ಕಸ ಸ್ವಚ್ಛಗೊಳಿಸುವಾಗ ರಸ್ತೆ ಬದಿಯಲ್ಲಿ ಬಿದ್ದಿದ್ದ ಬರೋಬ್ಬರಿ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಪೌರಕಾರ್ಮಿಕ ಮಹಿಳೆಯೊಬ್ಬರು ಪೊಲೀಸರಿಗೆ ಒಪ್ಪಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೊಲೀಸರು ಬಂಗಾರದ ಗಂಟನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ.
ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಪದ್ಮಾ ಎಂಬುವವರು ಭಾನುವಾರ ಬೆಳಿಗ್ಗೆ ಟಿ. ನಗರದ ಮುಪ್ಪತ್ತಮ್ಮನ್ ಕೋವಿಲ್ ರಸ್ತೆಯಲ್ಲಿ ಎಂದಿನಂತೆ ಕಸ ಗುಡಿಸುವ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಒಂದು ಪ್ಲಾಸ್ಟಿಕ್ ಕವರ್ ಅವರ ಗಮನ ಸೆಳೆಯಿತು. ಕುತೂಹಲದಿಂದ ಅದನ್ನು ತೆರೆದು ನೋಡಿದಾಗ ಪದ್ಮಾ ಅವರಿಗೆ ಶಾಕ್ ಕಾದಿತ್ತು. ಅದರಲ್ಲಿ ಬೃಹತ್ ಪ್ರಮಾಣದ ಚಿನ್ನದ ಆಭರಣಗಳಿದ್ದವು.
24
ಬಂಗಾರದ ಗಂಟನ್ನು ಮರಳಿಕೊಟ್ಟ ಮಹಿಳೆ
ಸಾಮಾನ್ಯವಾಗಿ ಅಷ್ಟು ದೊಡ್ಡ ಮೊತ್ತದ ಚಿನ್ನ ಕಂಡಾಗ ಯಾರೇ ಆದರೂ ಆಸೆ ಪಡುವುದು ಸಹಜ. ಆದರೆ ಪದ್ಮಾ ಅವರು ಒಂದು ಕ್ಷಣವೂ ಯೋಚಿಸದೆ ನೇರವಾಗಿ ಪಾಂಡಿ ಬಜಾರ್ ಪೊಲೀಸ್ ಠಾಣೆಗೆ ತೆರಳಿ ಆ ಚೀಲವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆ ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ 45 ಸವರನ್ (ಸುಮಾರು 360 ಗ್ರಾಂ) ಚಿನ್ನದ ಆಭರಣಗಳಿರುವುದು ಪತ್ತೆಯಾಗಿದೆ. ಇದರ ಮಾರುಕಟ್ಟೆ ಮೌಲ್ಯ ಅಂದಾಜು 45 ಲಕ್ಷ ರೂಪಾಯಿಗಳಿಗೂ ಅಧಿಕ ಎನ್ನಲಾಗಿದೆ.
34
ಮಾಲೀಕನ ಪತ್ತೆ
ಇದೇ ವೇಳೆ ನಂಗನಲ್ಲೂರು ನಿವಾಸಿ ರಮೇಶ್ ಎಂಬುವವರು ತಮ್ಮ 45 ಸವರನ್ ಚಿನ್ನ ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದರು. ಹಳೆ ಚಿನ್ನದ ವ್ಯಾಪಾರಿಯಾದ ರಮೇಶ್, ಶನಿವಾರ ಸಂಜೆ ಟಿ. ನಗರಕ್ಕೆ ಸ್ನೇಹಿತನನ್ನು ಭೇಟಿಯಾಗಲು ಬಂದಿದ್ದರು. ಈ ವೇಳೆ ರಸ್ತೆ ಬದಿಯ ತಳ್ಳುಗಾಡಿಯ ಬಳಿ ಚಿನ್ನದ ಚೀಲವನ್ನಿಟ್ಟು ಮರೆತು ಹೋಗಿದ್ದರು. ಪೊಲೀಸರು ದಾಖಲೆಗಳನ್ನು ಪರಿಶೀಲಿಸಿ, ರಮೇಶ್ ಅವರೇ ಅಸಲಿ ಮಾಲೀಕರೆಂದು ಖಚಿತಪಡಿಸಿಕೊಂಡು ಚಿನ್ನವನ್ನು ಹಸ್ತಾಂತರಿಸಿದರು.
ಪೌರಕಾರ್ಮಿಕ ಮಹಿಳೆ ಪದ್ಮಾ ಅವರ ಈ ಅಸಾಧಾರಣ ಪ್ರಾಮಾಣಿಕತೆಯನ್ನು ಕಂಡ ಪೊಲೀಸರು ಮತ್ತು ಸಾರ್ವಜನಿಕರು ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 'ಪ್ರಾಮಾಣಿಕತೆ ಎನ್ನುವುದು ಕೇವಲ ಮಾತಲ್ಲ, ಅದು ಜೀವನದ ಮೌಲ್ಯ' ಎಂದು ಪೊಲೀಸರು ಪದ್ಮಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಅವರಿಗೆ ಸನ್ಮಾನ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