ಕಂಗನಾ ಹೇಳಿಕೆಗೆ ಕ್ಷಮೆ ಕೇಳ್ತಾರಾ ಮೋದಿ? ಎಚ್ಚರಿಕೆ ನೀಡಿದ್ರೂ ಮಾತಿನ ಭರಾಟೆ ನಿಲ್ಲಿಸದ ಕಾಂಟ್ರವರ್ಸಿ ಕ್ವೀನ್!

First Published | Sep 26, 2024, 10:27 AM IST

‘ರದ್ದಾಗಿರುವ 3 ಕೃಷಿ ಕಾಯ್ದೆಗಳನ್ನು ಮರು ಜಾರಿ ಮಾಡಬೇಕು’ ಎಂಬ ತಮ್ಮ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ, ನಟಿ ಕಂಗನಾ ರಾಣಾವತ್‌ ಆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

‘ನನ್ನ ಹೇಳಿಕೆ ವೈಯಕ್ತಿಕವಾದುದು. ಅದು ಪಕ್ಷದ ಅಭಿಪ್ರಾಯವಲ್ಲ. ನಾನು ಒಬ್ಬ ನಟಿಯಾದರೂ ಬಿಜೆಪಿ ಸದಸ್ಯೆ. ನನ್ನ ಅಭಿಪ್ರಾಯ ಕೂಡ ಬಿಜೆಪಿ ಅಭಿಪ್ರಾಯಗಳೇ ಆಗಿರಬೇಕು. ಪ್ರಧಾನಿ ನರೇಂದ್ರ ಮೋದಿ ಅವರೇ ಈ ಕಾಯ್ದೆ ರದ್ದು ಮಾಡಿದ್ದರು. ಹೀಗಾಗಿ ಈಗ ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಈ ಬಗ್ಗೆ ವಿಷಾದ ವ್ಯಕ್ತಪಡಿಸುವೆ ಹಾಗೂ ಹೇಳಿಕೆ ಹಿಂಪಡೆಯುವೆ’ ಎಂದು ಬುಧವಾರ ಹೇಳಿದ್ದಾರೆ. ಕಂಗನಾ ಹೇಳಿಕೆ ಹರ್ಯಾಣ ಚುನಾವಣೆಯಲ್ಲಿ ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಅವರು ಕ್ಷಮೆ ಕೇಳಿದ್ದಾರೆ.

Kangana

ಇತ್ತೀಚೆಗೆ ‘ರೈತರ ಪ್ರತಿಭಟನೆ ವೇಳೆ ಅತ್ಯಾಚಾರ, ಕೊಲೆ ನಡೆದಿದ್ದವು’ ಎಂದು ಕಂಗನಾ ಹೇಳಿದಾಗ ಭಾರಿ ವಿವಾದ ಉಂಟಾಗಿತ್ತು. ಆಗ ’ಪಕ್ಷದ ನೀತಿ ವಿಷಯಗಳ ಬಗ್ಗೆ ಮಾತನಾಡಬೇಡಿ’ ಎಂದು ಬಿಜೆಪಿ ಅಧ್ಯಕ್ಷರು ಕಂಗನಾಗೆ ಸೂಚಿಸಿದ್ದರು. ಆದರೂ ಕಂಗನಾ ತಮ್ಮ ಮಾತಿನ ಭರಾಟೆ ನಿಲ್ಲಿಸಿಲ್ಲ.

Tap to resize

ಕಂಗನಾ ಹೇಳಿದ್ದೇನು?:

ಮಂಗಳವಾರ ಕಾರ್ಯಕ್ರಮವೊಂದಲ್ಲಿ ಮಾತನಾಡಿದ್ದ ಕಂಗನಾ, ‘ಕೃಷಿ ಕಾಯ್ದೆಗೆ ಕೆಲ ರಾಜ್ಯಗಳಲ್ಲಿ ಮಾತ್ರ ವಿರೋಧ ವ್ಯಕ್ತವಾಗಿತ್ತು. ಈ ಕಾಯ್ದೆಗಳು ರೈತರಿಗೆ ಆರ್ಥಿಕ ಸ್ಥಿರತೆ, ರೈತರ ಅಭಿವೃದ್ಧಿ ಮತ್ತು ಕೃಷಿ ವಲಯದ ಸರ್ವತೋಮುಖ ಅಭಿವೃದ್ಧಿಯ ಗುರಿ ಹೊಂದಿದ್ದವು. ಹೀಗಾಗಿ ಅವುಗಳನ್ನು ಮರು ಜಾರಿ ಮಾಡಬೇಕು, ಮುಷ್ಕರ ಮಾಡಿದ್ದ ರೈತರು ಕೂಡ ಮರುಜಾರಿಗೆ ಒತ್ತಾಯಿಸಬೇಕು. ಇದರಿಂದ ಅವರಿಗೇ ಒಳಿತು’ ಎಂದಿದ್ದರು.

