ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿ ಸಂದೀಪ್ ಶರ್ಮಾ ಮಾರಕ ದಾಳಿಯ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ 10 ವಿಕೆಟ್‌ಗಳ ಜಯ ಪಡೆದು ಪ್ಲೇ ಆಫ್ ಪ್ರವೇಶಿಸಿದೆ.
ಸನ್‌ರೈಸರ್ಸ್ ಮಧ್ಯಮ ವೇಗಿ ಸಂದೀಪ್ ಶರ್ಮಾ ಮುಂಬೈ ಇಂಡಿಯನ್ಸ್ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್ ಹಾಗೂ ಇಶಾನ್ ಕಿಶನ್ ವಿಕೆಟ್ ಕಬಳಿಸುವ ಮೂಲಕ ಮುಂಬೈ ತಂಡವನ್ನು 150ರ ಗಡಿದಾಟದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.
ಐಪಿಎಲ್‌ನಲ್ಲಿ 90ನೇ ಪಂದ್ಯವನ್ನಾಡಿದ ಸಂದೀಪ್ ಶರ್ಮಾ ಪ್ರಮುಖ ಮೂರು ವಿಕೆಟ್ ಕಬಳಿಸುವ ಮೂಲಕ ಒಟ್ಟು 108 ವಿಕೆಟ್‌ಗಳು ಸಂದೀಪ್ ಖಾತೆಗೆ ಸೇರ್ಪಡೆಯಾಗಿವೆ.
ಇನ್ನು ತುಂಬಾ ಇಂಟ್ರೆಸ್ಟಿಂಗ್ ವಿಚಾರವೆಂದರೆ ಜಸ್ಪ್ರೀತ್ ಬುಮ್ರಾ ಕೂಡಾ 90 ಪಂದ್ಯಗಳಲ್ಲಿ ಕೇವಲ 105 ವಿಕೆಟ್ ಪಡೆದಿದ್ದು, ಸಂದೀಪ್ ಶರ್ಮಾ ಅವರಿಗಿಂತ 3 ವಿಕೆಟ್ ಹಿಂದಿದ್ದಾರೆ.
ಬುಮ್ರಾ 24.22ರ ಸರಾಸರಿಯಲ್ಲಿ 7.46ರಂತೆ ರನ್ ನೀಡಿ 105 ವಿಕೆಟ್ ಪಡೆದಿದ್ದರೆ, ಸಂದೀಪ್ ಶರ್ಮಾ 24.02ರ ಸರಾಸರಿಯಲ್ಲಿ 7.75ರಂತೆ ರನ್ ನೀಡಿ 108 ವಿಕೆಟ್ ಪಡೆದಿದ್ದಾರೆ.
ಐಪಿಎಲ್ 13ನೇ ಆವೃತ್ತಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ವೇಗದ ಬೌಲರ್ ಸಂದೀಪ್ ಶರ್ಮಾ ಮತ್ತೊಂದು ವಿನೂತನ ದಾಖಲೆ ಮಾಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಪಂದ್ಯದ ಇನ್ನಿಂಗ್ಸ್ ಆರಂಭದ ಮೊದಲ 6 ಓವರ್‌ಗಳ ಪವರ್ ಪ್ಲೇನಲ್ಲಿ ಅತಿ ಹೆಚ್ಚು (53) ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಸಂದೀಪ್ ಪಾತ್ರರಾಗಿದ್ದಾರೆ.
2020ರ ಐಪಿಎಲ್‌ನಲ್ಲಿ ಸಂದೀಪ್ ಪವರ್ ಪ್ಲೇನಲ್ಲಿ 9 ವಿಕೆಟ್ ಪಡೆದು ಎದುರಾಳಿ ತಂಡದ ಪಾಲಿಗೆ ಶಾಕ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ
ಈ ಪಟ್ಟಿಯಲ್ಲಿ ಜಹೀರ್ ಖಾನ್ (52 ವಿಕೆಟ್), ಭುವನೇಶ್ವರ್ ಕುಮಾರ್ (48 ವಿಕೆಟ್), ಉಮೇಶ್ ಯಾದವ್ (45 ವಿಕೆಟ್) ಹಾಗೂ ಧವಳ್ ಕುಲಕರ್ಣಿ (44 ವಿಕೆಟ್) ನಂತರದ ಸ್ಥಾನದಲ್ಲಿದ್ದಾರೆ.
ಹೈದ್ರಾಬಾದ್ ಆಲ್ರೌಂಡರ್ ಜೇಸನ್ ಹೋಲ್ಡರ್, ಮುಂಬೈನ ಕೌಲ್ಟರ್ ನೈಲ್ ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದರು.