ಅದು 300 ವರ್ಷಗಳ ಹಳೆಯ ಪ್ರಸಿದ್ಧ ದೇಗುಲ. ಆ ಶಿವನ ಆಲಯದಲ್ಲಿ ಉತ್ಖನ ನಡೆಯುತ್ತಿತ್ತು. ಜೆಸಿಬಿಯಿಂದ ಆವರಣ ಅಗೆಯುತ್ತಿದ್ದಾಗ ವಿಚಿತ್ರ ಧ್ವನಿಯೊಂದು ಕೇಳಿಬಂದಿತ್ತು. ಜಾಗೃತರಾದ ಸ್ಥಳೀಯರು, ಪರಿಶೀಲನೆ ನಡೆಸಿದಾಗ ಆ ಜಾಗ ದೊಡ್ಡ ರಹಸ್ಯಗಳನ್ನೇ ಹೊದ್ದು ನಿಂತಿತ್ತು.
ಆಂಧ್ರಪ್ರದೇಶ: ಬಾಪಟ್ಟ ಜಿಲ್ಲೆಯ ಭಟ್ಟಿಪ್ರೋಲು ಮಂಡಲದ ಓಲೇರು ಗ್ರಾಮದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದ್ದು, ಭಕ್ತಿಭಾವ ಮೇಳೈಸಿದೆ. ಇಲ್ಲಿನ ಪ್ರಸಿದ್ಧ ವಿಶ್ವೇಶ್ವರಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿತ್ತು. ಈ ವೇಳೆ ಭೂಮಿಯ ಅಡಿಯಲ್ಲಿ ಹೂತುಹೋಗಿದ್ದ ಸುಮಾರು 15 ಪುರಾತನ ಶಿಲಾ ವಿಗ್ರಹಗಳು ಪತ್ತೆಯಾಗಿವೆ.
24
ಜೆಸಿಬಿಗೆ ತಗುಲಿ ಕೇಳಿಬಂತು ವಿಚಿತ್ರ ಶಬ್ಧ
ಸುಮಾರು 300 ವರ್ಷಗಳ ಇತಿಹಾಸವಿರುವ ದೇವಾಲಯದಲ್ಲಿ ನಡೆದ ಈ ಬೆಳವಣಿಗೆಯು ಇತಿಹಾಸಕಾರರಲ್ಲಿ, ಭಕ್ತರಲ್ಲಿ ಭಾರೀ ಕುತೂಹಲ ಮೂಡಿಸಿದೆ. ದೇವಾಲಯದ ಪುನರ್ನಿರ್ಮಾಣ ಕಾರ್ಯಕ್ಕಾಗಿ ಜೆಸಿಬಿ ಮೂಲಕ ಭೂಮಿಯನ್ನು ಅಗೆಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಸ್ವಲ್ಪ ಆಳದಲ್ಲಿ ದೊಡ್ಡ ಕಲ್ಲುಗಳು ತಗುಲಿದ ಶಬ್ದ ಕೇಳಿಬಂತು. ತಕ್ಷಣವೇ ಎಚ್ಚೆತ್ತ ಗ್ರಾಮಸ್ಥರು ಮತ್ತು ಅಧಿಕಾರಿಗಳು ಯಂತ್ರದ ಮೂಲಕ ಅಗೆಯುವುದನ್ನು ನಿಲ್ಲಿಸಿದರು. ವಿಗ್ರಹಗಳಿಗೆ ಹಾನಿಯಾಗಬಾರದು ಎಂಬ ದೃಷ್ಟಿಯಿಂದ ಅತ್ಯಂತ ಜಾಗರೂಕತೆಯಿಂದ ಕೈಯಿಂದಲೇ ಮಣ್ಣನ್ನು ಸರಿಸಿದಾಗ ಒಂದೊಂದೇ ಶಿಲಾ ವಿಗ್ರಹಗಳು ದರ್ಶನ ನೀಡಿವೆ.
34
ಪತ್ತೆಯಾದ ವಿಗ್ರಹಗಳು ಹಿನ್ನೆಲೆ
12 ಆಳ್ವಾರರ (ವೈಷ್ಣವ ಸಂತರ) ವಿಗ್ರಹಗಳು
ಒಂದು ಲಕ್ಷ್ಮಿ ದೇವಿಯ ವಿಗ್ರಹ
ಒಂದು ನರಸಿಂಹ ಸ್ವಾಮಿಯ ವಿಗ್ರಹ
ಒಂದು ವಿಷ್ವಕ್ಸೇನನ ವಿಗ್ರಹ
ಸದ್ಯ ಹೊರತೆಗೆ ವಿಗ್ರಹಗಳನ್ನ ಗ್ರಾಮಸ್ಥರು ಶುದ್ಧೀಕರಿಸಿ ವಿಶೇಷ ಪೂಜೆ ನೆರವೇರಿಸಿ ಸುರಕ್ಷಿತವಾಗಿಟ್ಟಿದ್ದಾರೆ. ವಿಶ್ವೇಶ್ವರಾಲಯವು ಒಂದು ಶಿವನ ದೇವಾಲಯ. ಆದರೆ ಇಲ್ಲಿ ಪತ್ತೆಯಾಗಿರುವ ವಿಗ್ರಹಗಳೆಲ್ಲವೂ ವೈಷ್ಣವ ಸಂಪ್ರದಾಯಕ್ಕೆ ಸೇರಿವೆ. ಹೀಗಾಗಿ ಇದು ಇತಿಹಾಸಕಾರರಲ್ಲಿ ತಲೆಕೆಡಿಸಿದೆ. ಈ ಹಿಂದೆ ಇಲ್ಲಿ ವೈಷ್ಣವ ದೇವಾಲಯವಿತ್ತೇ? ಅಥವಾ ಯುದ್ಧ ಅಥವಾ ಇತರ ದಾಳಿಗಳ ಸಂದರ್ಭದಲ್ಲಿ ವಿಗ್ರಹಗಳನ್ನು ರಕ್ಷಿಸಲು ಇಲ್ಲಿ ಹೂತಿಡಲಾಗಿತ್ತೇ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಸ್ಥಳಕ್ಕೆ ಭೇಟಿ ನೀಡಿದ ದೇವದಾಯ ಇಲಾಖೆಯ ಅಧಿಕಾರಿಗಳು ಮತ್ತು ಪುರಾತತ್ವ ಇಲಾಖೆಯ ತಜ್ಞರು ವಿಗ್ರಹಗಳ ಕಾಲಮಾನ ಮತ್ತು ಅವುಗಳ ಇತಿಹಾಸದ ಬಗ್ಗೆ ಸಂಶೋಧನೆ ಆರಂಭಿಸಿದ್ದಾರೆ. ಈ ವಿಗ್ರಹಗಳು ಯಾವ ರಾಜವಂಶದ ಕಾಲಕ್ಕೆ ಸೇರಿದವು ಮತ್ತು ಇವುಗಳನ್ನು ಇಲ್ಲಿಗೆ ತಂದವರು ಯಾರು ಎಂಬ ಬಗ್ಗೆ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ. ಈ ಪುರಾತನ ವಿಗ್ರಹಗಳನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