ಪ್ರಧಾನಿ ನರೇಂದ್ರ ಮೋದಿ ಈ ಬಾರಿಯೂ ಸಹ ನಮ್ಮ ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡಿದ್ದಾರೆ. ಭಾನುವಾರ ಹಿಮಾಚಲ ಪ್ರದೇಶದ ಲೆಪ್ಚಾ ತಲುಪಿ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ್ದಾರೆ.
ಕ್ಯಾಮೋಫ್ಲೇಜ್ ಜಾಕೆಟ್ ಧರಿಸಿ ಭದ್ರತಾ ಪಡೆಗಳೊಂದಿಗೆ ಪ್ರಧಾನಿ ಮೋದಿ ಸಮಯ ಕಳೆದಿದ್ದಾರೆ. ಇನ್ನು, ಈ ಬಗ್ಗೆ ಎಕ್ಸ್‌ನಲ್ಲಿ (ಈ ಹಿಂದಿನ ಟ್ವಿಟ್ಟರ್‌ನಲ್ಲಿ) ಪೋಸ್ಟ್ ಮಾಡಿದ್ದ ಪ್ರಧಾನಿ ಮೋದಿ, "ನಮ್ಮ ಕೆಚ್ಚೆದೆಯ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಲು ಹಿಮಾಚಲ ಪ್ರದೇಶದ ಲೆಪ್ಚಾ ತಲುಪಿದೆ" ಎಂದು ಬರೆದುಕೊಂಡಿದ್ದರು.
ಬಳಿಕ, ಭಾಷಣ ಮಾಡಿದ ಪ್ರಧಾನಿ ಮೋದಿ, ಅಯೋಧ್ಯೆ ಎಂದರೆ ಭಗವಾನ್ ರಾಮನಿರುವ ಸ್ಥಳ, ಆದರೆ ನನಗೆ ಅಯೋಧ್ಯೆ ಎಂದರೆ ಭಾರತೀಯ ಸೇನೆಯ ಸಿಬ್ಬಂದಿ ಇರುವ ಸ್ಥಳ.
ನಾನು ನಿಮ್ಮೊಂದಿಗೆ ಇಲ್ಲದಿದ್ದಾಗಲೂ ಕಳೆದ 30-35 ವರ್ಷಗಳಿಂದ ನಾನು ಯಾವುದೇ ದೀಪಾವಳಿಯನ್ನು ಆಚರಿಸಿಲ್ಲ. ನಾನು ಪ್ರಧಾನಿ ಅಥವಾ ಸಿಎಂ ಆಗಿರದಿದ್ದಾಗಲೂ, ದೀಪಾವಳಿ ಹಬ್ಬವನ್ನು ಆಚರಿಸಲು ಒಂದಲ್ಲ ಒಂದು ಗಡಿ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ ಎಂದೂ ಹೇಳಿದ್ದಾರೆ.
2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರತಿ ವರ್ಷ, ದೀಪಾವಳಿ ಹಬ್ಬದ ಸಮಯದಲ್ಲಿ, ಪ್ರಧಾನಿ ಮೋದಿ ಮಿಲಿಟರಿ ಸೌಲಭ್ಯಗಳಿಗೆ ಭೇಟಿ ನೀಡುತ್ತಿದ್ದಾರೆ.
ಈ ಮಧ್ಯೆ, ಭಾನುವಾರ ಪ್ರಧಾನಿ ಮೋದಿ ದೇಶಕ್ಕೆ ದೀಪಾವಳಿಯ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು! ಈ ವಿಶೇಷ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದ್ಭುತ ಆರೋಗ್ಯವನ್ನು ತರಲಿ ಎಂದು ಮೋದಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕಳೆದ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಧಾನಿ ಮೋದಿ ಕಾರ್ಗಿಲ್ ಭಾಗದಲ್ಲಿ ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸಿಕೊಂಡಿದ್ದರು.