ಭಾರತೀಯ ರೈಲ್ವೇ ಇತಿಹಾಸದಲ್ಲಿ ಕಳೆದ ಕೆಲ ವರ್ಷ ಮಹತ್ವದ ಅಭಿವೃದ್ಧಿಯಾಗಿದೆ. ರೈಲು ಯೋಜನೆ ವಿಸ್ತರಣೆ, ಹೊಸ ರೈಲು ಯೋಜನೆ, ವಂದೇ ಭಾರತ್ ಸೇರಿದಂತೆ ಹೊಸ ಹೊಸ ರೈಲುಗಳು ಸೇರ್ಪಡೆಗೊಂಡಿದೆ. ಇನ್ನು ರೈಲು ಸೇವಾ ಮಟ್ಟ, ದರ್ಜೆ ಕೂಡ ಅಭಿವೃದ್ಧಿಯಾಗಿದೆ. ಇದೀಗ ಭಾರತೀಯ ರೈಲ್ವೇ ಮಹತ್ವದ ಘೋಷಣೆ ಮಾಡಿದೆ.
ಭಾರತೀಯ ರೈಲ್ವೇ ಬರೋಬ್ಬರಿ 50 ಹೊಸ ಅಮೃತ ಭಾರತ್ 2.0 ರೈಲುಗಳು ಸೇವೆ ನೀಡಲಿದೆ. ಈ ರೈಲುಗಳಲ್ಲಿ 12ಕ್ಕೂ ಹೆಚ್ಚು ಅಪ್‌ಗ್ರೇಡ್ ಫೀಚರ್ಸ್ ಇರಲಿದೆ. ಈ ಕುರಿತು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 2024ರಲ್ಲಿ ಮೋದಿ ಉದ್ಘಾಟಿಸಿದ ಅಮೃತ ಭಾರತ್ ರೈಲು ಇದೀಗ ಹೊಸ ಅಪ್‌ಗ್ರೇಡ್, ಹೆಚ್ಚುವರಿ ಸೇವೆಯೊಂದಿಗೆ ಅಮೃತ್ ಭಾರತ್ 2.0 ರೈಲುಗಳು ಸೇವೆ ಆರಂಭಿಸಲಿದೆ ಎಂದಿದ್ದಾರೆ.
ದೇಶದ ಎಲ್ಲಾ ಭಾಗಕ್ಕೂ ಸಂಪರ್ಕ ಸೇವೆ ಲಭ್ಯವಾಗಬೇಕು. ಪ್ರಯಾಣಿಕರು ಸುಲಭ ಹಾಗೂ ಸರಳವಾಗಿ ರೈಲು ಪ್ರಯಾಣ ಮಾಡುವಂತಿರಬೇಕು. ಇದಕ್ಕೂ ಮುಖ್ಯವಾಗಿ ಕಡಿಮೆ ದರದಲ್ಲಿ ಉತ್ತಮ ದರ್ಜೆಯ ಸೌಲಭ್ಯಗಳು ಪ್ರಯಾಣಿಕರಿಗೆ ಲಭ್ಯವಾಗಬೇಕು ಅನ್ನೋ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಮೃತ ಭಾರತ್ 2.0 ರೈಲುಗಳು ಟ್ರ್ಯಾಕ್‌ಗೆ ಇಳಿಯಲಿದೆ.
2025ರ ಆರಂಭದಿಂದ ಮುಂದಿನ 2 ವರ್ಷಗಳಲ್ಲಿ ಈ ಅಮೃತ ಭಾರತ್ 2.0 ರೈಲುಗಳು ಹಂತ ಹಂತವಾಗಿ ಸೇವೆ ಆರಂಭಿಸಲಿದೆ. ಶೀಘ್ರದಲ್ಲೇ 2.0 ರೈಲು ಸೇವೆಗಳು ಆರಂಭಗೊಳ್ಳಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಅಮೃತ್ ಭಾರತ್ 2.0 ಯೋಜನೆಯ ಎಲ್ಲಾ ರೈಲುಗಳು ಭಾರತ ICF ಫ್ಯಾಕ್ಟರಿಯಲ್ಲಿ ಉತ್ಪಾದನೆಯಾಗುತ್ತಿದೆ.
ಹೊಸ ರೈಲುಗಳಲ್ಲಿ 12 ಅಪ್‌ಗ್ರೇಡ್ ಫೀಚರ್ಸ್ ಇದೆ. ಈ ಪೈಕಿ ಸೆಮಿ ಆಟೋಮ್ಯಾಟಿಕ್ ಕಪ್ಲರ್ಸ್, ಅತ್ಯಾಧನಿಕ ಶೌಚಾಲಯ, ಎಕಾನಮಿಕ್ ಸೀಟು ಹಾಗೂ ಬರ್ತ್, ತುರ್ತು ಸಂವಹನಕ್ಕೆ ಟಾಕ್ ಬ್ಯಾಕ್, ವಂದೇ ಭಾರತ್ ರೀತಿಯ ಲೈಟಿಂಗ್ ಸಿಸ್ಟಮ್, ಅತ್ಯಾಧುನಿಕ ಪ್ಯಾಂಟ್ರಿ ಸೇರಿದಂತೆ ಹಲವು ವಿಶೇಷತೆಗಳು ಈ ರೈಲಿನಲ್ಲಿ ಇರಲಿದೆ. ಸದ್ಯ ಈ ರೈಲುಗಳ ಸೇವೆ ಆರಂಭ, ಮಾರ್ಗದ ವಿವರೆಗಳು ಬಹಿರಂಗವಾಗಿಲ್ಲ. ಶೀಘ್ರದಲ್ಲೇ ರೈಲು ಸೇವೆ ಆರಂಭವಾಗಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಬಡ ಹಾಗೂ ಮಧ್ಯವರ್ಗದ ಪ್ರಯಾಣಿಕರಿಗಾಗಿ ವಿಶೇಷವಾಗಿ ಅಮೃತ ಭಾರತ್ 2.0 ರೈಲು ಯೋಜನೆ ನೀಡಲಾಗುತ್ತದೆ. ಕೈಗೆಟುಕುವ ದರದಲ್ಲಿ ಅತ್ಯುತ್ತಮ ಪ್ರಯಾಣ ಅನುಭವ ಹಾಗೂ ಸೇವೆಯನ್ನು ಅಮೃತ್ ಭಾರತ್ 2.0 ಮೂಲಕ ಭಾರತೀಯ ರೈಲ್ವೇ ನೀಡಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಜನರಲ್ ಬೋಗಿಯಲ್ಲೂ ಪ್ರಯಾಣಿಕರಿಗೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್ಸ್, ಮೊಬೈಲ್ ಹೋಲ್ಡರ್, ನೀರಿನ ಬಾಟಲಿ ಇಡಲು ಜಾಗ ಸೇರಿದಂತೆ ಹಲವು ಫೀಚರ್ಸ್ ಲಭ್ಯವಾಗಲಿದೆ.