ಈ ಬಗ್ಗೆ ಕಿಡಿಕಾರಿದ್ದ ಕಾಂಗ್ರೆಸ್‌, ಇದು ಕೇಂದ್ರ ಸರ್ಕಾರ ಮರಳಿ ಕಾಯ್ದೆ ಜಾರಿಗೆ ಮುಂದಾಗಿರುವುದರ ಸುಳಿವು. ಇದಕ್ಕೆ ಮುಂಬರುವ ಹರ್ಯಾಣ ಚುನಾವಣೆಯಲ್ಲಿ ಮತದಾರರು ಸೂಕ್ತ ಉತ್ತರ ನೀಡಲಿದ್ದಾರೆ ಎಂದಿತ್ತು. ಬಿಜೆಪಿ ಕೂಡ ಪ್ರತಿಕ್ರಿಯಿಸಿ, ‘ಇದು ಕಂಗನಾ ಅವರ ವೈಯಕ್ತಿಕ ಹೇಳಿಕೆ. ಅದು ಪಕ್ಷದ್ದಲ್ಲ’ ಎಂದಿತ್ತು. ಅದರ ಬೆನ್ನಲ್ಲೇ ಕಂಗನಾ ವಿಷಾದ ವ್ಯಕ್ತಪಡಿಸಿದ್ದಾರೆ.

ಕಂಗನಾ ವಜಾ, ಮೋದಿ ಕ್ಷಮೆಗೆ ಕಾಂಗ್ರೆಸ್‌ ಆಗ್ರಹ

ಈ ನಡುವೆ ಕಂಗನಾ ಹೇಳಿಕೆ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘750 ರೈತರು ಹುತಾತ್ಮರಾದ ಬಳಿಕವೂ ಬಿಜೆಪಿ ಮತ್ತು ಕೇಂದ್ರ ಸರ್ಕಾರ ತನ್ನ ಬಹುದೊಡ್ಡ ಅಪರಾಧವನ್ನು ಅರ್ಥ ಮಾಡಿಕೊಂಡಿಲ್ಲ. ಮತ್ತೆ ಅವರೀಗ ಕಾಯ್ದೆ ಮರು ಜಾರಿ ಬಗ್ಗೆ ಮಾತನಾಡುತಿದ್ದಾರೆ. ಇದು ಬಿಜೆಪಿಯ ಒಳ ಉದ್ದೇಶ ಬಯಲು ಮಾಡಿದೆ’ ಎಂದಿದ್ದಾರೆ.

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡಿ ‘ರದ್ದಾದ 3 ಕಾಯ್ದೆ ಮರುಜಾರಿಗೆ ಅವಕಾಶ ನೀಡಲ್ಲ. ಕೃಷಿ ನೀತಿ ನಿಗದಿ ಮಾಡುವವರು ಪ್ರಧಾನಿ ಮೋದಿಯೋ ಅಥವಾ ಕಂಗನಾ ಅವರೋ? ಇದಕ್ಕೆ ಪ್ರಧಾನಿಯೇ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದ್ದಾರೆ.

ಇದೇ ವೇಳೆ, ‘ಕಂಗನಾ ಹೇಳಿಕೆ ಪಕ್ಷದ್ದಲ್ಲ ಎಂದು ಬಿಜೆಪಿ ಹೇಳಿದೆ. ಹಾಗಿದ್ದರೆ ಪಕ್ಷ ವಿರೋಧಿ ಹೇಳಿಕೆ ನೀಡಿದ್ದಕ್ಕೆ ಅವರನ್ನು ಉಚ್ಚಾಟಿಸಿ’ ಎಂದು ಕಾಂಗ್ರೆಸ್‌ ಮುಖಂಡ ಶಕ್ತಿಸಿಂಹ ಗೋಹಿಲ್‌ ಆಗ್ರಹಿಸಿದ್ದಾರೆ. ಪಂಜಾಬ್‌ನ ರೈತ ನಾಯಕ ಸರವಣ್‌ ಸಿಂಗ್‌ ಪಂದೇರ್‌ ಕಂಗನಾ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Latest Videos

click me!