ಎಲ್ಲ ವೈಭೋಗಗಳಲ್ಲಿ ದೇವರಪೂಜೆಯ ಭಾವ ಇರಬೇಕು: ಪುತ್ತಿಗೆ ಶ್ರೀ

First Published | Aug 24, 2024, 2:14 PM IST

ಯಾವ ಶಾಸ್ತ್ರಗಳು ಕೂಡ ವೈಭೋಗಗಳನ್ನು ಅನುಭವಿಸಬಾರದು ಎಂದು ಹೇಳುವುದಿಲ್ಲ, ಆದರೆ ಅವುಗಳ ಹಿಂದೆ ಭಗವತ್‌ ಪೂಜೆಯ, ಭಗವದರ್ಪಣೆಯ ಭಾವ ಇರಬೇಕು. ಆಗ ಮಾತ್ರ ಈ ವೈಭವದ ನಿಜವಾದ ಸುಖ ಲಭಿಸುತ್ತದೆ ಎಂದು ಕೃಷ್ಣಮಠದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಶುಕ್ರವಾರ ರಾಜಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಾಸೋತ್ಸವದಲ್ಲಿ ಲಡ್ಡು ಉತ್ಸವವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಬಾಲಕೃಷ್ಣನಿಗೆ ಲಡ್ಡು ಎಂದರೆ ಬಹುಪ್ರಿಯ, ಆದ್ದರಿಂದ 108 ಬಗೆಯ ಲಡ್ಡುಗಳನ್ನು ತಯಾರಿಸಿ, ಅವುಗಳನ್ನು ಭಂಡಾರಕೇರಿ ಮಠಾಧೀಶರಿಂದ ಕೃಷ್ಣನಿಗೆ ಅರ್ಪಿಸಿದ್ದೇವೆ. ಇದು ಕೂಡ ಕೃಷ್ಣನಿಗೆ ಪೂಜೆಯ ರೂಪದಲ್ಲಿ ಸಂಕಲ್ಪಿಸಿದ್ದೇವೆ ಎಂದರು.

ಮುಖ್ಯ ಅತಿಥಿಯಾಗಿದ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಆತಂಕಕ್ಕೆ ಈಡಾಗುತ್ತಿದೆ. ಹಿಂದೂ ಧರ್ಮ ಒಗ್ಗಟ್ಟಾಗಬೇಕಾಗಿದೆ ಎಂದರು.

Latest Videos


ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಮತ್ತು ಪುತ್ತಿಗೆ ಮಠದ ಕಿರಿಯಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಮಂಡ್ಯದ ಉದ್ಯಮಿ ರಮೇಶ್ ಆಚಾರ್ಯ ಮತ್ತು ರಾಜಸ್ಥಾನ ಸಮಾಜದ ಪ್ರತಿನಿಧಿ ದಶರಥ ಸಿಂಗ್ ಅವರನ್ನು ಪರ್ಯಾಯ ಶ್ರೀಗಳು ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು.

ಕರ್ಣಾಟಕ ಬ್ಯಾಂಕ್‌ ಹಿರಿಯ ಅಧಿಕಾರಿಗಳಾದ ಜಯನಾಗರಾಜ ಆಚಾರ್ಯ, ರಾಜ ಬಿ.ಎನ್., ಉದ್ಯಮಿಗಳಾದ ಎನ್.ಆರ್.ಕುಲಕರ್ಣಿ ವೇದಿಕೆಯಲ್ಲಿದ್ದರು. ಉಪನ್ಯಾಸಕಿ ಪ್ರಜ್ಞಾ ಮಾರ್ಪಳ್ಳಿ ಅವರು ವಿಶೇಷ ಉಪನ್ಯಾಸ ನೀಡಿದರು. 

ಬೃಹತ್ ಲಡ್ಡಿನಲ್ಲಿ ಕೃಷ್ಣನ ಪ್ರತಿಕೃತಿ

ಕೃಷ್ಣನಿಗೆ 108 ಬಗೆಯ ಲಡ್ಡುಗಳನ್ನು ಅರ್ಪಣೆ ಮಾಡಿದ ಪುತ್ತಿಗೆ ಶ್ರೀಗಳು, ಬೃಹತ್ ಲಡ್ಡಿನಲ್ಲಿದ್ದ ಕಡೆಗೋಲು ಕೃಷ್ಣನ ಪ್ರತಿಕೃತಿಯನ್ನು ಅನಾವರಣಗೊಳಿಸುವ ಮೂಲಕ ವೈಶಿಷ್ಟಪೂರ್ಣವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

click me!