗಿಲವಾಗಿದೆ.
ಮೀನುಗಾರಿಕೆಗೆ ತೆರಳಿದ್ದ ಸ್ಥಳೀಯ ಮೀನುಗಾರರು ಬೃಹತ್ ಗಾತ್ರದ ತಿಮಿಂಗಲ ಮೃತದೇಹವನ್ನು ನೋಡಿದ್ದಾರೆ. ನಂತರ ಈ ಬಗ್ಗೆ ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇನ್ನು ತಿಮಿಂಗಲವು ಮೃತಪಟ್ಟು ಹಲವು ದಿನ ಕಳೆದ ಬಳಿಕ ದಡಕ್ಕೆ ಬಂದು ಬಿದ್ದಿರುವ ಶಂಕೆಯಿದೆ. ತಿಮಿಂಗಿಲದ ಸಾವಿಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸ್ಪಷ್ಟವಾಗಿ ತಿಳಿಯಲಿದೆ.