13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೇ ಮೊದಲ ಬಾರಿಗೆ ಲೀಗ್ ಹಂತದಲ್ಲೇ ಹೊರಬಿದ್ದಿದೆ.
ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲ ಬಾರಿಗೆ ಪ್ಲೇ ಆಫ್ ಹಂತ ಪ್ರವೇಶಿಸಲು ವಿಫಲವಾಗಿದೆ.
ಸದ್ಯ 12 ಪಂದ್ಯಗಳನ್ನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ಗೆಲುವು ಹಾಗೂ 8 ಸೋಲುಗಳೊಂದಿಗೆ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಸ್ವತಃ ನಾಯಕ ಎಂ ಎಸ್ ಧೋನಿಯ ಯಾವ ಲೆಕ್ಕಾಚಾರಗಳು ಕೈಹಿಡಿದಿಲ್ಲ. ಇನ್ನು ಧೋನಿ ಮ್ಯಾಚ್ ಫಿನಿಶಿಂಗ್ ಕೆಲಸವನ್ನು ಈ ಬಾರಿ ಅಚ್ಚುಕಟ್ಟಾಗಿ ನಿಭಾಯಿಸಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಿಂದ ಕಳಪೆ ಪ್ರದರ್ಶನ ತೋರಿದ ಬೆನ್ನಲ್ಲೇ ಹಲವು ಸ್ಟಾರ್ ಕ್ರಿಕೆಟಿಗರ ತಲೆದಂಡವಾಗಲಿದೆ ಎನ್ನುವ ಸುದ್ದಿಗಳು ಕೇಳಿ ಬಂದಿದ್ದವು.
ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಸಿಇಒ ಕಾಶಿ ವಿಶ್ವನಾಥನ್ ಎಂ ಎಸ್ ಧೋನಿ ಕುರಿತಂತೆ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಸುದ್ದಿವಾಹಿನಿಯ ಸಂದರ್ಶನದಲ್ಲಿ ಧೋನಿ ಮುಂದಿನ ವರ್ಷವೂ ಸಿಎಸ್‌ಕೆ ನಾಯಕನಾಗಿ ಮುಂದುವರೆಯುತ್ತಾರಾ ಎನ್ನುವ ಪ್ರಶ್ನೆಗೆ ಕಾಶಿ ವಿಶ್ವನಾಥ್ ಸ್ಪಷ್ಟವಾಗಿ ಉತ್ತರಿಸಿದ್ದಾರೆ.
ಖಂಡಿತವಾಗಿ ಧೋನಿ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ ಎನ್ನುವ ವಿಶ್ವಾಸವಿದೆ.
ಧೋನಿ ನಮಗೆ ಮೂರು ಐಪಿಎಲ್ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಈ ಆವೃತ್ತಿಯಲ್ಲಿ ಮಾತ್ರ ನಾವು ಪ್ಲೇ ಆಫ್‌ಗೆ ಅರ್ಹತೆಗಿಟ್ಟಿಸಿಕೊಂಡಿಲ್ಲ. ಈ ಆವೃತ್ತಿ ಬಿಟ್ಟು ಉಳಿದ ಎಲ್ಲಾ ಆವೃತ್ತಿಯಲ್ಲೂ ಪ್ಲೇ ಆಫ್‌ಗೇರಿದ ಸಾಧನೆ ಮತ್ತೊಂದು ತಂಡ ಮಾಡಿಲ್ಲ ಎಂದು ಕಾಶಿ ವಿಶ್ವನಾಥ್ ಹೇಳಿದ್ದಾರೆ
ಒಟ್ಟಿನಲ್ಲಿ ಧೋನಿಯನ್ನು ಸಿಎಸ್‌ಕೆ ತಂಡ ಉಳಿಸಿಕೊಳ್ಳುವ ಮಾತುಗಳನ್ನು ಫ್ರಾಂಚೈಸಿ ಆಡಿದ್ದು, ಸಿಎಸ್‌ಕೆ ಅಭಿಮಾನಿಗಳಿಗಂತು ಖುಷಿಕೊಟ್ಟಿರುವುದರಲ್ಲಿ ಎರಡು ಮಾತಿಲ್ಲ