ವಿಜಯನಗರ ಸಾಮ್ರಾಜ್ಯದ ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು ಒಂದು ಸಾವಿರ ಎಕರೆ ಅರಣ್ಯ ಪ್ರದೇಶವಿದ್ದು, ಆನೆಗೊಂದಿ, ಮಲ್ಲಾಪುರ, ರಾಂಪುರ, ಕಡೇಬಾಗಿಲು, ಸಣ್ಣಾಪುರ, ತಿರುಮಲಾಪುರ ಥೆಂಬಾ, ಲಕ್ಷ್ಮೀಪುರ ಗ್ರಾಮಗಳ ಗುಡ್ಡ ಗಾಡು ಪ್ರದೇಶದಲ್ಲಿ ಪ್ರಾಣಿಗಳು ವಾಸವಾಗಿವೆ. ಈಗಾಗಲೇ ಈ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದರೆ, ಕಲ್ಲು ಗಣಿಗಾರಿಕೆಗೆ ಮದ್ದುಗಳನ್ನು ಸ್ಫೋಟಿಸುತ್ತಿರುವುದರಿಂದ ಪ್ರಾಣಿಗಳಿಗೆ ಜೀವಭಯ ಕಾಡುತ್ತಿದೆ.
ನವಿಲುಗಳ ತವರು ಪ್ರದೇಶ ಎಂದೇ ಖ್ಯಾತಿಯಾಗಿರುವ ಮಲ್ಲಾಪುರ ರಾಂಪುರ ಮತ್ತು ಇಂದಿರಾನಗರ ಪ್ರದೇಶದಲ್ಲಿ ನವಿಲುಗಳ ಸಂಖ್ಯೆ ಹೆಚ್ಚಾಗಿದೆ. ದಿನ ನಿತ್ಯ ನೂರಾರು ನವಿಲುಗಳು ಸಂಜೆ ಸಮಯದಲ್ಲಿ ಗುಡ್ಡದ ಅಂಚಿನಲ್ಲಿ ನರ್ತಿಸುವುದು ಸಾಮಾನ್ಯವಾಗಿದೆ. ಆದರೆ, ಸಂಜೆ ಮತ್ತು ಬೆಳಗಿನ ಸಮಯದಲ್ಲಿ ಗಣಿಗಾರಿಕೆಗೆ ಮದ್ದುಗಳನ್ನು ಸ್ಫೋಟಿಸುತ್ತಿರುವುದರಿಂದ ನವಿಲುಗಳು ಬೆಚ್ಚಿ ಬಿದ್ದು ಸಾವನ್ನಪ್ಪಿದ ಘಟನೆಗಳಿವೆ. ಜನ ಸಂದಣಿ ಇರಲಾರದ ಸ್ಥಳಕ್ಕೆ ನವಿಲುಗಳು ಆಗಮಿಸುತ್ತಿದ್ದು, ಉತ್ತಮ ಪರಿಸರದಲ್ಲಿ ವಾಸವಾಗಿವೆ. ಜೊತೆಗೆ ಗಿಳಿಗಳು, ಗುಬ್ಬಿಗಳು ಅಲ್ಲದೇ ಬೆಟ್ಟದ ಕೆಳಗೆ ಭತ್ತದ ಗದ್ದೆಯಲ್ಲಿ ಬತ್ತ ನಾಟಿ ಮಾಡುವ ಸಂದರ್ಭದಲ್ಲಿ ಬೆಳ್ಳಕ್ಕಿಗಳ ದಂಡು ಹಾರಿ ಬರುತ್ತವೆ.
ಮಲ್ಲಾಪುರ ಮತ್ತು ರಾಂಪುರ ಸುತ್ತಮಮುತ್ತ ಅರಣ್ಯ ಪ್ರದೇಶ ಇದ್ದು ಗುಡ್ಡಗಳೇ ಹೆಚ್ಚಾಗಿವೆ. ಅಲ್ಲದೇ ವಿಜಯನಗರ ಕಾಲದ ಕೋಟೆಗಳಿದ್ದು, ಇಲ್ಲಿ ವನ್ಯ ಪ್ರಾಣಿಗಳು ಸಂಚರಿಸುತ್ತವೆ. ಈ ಪ್ರದೇಶದಲ್ಲಿ 25ರಿಂದ 30 ಕರಡಿಗಳಿದ್ದು, 25 ಚಿರತೆಗಳು, ತೋಳ, ಮುಳ್ಳು ಹಂದಿ, ಕತ್ತೆ ಕಿರುಬ, ಹಳದಿ ಕತ್ತಿನ ನಾಯಿಗಳು ಸೇರಿದಂತೆ ವಿವಿಧ ರೀತಿಯ ಪ್ರಾಣಿಗಳು ವಾಸವಾಗಿವೆ ಎಂದು ಅರಣ್ಯ ಇಲಾಖೆ ಮಾಡಿದ ಸರ್ವೇಯಲ್ಲಿ ಮಾಡಿದೆ. ಅಲ್ಲದೇ ತುಂಗಭದ್ರಾ ನದಿ ತೀರದಲ್ಲಿ ನೀರು ನಾಯಿ ವಾಸವಾಗಿವೆ.
ಈಗಾಗಲೇ ದುರ್ಗಾ ಬೆಟ್ಟದಲ್ಲಿ ಒಂದು ಚಿರತೆಯನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದು, ಚಿಕ್ಕ ರಾಂಪುರ ಬಳಿ ಎರಡು ಕರಡಿಗಳನ್ನು ಸೆರೆ ಹಿಡಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಹೇಮಗುಡ್ಡದ ಬಳಿ ಬೆಳಗಿನ ಜಾವ ಅಂತಾರಾಜ್ಯಗಳಿಗೆ ಕಲ್ಲುಗಳನ್ನು ಸಾಗಿಸುತ್ತಿದ್ದ ವಾಹನಕ್ಕೆ ಸಿಲುಕಿ ಚಿರತೆ ಮೃತಪಟ್ಟಿದೆ.
ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವರು ವಾರದಲ್ಲಿ ಮೂರು ದಿನ ಮಾತ್ರ ಕಲ್ಲುಗಳನ್ನು ಒಡೆಯುವುದಕ್ಕೆ ಮದ್ದುಗಳನ್ನು ಉಪಯೋಗಿಸುತ್ತಿದ್ದಾರೆ. ಬೆಳಗಿನ ಜಾವದಲ್ಲಿ ಸ್ಫೋಟಿಸುತ್ತಿದ್ದು, ನಿದ್ರೆಯಲ್ಲಿರುವ ಜನರಿಗೂ ತೊಂದರೆಯಾಗುತ್ತಿದೆ. ಪಕ್ಷಿ, ಪ್ರಾಣಿಗಳಿಗೂ ಭಯ ಉಂಟಾಗಿದೆ. ಅನುಮತಿ ಪಡೆಯದೆ ಅನಧಿಕೃತವಾಗಿ ಮದ್ದುಗಳನ್ನು ಉಪಯೋಗಿಸುತ್ತಿದ್ದಾರೆ.
ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕಂದಾಯ, ಅರಣ್ಯ ಮತ್ತು ಹಂಪಿ ಪ್ರಾಧಿಕಾರದ ಪ್ರದೇಶ ಹಾಳಾಗುತ್ತಿದ್ದು, ಇದರಿಂದ ವನ್ಯ ಜೀವಿಗಳು ವಿನಾಶದ ಅಂಚಿನಲ್ಲಿವೆ. ಸರಕಾರ ಪಕ್ಷಿಗಳು ಮತ್ತು ವನ್ಯ ಜೀವಿಗಳ ರಕ್ಷಣೆಗೆ ಮುಂದಾಗ ಬೇಕಾಗಿದೆ ಎಂಬುದು ನಾಗರಿಕರ ಒತ್ತಾಯವಾಗಿದೆ.
ಗಂಗಾವತಿ ತಾಲೂಕಿನ ಮಲ್ಲಾಪುರ, ರಾಂಪುರ, ಆನೆಗೊಂದಿ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚು ಪ್ರದೇಶ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಈ ಪ್ರದೇಶದಲ್ಲಿ ನವಿಲು ಸೇರಿದಂತೆ ವನ್ಯ ಪ್ರಾಣಿಗಳಿದ್ದು, ಅಕ್ರಮ ಗಣಿಗಾರಿಕೆಗೆ ಮದ್ದುಗಳನ್ನು ಸ್ಫೋಟಿಸುತ್ತಿರುವುದರಿಂದ ಪ್ರಾಣ ಭಯ ಉಂಟಾಗಿದೆ. ಆದ್ದರಿಂದ ಪ್ರಾಣಿಗಳ ರಕ್ಷಣೆ ಅವಶ್ಯವಾಗಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗಂಗಾವತಿ ಅರಣ್ಯ ವಲಯ ಅಧಿಕಾರಿಗಳು ಶಿವರಾಜ್ ಮೇಟಿ ಅವರು ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಮದ್ದುಗಳನ್ನು ಉಪಯೋಗಿಸುತ್ತಿರುವುದರಿಂದ ಪಕ್ಷಿಗಳು, ಪ್ರಾಣಿಗಳಿಗೆ ಭಯ ಉಂಟಾಗುತ್ತವೆ. ಅವುಗಳ ರಕ್ಷಣೆ ಅವಶ್ಯವಾಗಿದೆ. ಕೂಡಲೇ ಸಂಬಂದ ಪಟ್ಟ ಅಧಿಕಾರಿಗಳು ಕಲ್ಲು ಗಣಿಗಾರಿಕೆ ನಿಲ್ಲಿಸಬೇಕು. ವನ್ಯ ಪ್ರಾಣಿಗಳನ್ನು ರಕ್ಷಿಸಬೇಕಾಗಿದೆ ಎಂದು ಪರಿಸರ ಪ್ರೇಮಿ ರಾಜೇಶ್ ನಾಯಕ ದೊರೆ ಅವರು ಹೇಳಿದ್ದಾರೆ