ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಪಶ್ಚಿಮ ಬಂಗಾಳದಲ್ಲಿ ರಾಮಮಂದಿರದ ಕಹಳೆಯೂರಲು ಬಿಜೆಪಿ ಸಜ್ಜಾಗಿದೆ. ಅದರಲ್ಲೂ ಮಮತಾ ಅವರಿಗೆ ರಾಜಕೀಯ ಹುಟ್ಟು ನೀಡಿದ ರಾಜ್ಯದ ನಂದಿಗ್ರಾಮದಲ್ಲಿ ಅಯೋಧ್ಯೆ ಮಾದರಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ನಿರ್ಧರಿಸಿದೆ.
20212ರ ಚುನಾವಣೆಯಲ್ಲಿ ಮಮತಾರನ್ನು ನಂದಿಗ್ರಾಮ ಕ್ಷೇತ್ರದಲ್ಲಿ ಮಣಿಸಿದ್ದ ಬಿಜೆಪಿ ಸಂಸದ ಸುವೇಂದು ಅಧಿಕಾರಿ ಅವರು ಏ.6ರಂದು ಮಂದಿರದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಹೊತ್ತಿನಲ್ಲೇ ಈ ಬೆಳವಣಿಗೆಯಾಗಿದೆ. ಜೊತೆಗೆ, ಪೂರ್ವ ಮಿಡ್ನಾಪುರದ ದಿಘಾದಲ್ಲಿ, ಬಿಜೆಪಿಯ ವಿರೋಧದ ನಡುವೆಯೂ ಮಮತಾ ಸರ್ಕಾರ ನಿರ್ಮಿಸಿರುವ ಜಗನ್ನಾಥ ದೇವಸ್ಥಾನದ ಉದ್ಘಾಟನೆಗೂ ಕೆಲವೇ ವಾರಗಳ ಮುನ್ನ ಶಂಕುಸ್ಥಾಪನೆಯಾಗಲಿರುವುದೂ ಗಮನಾರ್ಹ. ಈ ಹಿಂದೆ, ಪುರಿಯಲ್ಲಿರುವ ಜಗನ್ನಾಥ ಮಂದಿರದ ಪ್ರತಿಕೃತಿಯಂತೆ ದಿಘಾದಲ್ಲಿ ನಿರ್ಮಿಸಲಾಗುತ್ತಿರುವ ಮಂದಿರಕ್ಕೆ ಅಧಿಕಾರಿ ವಿರೋಧ ವ್ಯಕ್ತಪಡಿಸಿದ್ದರು.
ರಾಮಮಂದಿರದ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿ, ‘ರಾಮನವಮಿಯಂದು 1.5 ಎಕರೆ ಜಾಗದಲ್ಲಿ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಇದು ರಾಜ್ಯದಲ್ಲೇ ಅತಿ ದೊಡ್ಡ ರಾಮಮಂದಿರವಾಗಲಿದೆ. ಇದರೊಂದಿಗೆ ಗೋಶಾಲೆ, ಆಯುಷ್ ಆರೋಗ್ಯ ಕೇಂದ್ರಗಳು ಮತ್ತು ಅತಿಥಿಗೃಹವನ್ನೂ ನಿರ್ಮಿಸಲಾಗುವುದು’ ಎಂದರು.
2021ರ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 213 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು. ಬಿಜೆಪಿ 77 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ತೃಣಮೂಲ ಕಾಂಗ್ರೆಸ್ ಶೇ.48.5 ಮತ್ತು ಬಿಜೆಪಿ ಶೇ.38.5 ಮತಗಳನ್ನು ಪಡೆದುಕೊಂಡಿತ್ತು. ಕಾಂಗ್ರೆಸ್ ಕೇವಲ ಶೇ.3ರಷ್ಟು ಮತಗಳನ್ನು ಪಡೆದುಕೊಂಡಿತ್ತು.