ಭಾರತೀಯ ರೈಲ್ವೇ ನಿಲ್ದಾಣಗಳಲ್ಲಿ ಹಲವು ವಿಶೇಷತೆಗಳಿವೆ. ಗಡಿ ಬಳಿ ಇರುವ ಭಾರತದ ನಿಲ್ದಾಣಕ್ಕೆ ತೆರಳಲು ಪಾಸ್‌ಪೋರ್ಟ್ ಬೇಕು, ವಿಚಿತ್ರ ಹೆಸರಿನ ರೈಲ ನಿಲ್ದಾಣ ಸೇರಿದಂತೆ ಹಲವು ಅಚ್ಚರಿ ನಿಲ್ದಾಣಗಳಿವೆ. ಈ ಪೈಕಿ ಒಂದು ನಿಲ್ದಾಣ ಸ್ಪೆಷಲ್. ಸಾಮಾನ್ಯವಾಗಿ ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಎರಡು ಬದಿಗಳಲ್ಲಿ ನಿಂತರೂ ಒಂದೇ ನಿಲ್ದಾಣ. ಅಂದರೆ ರೈಲು ತೆರಳುವ ಹಾಗೂ ಆಗಮಿಸುವ ಎರಡು ಬದಿಗಳ ಒಂದೇ ನಿಲ್ದಾಣ. ಆದರೆ ಇಲ್ಲಿ ಒಂದೇ ಸ್ಥಳ, ಒಂದೇ ಪ್ಲಾಟ್‌ಫಾರ್ಮ್. ಆದರೆ ಎರಡು ರೈಲು ನಿಲ್ದಾಣವಿದೆ. ರೈಲು ಪ್ಲಾಟ್‌ಫಾರ್ಮ್‌ನ ಎರಡೂ ಬದಿಗಳು ಬೇರೆ ಬೇರೆ ನಿಲ್ದಾಣ.
ಇದು ಮಹಾರಾಷ್ಟ್ರದ ಅಹಮ್ಮದ್‌ನಗರ ಜಿಲ್ಲೆಯಲ್ಲಿರುವ ವಿಶೇಷ ರೈಲು ನಿಲ್ದಾಣ. ಇಲ್ಲಿ ರೈಲು ಹಳಿಯ ಒಂದು ಭಾಗದಲ್ಲಿ ನಿಂತರೆ ಶ್ರೀರಾಂಪುರ ರೈಲು ನಿಲ್ದಾಣ, ಹಳಿ ದಾಟಿ ಮತ್ತೊಂದು ಬದಿಯಲ್ಲಿ ನಿಂತರೆ ಬೇಲಾಪುರ್ ರೈಲು ನಿಲ್ದಾಣ. ಇದು ಒಂದೇ ಪ್ಲಾಟ್‌ಫಾರ್ಮ್, ಆದರೆ ನಡುವಿನಲ್ಲಿ ಸಾಗುವ ರೈಲು ಹಳಿ ಬೇರೆ ಬೇರೆ ನಿಲ್ದಾಣವಾಗಿ ವಿಭಾಗಿಸಿದೆ.
ಇಲ್ಲಿ ಯಾವ ನಿಲ್ದಾಣಕ್ಕೆ ಟಿಕೆಟ್ ಪಡೆಯಬೇಕು ಅನ್ನೋ ಗೊಂದಲ ಹಲವು ಪ್ರಯಾಣಿಕರಲ್ಲಿ ಮೂಡುವುದು ಸಹಜ. ಕಾರಣ ಎರಡೂ ನಿಲ್ದಾಣಕ್ಕೆ ಒಂದೇ ದೂರ, ಒಂದೇ ಟಿಕೆಟ್ ದರ. ಇಳಿಯುವಾಗ ಅಥವಾ ಹತ್ತುವಾಗ ರೈಲು ಯಾವ ಭಾಗದಿಂದ ಬಂದಿದೆ ಅನ್ನೋದರ ಮೇಲೆ ನಿರ್ಧಾರವಾಗುತ್ತದೆ.
ಎರಡು ಬದಿಯಲ್ಲಿ ಬೇರೆ ಬೇರೆ ನಿಲ್ದಾಣದ ಸೈನ್ ಬೋರ್ಡ್‌ಗಳಿವೆ. ಇದಕ್ಕೆ ಮುಖ್ಯ ಕಾರಣ ಭೌಗೋಳಿಕ ಪ್ರದೇಶದ ವಿಂಗಡನೆಯಾಗಿದೆ. ರೈಲು ಹಳಿಯ ಒಂದು ಬದಿ ಶ್ರೀರಾಮಪುರ ಪ್ರದೇಶವಾಗಿದ್ದರೆ, ಮತ್ತೊಂದು ಬದಿ ಬೇಲಾಪುರ್. ಇದರ ಗಡಿ ರೇಖೆಯಿಂದ ರೈಲು ಹಳಿ ಹಾದು ಹೋಗಿದೆ. ಹೀಗಾಗಿ ಎರಡು ಬೇರೆ ಬೇರೆ ರೈಲು ನಿಲ್ದಾಣವಾಗಿ ಗುರುತಿಸಿಕೊಂಡಿದೆ.
ಇದೇ ರೀತಿ ಮಹಾರಾಷ್ಟ್ರದ ನವಪುರ ರೈಲು ನಿಲ್ದಾಣದಲ್ಲಿ ಒಂದು ವಿಶೇಷತೆ ಇದೆ. ಈ ರೈಲು ನಿಲ್ದಾಣದ ಅರ್ಧ ಭಾಗ ಮಹಾರಾಷ್ಟ್ರಕ್ಕೆ ಸೇರಿದ್ದರೆ, ಮತ್ತರ್ಧ ಭಾಗ ಗುಜರಾತ್‌ಗೆ ಸೇರಿದೆ. ಈ ನಿಲ್ದಾಣದಲ್ಲಿ ರೈಲು ಅನೌನ್ಸ್‌ಮೆಂಟ್, ಹಿಂದಿ, ಇಂಗ್ಲೀಷ್, ಮರಾಠಿ ಹಾಗೂ ಗುಜರಾತಿ ಭಾಷೆಗಳಲ್ಲಿ ಮಾಡಲಾಗುತ್ತದೆ.