
ರೇಖಾ ಗುಪ್ತಾ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶಾಲಿಮಾರ್ ಬಾಗ್ ಕ್ಷೇತ್ರದಿಂದ 29,595 ಮತಗಳ ಅಂತರದಿಂದ ಗೆದ್ದು ರೇಖಾ ಗುಪ್ತಾ ಹೊಸ ದಾಖಲೆ ಸೃಷ್ಟಿಸಿದ್ದಾರೆ. 1974 ಜುಲೈ 19 ರಂದು ಜನಿಸಿದ ರೇಖಾ ಗುಪ್ತಾ, ದೆಹಲಿ ವಿಶ್ವವಿದ್ಯಾಲಯದ ದೌಲತ್ ರಾಮ್ ಕಾಲೇಜಿನಲ್ಲಿ ತಮ್ಮ ರಾಜಕೀಯ ಪಯಣವನ್ನು ಪ್ರಾರಂಭಿಸಿದರು. 1992 ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸೇರಿದ ಅವರು, 1996 ರಲ್ಲಿ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ (DUSU) ಅಧ್ಯಕ್ಷರಾಗಿ ಆಯ್ಕೆಯಾದರು. 2007 ರಲ್ಲಿ ಅವರು ಮುಖ್ಯ ರಾಜಕೀಯಕ್ಕೆ ಪ್ರವೇಶಿಸಿದರು. ನಂತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಕೌನ್ಸಿಲರ್ ಆಗಿ ಆಯ್ಕೆಯಾದರು. ಮಹಿಳಾ ಕಲ್ಯಾಣ ಮತ್ತು ಮಕ್ಕಳ ಅಭಿವೃದ್ಧಿಗೆ ವಿಶೇಷ ಗಮನ ನೀಡಿದರು. ನಂತರ ಅವರು ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಅತಿಷಿ ಮಾರ್ಲೆನಾ ಸಿಂಗ್: ದೆಹಲಿ ಮಾಜಿ ಸಿಎಂ ಆಪ್ ಮುಖ್ಯಸ್ಥ ಕೇಜ್ರಿವಾಲ್ ಬಂಧನದ ನಂತರ ಅನಿರೀಕ್ಷಿತವಾಗಿ ಅತಿಷಿ ಮಾರ್ಲೆನಾ ಮುಖ್ಯಮಂತ್ರಿಯಾದರು. ಇವರು ಸೆಪ್ಟೆಂಬರ್ 21, 2024 ರಿಂದ ಫೆಬ್ರವರಿ 8, 2025 ರವರೆಗೆ ದೆಹಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಆಮ್ ಆದ್ಮಿ ಪಾರ್ಟಿ (AAP) ಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದರು ಅತಿಸಿ. ದೆಹಲಿಯಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಸಾರ್ವಜನಿಕ ಸೇವೆಗಳನ್ನು ಸುಧಾರಿಸುವ ನೀತಿಗಳನ್ನು ಅನುಷ್ಠಾನಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಅವರ ಆಡಳಿತವು ಸುಧಾರಣೆಗಳು ಮತ್ತು ಸಮಗ್ರ ಅಭಿವೃದ್ಧಿಗೆ ಬಲವಾದ ನಾಂದಿ ಹಾಡಿತು.
ಮಮತಾ ಬ್ಯಾನರ್ಜಿ: ಮಮತಾ ಬ್ಯಾನರ್ಜಿ 2011 ರಲ್ಲಿ ಪಶ್ಚಿಮ ಬಂಗಾಳದ ಮೊದಲ ಮುಖ್ಯಮಂತ್ರಿಯಾಗಿ ನೇಮಕಗೊಂಡರು. ಸಾಮಾಜಿಕ ಕಲ್ಯಾಣ ಮತ್ತು ಬಡತನ ನಿರ್ಮೂಲನೆ ಕಾರ್ಯಸೂಚಿಗಳೊಂದಿಗೆ ಮಮತಾ ರಾಜಕೀಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಮಹಿಳೆಯರು ಮತ್ತು ದುರ್ಬಲ ವರ್ಗಗಳಿಗಾಗಿ ಅವರು ಮಾಡಿದ ಪ್ರಯತ್ನಗಳಿಗೆ ಸಾರ್ವಜನಿಕ ಮನ್ನಣೆ ದೊರೆಯಿತು. ಅವರ ನಾಯಕತ್ವವು ಸಾರ್ವಜನಿಕ ಕಲ್ಯಾಣಕ್ಕೆ ಅನುಕೂಲಕರವಾಗಿ ಮಾರ್ಪಟ್ಟಿತು, ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ಮಮತಾ ಬ್ಯಾನರ್ಜಿ ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. 1991 ರಲ್ಲಿ ರಾಜೀವ್ ಗಾಂಧಿ ಹತ್ಯೆಯ ನಂತರ ಕಾಂಗ್ರೆಸ್ ತೊರೆದು 1998 ರಲ್ಲಿ ತೃಣಮೂಲ ಕಾಂಗ್ರೆಸ್ ಸ್ಥಾಪಿಸಿದರು. ಅತ್ಯಂತ ಶಕ್ತಿಶಾಲಿ ನಾಯಕಿಯಾಗಿ ಹೆಸರಾಗಿದ್ದರೂ ಮಮತಾ ಜೀವನಶೈಲಿ ಸಾಮಾನ್ಯವಾಗಿದೆ. ಯಾವಾಗಲೂ ಬಿಳಿ ಸೀರೆ ಮತ್ತು ಹವಾಯಿ ಚಪ್ಪಲಿಗಳನ್ನು ಧರಿಸುವುದು ಅವರ ವಿಶೇಷತೆ. ಮಮತಾ ಭಾರತದ ಮೊದಲ ಮಹಿಳಾ ರೈಲ್ವೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಮಮತಾ ಬ್ಯಾನರ್ಜಿ ತಮ್ಮ ಜೀವನವನ್ನು ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಮೀಸಲಿಟ್ಟಿದ್ದಾರೆ. ಇಲ್ಲಿಯವರೆಗೆ ಅವರು ಮದುವೆಯಾಗಿಲ್ಲ.
ಆನಂದಿ ಬೆನ್ ಪಟೇಲ್: ಆನಂದಿ ಬೆನ್ ಪಟೇಲ್ 2014 ರಿಂದ 2016 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರ ಆಡಳಿತದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕೆ ವಿಶೇಷ ಗಮನ ನೀಡಿದರು. ಗ್ರಾಮಗಳಲ್ಲಿ ಮೂಲಸೌಕರ್ಯಗಳನ್ನು ಬಲಪಡಿಸಲು ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಸುಧಾರಿಸಲು ಶ್ರಮಿಸಿದರು. ಮುಖ್ಯಮಂತ್ರಿ ಹುದ್ದೆಯ ಅವಧಿ ಮುಗಿದ ನಂತರ, ಉತ್ತರ ಪ್ರದೇಶದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು.
ವಸುಂಧರಾ ರಾಜೇ: ರಾಜಸ್ಥಾನದ ಪ್ರಮುಖ ನಾಯಕಿಯರಲ್ಲಿ ಒಬ್ಬರು. ಅವರು 2003 ರಿಂದ 2008 ರವರೆಗೆ ಮತ್ತು 2013 ರಿಂದ 2018 ರವರೆಗೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರ ನಾಯಕತ್ವವು ಆರ್ಥಿಕ ಸುಧಾರಣೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಮಹಿಳಾ ಕಲ್ಯಾಣದ ಮೇಲೆ ಕೇಂದ್ರೀಕರಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಸುಧಾರಿಸಲು ಅವರು ಬಹಳಷ್ಟು ಶ್ರಮಿಸಿದರು.
ಉಮಾ ಭಾರತಿ: ಉಮಾ ಭಾರತಿ 2003 ರಿಂದ 2004 ರವರೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರ ಅಧಿಕಾರಾವಧಿ ಕಡಿಮೆಯಿದ್ದರೂ ಮೂಲಸೌಕರ್ಯ ಅಭಿವೃದ್ಧಿ, ಜಲ ಸಂರಕ್ಷಣೆ ಮತ್ತು ಕೃಷಿ ನೀತಿಗಳನ್ನು ಸುಧಾರಿಸಲು ವಿಶೇಷವಾಗಿ ಶ್ರಮಿಸಿದರು. ಇವು ರಾಜ್ಯದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದವು. ಉಮಾ ಭಾರತಿ ತಮ್ಮ ಜೀವನವನ್ನು ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಮೀಸಲಿಟ್ಟಿದ್ದಾರೆ. ಅವರು ಮದುವೆಯಾಗದೆ ಹಿಂದುತ್ವ ಪ್ರಚಾರದೊಂದಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಶೀಲಾ ದೀಕ್ಷಿತ್: ಶೀಲಾ ದೀಕ್ಷಿತ್ 1998 ರಿಂದ 2013 ರವರೆಗೆ ದೆಹಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. 15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ದಾಖಲೆ ನಿರ್ಮಿಸಿದ್ದಾರೆ. ಅವರ ನಾಯಕತ್ವದಲ್ಲಿ ದೆಹಲಿ ಆಧುನಿಕ ನಗರವಾಗಿ ಮಾರ್ಪಟ್ಟಿತು. ವಿಶೇಷವಾಗಿ ಮೆಟ್ರೋ ರೈಲು ವ್ಯವಸ್ಥೆಯಲ್ಲಿ ಬದಲಾವಣೆಗಳಿಗೆ ನಾಂದಿ ಹಾಡಿದರು. ಅವರು ನಗರಾಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಮೇಲೆ ವಿಶೇಷ ಗಮನ ಹರಿಸಿ ದೆಹಲಿಯನ್ನು ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ನಗರಗಳಲ್ಲಿ ಒಂದನ್ನಾಗಿ ಮಾಡಿದರು. ಶೀಲಾ ದೀಕ್ಷಿತ್ ಮಾಡಿದ ಕೆಲಸಗಳು ದೆಹಲಿಯ ಪ್ರಗತಿಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಸುಷ್ಮಾ ಸ್ವರಾಜ್: ಸುಷ್ಮಾ ಸ್ವರಾಜ್ 1998 ರಲ್ಲಿ ಸ್ವಲ್ಪ ಕಾಲ ದೆಹಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಆದರೆ, ಅವರು ನಂತರದ ರಾಜಕೀಯ ಜೀವನದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬೆಳೆದು ಕೇಂದ್ರ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದರು. ವಿಶೇಷವಾಗಿ, 2014 ರಿಂದ 2019 ರವರೆಗೆ ಭಾರತದ ವಿದೇಶಾಂಗ ಸಚಿವರಾಗಿ ಹೆಚ್ಚು ಜನಪ್ರಿಯತೆ ಗಳಿಸಿದರು. ತಮ್ಮ ಸಮರ್ಥ ನಾಯಕತ್ವದಿಂದ ಜಗತ್ತಿನಾದ್ಯಂತ ಭಾರತೀಯರಿಗೆ ಸಹಾಯ ಮಾಡಿ, ಉತ್ತಮ ಸಾರ್ವಜನಿಕ ನಾಯಕಿಯಾಗಿ ಗುರುತಿಸಲ್ಪಟ್ಟರು.