ಮಹಾರಾಷ್ಟ್ರದ ಚಹರೆಯನ್ನೇ ಬದಲಿಸಲಿರುವ ಸಮೃದ್ಧಿ ಮಹಾಮಾರ್ಗ ಅನಾವರಣ ಮಾಡಲಿರುವ ಮೋದಿ!

First Published Dec 10, 2022, 4:13 PM IST

ಮುಂಬೈ (ಡಿ.10): ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಹಾರಾಷ್ಟ್ರಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ನಾಗ್ಪುರದಿಂದ ಶಿರಡಿಗೆ ಸಂಪರ್ಕ ನೀಡಲಿರುವ ಸಮೃದ್ಧಿ ಮಹಾಮಾರ್ಗದ ಮೊದಲ ಹಂತವನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಎಕ್ಸ್‌ಪ್ರೆಸ್‌ ವೇಯ ಮೊದಲ ಹಂತದ ಉದ್ದ 520 ಕಿಲೋಮೀಟರ್‌ ಆಗಿದೆ. ಒಟ್ಟಾರೆ ಸಮೃದ್ಧಿ ಮಹಾಮಾರ್ಗದ ಉದ್ಧ 701 ಕಿಲೋಮೀಟರ್‌ಗಳು. ಅಂದಾಜು 55 ಸಾವಿರ ಕೋಟಿ ವೆಚ್ಚದಲ್ಲಿ ಇದರ ನಿರ್ಮಾಣ ಮಾಡಲಾಗುತ್ತಿದೆ. ಮಹಾರಾಷ್ಟ್ರದ ಅಭಿವೃದ್ಧಿಯಲ್ಲಿ ಈ ಮಹಾಮಾರ್ಗ ಹೊಸ ದಿಕ್ಕನ್ನು ಸೃಷ್ಟಿಸುವುದು ಮಾತ್ರವಲ್ಲ, ಪ್ರವಾಸೋದ್ಯಮ ಚಟುವಟಿಕೆಗಳಿಗೂ ದೊಡ್ಡ ಸಹಾಯ ನೀಡಲಿದೆ. ಚಿತ್ರಗಳೊಂದಿಗೆ ಸಮೃದ್ಧಿ ಮಹಾಮಾರ್ಗದ ವಿವರಗಳನ್ನು ನೀಡಲಾಗಿದೆ.
 

ಭಾರತದ ಅತೀ ಉದ್ದದ ಎಕ್ಸ್‌ಪ್ರೆಸ್‌ ವೇಗಳಲ್ಲಿ ಸಮೃದ್ಧಿ ಮಹಾಮಾರ್ಗ ಕೂಡ ಇಂದಾಗಿದೆ. ಇದು ಮಹಾರಾಷ್ಟ್ರದ 10 ಜಿಲ್ಲೆಗಳನ್ನು ದಾಟಿ ಹೋಗುತ್ತದೆ. ಅದರೊಂದಿಗೆ ಪ್ರಮುಖ ನಗರಗಾದ ಅಮರಾವತಿ, ಔರಂಗಾಬಾದ್‌ ಹಾಗೂ ನಾಸಿಕ್‌ ಪ್ರದೇಶಗಳನ್ನು ದಾಟಿ ಹೋಗುತ್ತದೆ.
 

ಎಕ್ಸ್‌ಪ್ರೆಸ್‌ವೇ ಹತ್ತಿರದ 14 ಜಿಲ್ಲೆಗಳಿಗೆ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ವಿದರ್ಭ, ಮರಾಠವಾಡ ಮತ್ತು ಉತ್ತರ ಮಹಾರಾಷ್ಟ್ರದ ಸುಮಾರು 24 ಜಿಲ್ಲೆಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.
 

ಸಮೃದ್ಧಿ ಮಹಾಮಾರ್ಗ್ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ, ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ ಮತ್ತು ಅಜಂತಾ ಎಲ್ಲೋರಾ ಗುಹೆಗಳು, ಶಿರಡಿ, ವೆರುಲ್, ಲೋನಾರ್ ಮುಂತಾದ ಪ್ರವಾಸಿ ಸ್ಥಳಗಳನ್ನು ಸಂಪರ್ಕಿಸುತ್ತದೆ.
 

