ಕೇರಳದ ಭೀಕರ ವಯನಾಡು ದುರಂತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ದುರಂತ ಸ್ಥಳಗಳಿಗೆ ಬೇಟಿ ನೀಡಿದ ಮೋದಿ, ದುರಂತದ ಬೀಕರತೆಯನ್ನು ಪರಿಶೀಲಿಸಿದ್ದಾರೆ.
ಭೂಕುಸಿತದಿಂದ ತೀವ್ರವಾಗಿ ಹಾನಿಯಾಗಿರುವ ವಯನಾಡಿನ ಪುಂಚಿರಿಮಟ್ಟಂ, ಚೂರ್ಮಲಾ ಹಾಗೂ ಮುಂಡಕೈ ಪ್ರದೇಶಗಳಿಗೆ ಮೋದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದೇ ವೇಳೆ ಎಷ್ಟು ಮಕ್ಕಳು ಈ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ಕೇಳಿದ್ದಾರೆ. ಇಷ್ಟೇ ಅಲ್ಲ ಸಾವು ನೋವು ಮೋದಿಯನ್ನು ಭಾವುಕರನ್ನಾಗಿ ಮಾಡಿದೆ.
ನರೇಂದ್ರ ಮೋದಿ ಜೊತೆ ಕೇಂದ್ರ ಸಚಿವ, ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ್ ಗೋಪಿ, ಕೇರಳ ರಾಜ್ಯ ಸರ್ಕಾರದ ಅಧಿಕಾರಿಗಳ ತಂಡ ತೆರಳಿ ದುರಂತ ಸ್ಥಳದ ಮಾಹಿತಿ ನೀಡಿದರು.
ಭೂಕುಸಿತದಿಂದ ಪ್ರಾಣ ಕಳೆದುಕೊಂಡ ಗ್ರಾಮದ ನಿವಾಸಿಗಳ ಕುರಿತು ಮಾಹಿತಿಯನ್ನು ಮೋದಿ ಪಡೆದುಕೊಂಡಿದ್ದರೆ. ಇದೇ ವೇಳೆ ಅಂದಾಜು ನಷ್ಟದ ಕುರಿತ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.
ದುರಂತ ಸ್ಥಳದಲ್ಲಿನ ಪರಿಹಾರ ಕಾರ್ಯಗಳ ಕುರಿತು ಮೋದಿ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಮೋದಿ ದುರಂತದಲ್ಲಿ ಬದುಕುಳಿದವರ ಜೊತೆ ಮಾತನಾಡಿದ್ದಾರೆ.
ದುರಂತದಿಂದ ಆಪ್ತರನ್ನು ಕಳೆದುಕೊಂಡ ಜರ್ಝರಿತವಾಗಿರುವ ಕುಟುಂಬ ಸದಸ್ಯರ ಬೇಟಿಯಾದ ಮೋದಿ, ಅವರಿಗೆ ಧೈರ್ಯ ತುಂಬಿದ್ದಾರೆ. ಜೊತೆಗೆ ಬದುಕು ಕಟ್ಟಿಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ವಯನಾಡಿನ ಸರ್ಕಾರಿ ಕೇಂದ್ರಗಳಲ್ಲಿ ಉಳಿದುಕೊಂಡಿರುವ ಹಲವರು ಮೋದಿ ಜೊತೆ ನೋವು ಹಂಚಿಕೊಂಡು ಭಾವುಕರಾಗಿದ್ದಾರೆ. ಇದೇ ವೇಳೆ ಘಟನೆ ಭೀಕರತೆಯನ್ನೂ ವಿವರಿಸಿದ್ದಾರೆ.
ಇದೇ ವೇಳೆ ಮೋದಿ ಆಸ್ಪತ್ರೆ ವೈದ್ಯರು, ನರ್ಸ್ ಸೇರಿದಂತೆ ಸಿಬ್ಬಂದಿಗಳನ್ನು ಅಭಿನಂದಿಸಿದ್ದಾರೆ. ತುರ್ತು ಸೇವೆ ಒದಗಿಸುವ ಮೂಲಕ ಅಮೂಲ್ಯ ನೆರವನ್ನು ಸ್ಮರಿಸಿದ್ದಾರೆ.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿದು ಬಳಿಕ ಹೆಲಿಕಾಪ್ಟರ್ ಮೂಲಕ ವೈಮಾನಿಕ ವಯನಾಡಿನ ದುರಂತ ಸ್ಥಳಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದರು.
ವೈಮಾನಿಕ ಸಮೀಕ್ಷೆ ವೇಳೆ ಮೋದಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಸೇರಿದಂತೆ ಕೆಲ ಅಧಿಕಾರಿಗಳು ಸಾಥ್ ನೀಡಿದ್ದರು.