ವಿಷದ ಉದ್ಯಾನ
100ಕ್ಕೂ ಹೆಚ್ಚು ವಿಷಕಾರಿ ಗಿಡಗಳಿಂದ ತುಂಬಿದ ಉದ್ಯಾನವಿದೆ ಅಂತ ಗೊತ್ತಾ? ಇಂಗ್ಲೆಂಡ್‌ನ ನಾರ್ತಂಬರ್‌ಲ್ಯಾಂಡ್‌ನಲ್ಲಿರುವ ಅಲ್ನ್‌ವಿಕ್ ಗಾರ್ಡನ್‌ನಲ್ಲಿ ಈ ವಿಷದ ಉದ್ಯಾನವಿದೆ. ಮಾದಕ ಮತ್ತು ವಿಷಕಾರಿ ಗಿಡಗಳಿಂದ ತುಂಬಿರುವ ಈ ಉದ್ಯಾನ ಪ್ರವಾಸಿಗರಿಗೆ ತೆರೆದಿರುವ ಒಂದು ಪ್ರಮುಖ ಆಕರ್ಷಣೆ!
“ಈ ಗಿಡಗಳು ಸಾಯಿಸಬಲ್ಲವು”
ಈ ಉದ್ಯಾನದ ಪ್ರವೇಶದ್ವಾರದಲ್ಲೇ ಕಪ್ಪು ಬಣ್ಣದ ಕಬ್ಬಿಣದ ದ್ವಾರದಲ್ಲಿ “ಇಲ್ಲಿರುವ ಗಿಡಗಳು ಸಾಯಿಸಬಲ್ಲವು” ಎಂಬ ಎಚ್ಚರಿಕೆ ಫಲಕವಿದೆ. ಅದರ ಪಕ್ಕದಲ್ಲಿ ತಲೆಬುರುಡೆಯ ಚಿತ್ರವೂ ಇದೆ. ಇದು ತಮಾಷೆಗಾಗಿ ಇಟ್ಟಿರುವ ಎಚ್ಚರಿಕೆಯಲ್ಲ, ನಿಜಕ್ಕೂ ಇದು ವಿಶ್ವದ ಅತ್ಯಂತ ಅಪಾಯಕಾರಿ ಉದ್ಯಾನ.
ವಿಷದ ಉದ್ಯಾನ
2005ರಲ್ಲಿ ಸ್ಥಾಪನೆಯಾದ ಈ ವಿಷದ ಉದ್ಯಾನದಲ್ಲಿ 100ಕ್ಕೂ ಹೆಚ್ಚು ವಿಷಕಾರಿ ಗಿಡಗಳಿವೆ. ಅವು ವಿಷಕಾರಿ ಮತ್ತು ಮಾದಕ ಗುಣಗಳನ್ನು ಹೊಂದಿವೆ. ಈ ಉದ್ಯಾನಕ್ಕೆ ಪ್ರವಾಸಿಗರನ್ನು ಬಿಡುವ ಮುನ್ನ, ಅವರಿಗೆ ಸಣ್ಣದೊಂದು ಸುರಕ್ಷತಾ ಮಾಹಿತಿ ನೀಡಲಾಗುತ್ತದೆ. ಯಾವುದನ್ನೂ ಮುಟ್ಟಬಾರದು, ರುಚಿ ನೋಡಬಾರದು, ವಾಸನೆ ತೆಗೆದುಕೊಳ್ಳಬಾರದು ಎಂದು ಎಚ್ಚರಿಸಲಾಗುತ್ತದೆ. ಆದರೂ ಕೆಲವರು ವಿಷಕಾರಿ ವಾಸನೆ ತೆಗೆದುಕೊಂಡು ಮೂರ್ಛೆ ಹೋಗಿರುವ ಬಗ್ಗೆ ವರದಿಗಳಿವೆ.
ನಾರ್ತಂಬರ್‌ಲ್ಯಾಂಡ್ ವಿಷದ ಉದ್ಯಾನ
ಇಲ್ಲಿ ಬೆಳೆಯುವ ಅಪಾಯಕಾರಿ ಗಿಡಗಳಲ್ಲಿ ಒಂದು ಮಾಂಕ್ಸ್‌ಹೂಡ್ (Monkshood). ಇದರಲ್ಲಿರುವ ಅಕೋನಿಟೈನ್, ನ್ಯೂರೋಟಾಕ್ಸಿನ್, ಕಾರ್ಡಿಯೋ ಟಾಕ್ಸಿನ್‌ಗಳು ಬಲಿಷ್ಠ ವಿಷಗಳಾಗಿವೆ. ಅತಿ ಹೆಚ್ಚು ವಿಷಕಾರಿಯಾಗಿರುವ ಇನ್ನೊಂದು ಗಿಡ ರಿಸಿನ್ (Ricin). ಈ ಗಿಡದಲ್ಲಿ ರಿಸಿನ್ ಎಂಬ ವಿಷವಿದೆ.
ಅಲ್ನ್‌ವಿಕ್ ಉದ್ಯಾನ
ವಿಷದ ಉದ್ಯಾನದಲ್ಲಿರುವ ಪ್ರತಿಯೊಂದು ವಿಷಕಾರಿ ಗಿಡವು ಹೇಗೆ ಪ್ರಾಣ ತೆಗೆಯುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹೊರಗಿರುವ ಎಚ್ಚರಿಕೆ ಫಲಕ ನೋಡಿಯೇ ಹೆದರಿದರೆ, ಈ ಉದ್ಯಾನದ ಒಳಗೆ ಹೋಗದಿರುವುದೇ ಒಳ್ಳೆಯದು. ಆದರೆ, ಒಂದು ಉದ್ಯಾನದಲ್ಲಿ ಹೆಚ್ಚಿನ ಗಿಡಗಳು ಪ್ರಾಣಹಾನಿಕಾರಕವಾಗಿರುವುದು ಕುತೂಹಲಕಾರಿಯಾಗಿದೆ ಅಲ್ವಾ?