ನಿರ್ಮಾಣ ಪೂರ್ಣಗೊಂಡ ನಂತರ, ಸಮೃದ್ಧಿ ಮಹಾಮಾರ್ಗ್ ಮುಂಬೈನಿಂದ ನಾಗ್ಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. 120 ಮೀಟರ್ ಅಗಲದ ಈ ಎಕ್ಸ್‌ಪ್ರೆಸ್‌ವೇಯಲ್ಲಿ ಎಂಟು ಲೇನ್‌ಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ನಾಗ್ಪುರದಿಂದ ಮುಂಬೈಗೆ 8 ಗಂಟೆಗಳಲ್ಲಿ ಪ್ರಯಾಣ ಪೂರ್ಣಗೊಳ್ಳಲಿದೆ.
 

ಸಮೃದ್ಧಿ ಹೆದ್ದಾರಿಯ ಪ್ರತಿ 40-50 ಕಿಲೋಮೀಟರ್‌ಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಹೆದ್ದಾರಿಯಲ್ಲಿ ಸಂಚಾರ ನಿರ್ವಹಣೆಗೆ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಅಳವಡಿಸಲಾಗಿದೆ.

ಸಮೃದ್ಧಿ ಮಹಾಮಾರ್ಗದ ಮೊದಲ ಹಂತದಲ್ಲಿ, ನಾಗಪುರವನ್ನು ಶಿರಡಿಗೆ ಸಂಪರ್ಕಿಸಲಾಗಿದೆ. ಇದರಿಂದಾಗ ನಾಗ್ಪರದಿಂದ ಶಿರಡಿ ಪ್ರಯಾಣವನ್ನು ಈಗ 10 ಗಂಟೆಗಳ ಬದಲು ಬರೀ 5 ಗಂಟೆಗಳಲ್ಲಿ ಮಾಡಬಹುದು. ನಾಗ್ಪುರದಿಂದ ಶಿರಡಿಗೆ ಹೋಗಲು 900 ರೂಪಾಯಿ ಟೋಲ್ ಪಾವತಿಸಬೇಕಾಗುತ್ತದೆ.
 

ಸಮೃದ್ಧಿ ಮಹಾಮಾರ್ಗ್ ದೇಶದ ಅತ್ಯಂತ ಹೈಟೆಕ್ ಹೆದ್ದಾರಿಯಾಗಿದೆ. ಅದರ ಇಂಟರ್ ಚೇಂಜ್ ಬಳಿ 35-40 ಹೆಕ್ಟೇರ್ ಭೂಮಿಯಲ್ಲಿ ಸೌರ ವಿದ್ಯುತ್ ಯೋಜನೆಯನ್ನು ಸ್ಥಾಪಿಸಲಾಗುತ್ತಿದೆ. ಇದು 161 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ.

ಸಮೃದ್ಧಿ ಹೆದ್ದಾರಿಯಲ್ಲಿ ಗರಿಷ್ಠ 150ಕಿಮೀ/ಗಂ ವೇಗದಲ್ಲಿ ಓಡಿಸಲು ವಿನ್ಯಾಸಗೊಳಿಸಲಾಗಿದೆ. 8 ಪ್ರಯಾಣಿಕರ ಆಸನಗಳಿರುವ ವಾಹನಗಳಿಗೆ ಗುಡ್ಡಗಾಡು ಪ್ರದೇಶವಲ್ಲದ ಪ್ರದೇಶಗಳಲ್ಲಿ ಗಂಟೆಗೆ 120 ಕಿ.ಮೀ ಮತ್ತು 100 ಕಿ.ಮೀ ವೇಗದ ಮಿತಿಯನ್ನು ರಾಜ್ಯ ಸರ್ಕಾರ ನಿಗದಿಪಡಿಸಿದೆ.
 

click me!