ಹಾವೇರಿ ಜಿಲ್ಲೆ ದೇವರಗುಡ್ಡದಲ್ಲಿ ನುಡಿಯಲಾದ ಮಾಲತೇಶ ದೇವರ ಕಾರ್ಣಿಕವು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿದೆ. 'ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್' ಎಂಬ ದೈವವಾಣಿಯು ದೇಶವನ್ನು ಸಾಧು-ಸಂತರು ಮುನ್ನಡೆಸಲಿದ್ದಾರೆ ಹಾಗೂ ರೈತರಿಗೆ ಉತ್ತಮ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ.
ಹಾವೇರಿ (ಅ.19): ದಸರಾ ಮತ್ತು ನವರಾತ್ರಿ ಮಹೋತ್ಸವದ ಅಂಗವಾಗಿ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ನುಡಿಯಲಾದ ಮಾಲತೇಶ (ಮೈಲಾರಲಿಂಗೇಶ್ವರ) ದೇವರ ಕಾರ್ಣಿಕ ದೈವವಾಣಿ ಇದೀಗ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
'ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್...' ಎಂದು ನುಡಿಯಲಾದ ಈ ವರ್ಷದ ದೈವವಾಣಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಗುರೂಜಿ ಅವರು ಸ್ಪೋಟಕ ವಿಶ್ಲೇಷಣೆ ನೀಡಿದ್ದಾರೆ. ದೇಶದ ರಾಜಕೀಯ ಮತ್ತು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀಡಿರುವ ಈ ವಿವರಣೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
25
ರಾಜಕೀಯ ವಿಶ್ಲೇಷಣೆ: ದೇಶಕ್ಕೆ ಸಾಧು-ಸಂತರು ಪ್ರಧಾನಿಯಾಗುವ ಮುನ್ಸೂಚನೆ!
ಕಾರ್ಣೀಕದ ನುಡಿಯನ್ನು ರಾಜಕೀಯವಾಗಿ ವಿಶ್ಲೇಷಿಸಿದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ, 'ಕೆಂಪುಕೋಟೆ ಎಂಬುದು ದೇಶದ ಅತ್ಯುನ್ನತ ಆಡಳಿತ ಮತ್ತು ನಾಯಕತ್ವದ ಶಕ್ತಿಕೇಂದ್ರ. ಈ ದೈವವಾಣಿಯ ಪ್ರಕಾರ, ಮುಂದಿನ ದಿನಗಳಲ್ಲಿ ಕೆಂಪುಕೋಟೆಯ ಮೇಲೆ ಸಾಧು-ಸಂತರು ತ್ರಿವರ್ಣ ಧ್ವಜವನ್ನು ಹಾರಿಸಲಿದ್ದಾರೆ.
ಅಂದರೆ ಭಾರತ ದೇಶವನ್ನು ಸಾಧು-ಸಂತರು ಮುನ್ನಡೆಸಲಿದ್ದಾರೆ ಹಾಗೂ ಅವರೇ ದೇಶದ ಪ್ರಧಾನ ಮಂತ್ರಿಯಾಗುವ (Prime Minister) ಸ್ಪಷ್ಟ ಮುನ್ಸೂಚನೆಯನ್ನು ಮಾಲತೇಶ ದೇವರು ನೀಡಿದ್ದಾರೆ. ದೇಶದ ಚುಕ್ಕಾಣಿ ಸಂತರ ಕೈಸೇರಲಿದೆ" ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಇನ್ನು ದೇಶದ ಬೆನ್ನೆಲುಬಾದ ಅನ್ನದಾತರಿಗೆ ಈ ಕಾರ್ಣೀಕ ಹೇಗೆ ಅನ್ವಯವಾಗುತ್ತದೆ ಎಂಬುದನ್ನೂ ವಿವರಿಸಿದ ಅವರು, ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಭೀಕರ ಬರಗಾಲ ಮತ್ತು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ, 'ಮುತ್ತು ಚಲ್ಲಿತು' ಎಂಬ ಮಾತಿನಂತೆ ಮುಂದಿನ ಹಿಂಗಾರು ಮಳೆ ಅತ್ಯಂತ ಸಮೃದ್ಧವಾಗಿ ಸುರಿಯಲಿದೆ. ರೈತರು ತಮ್ಮ ಹೊಲಗಳಲ್ಲಿ ಮುತ್ತಿನಂತಹ ಉತ್ತಮ ಬೆಳೆಗಳನ್ನು ಬೆಳೆಯಲಿದ್ದಾರೆ. ಅನ್ನದಾತರು ಎಲ್ಲಾ ಆರ್ಥಿಕ ಸಂಕಷ್ಟಗಳಿಂದ ಪಾರಾಗಿ, ರೈತರ ಬಾಳಿನಲ್ಲಿ ಸಮೃದ್ಧಿ ಮತ್ತು ನೆಮ್ಮದಿ ನೆಲೆಸಲಿದೆ ಎಂದು ರೈತ ಸಮುದಾಯಕ್ಕೆ ಸಂತಸದ ಸುದ್ದಿ ನೀಡಿದ್ದಾರೆ.
ನವರಾತ್ರಿ ಪ್ರಯುಕ್ತ ಸತತ 9 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದ ಗೊರವಯ್ಯ ನಾಗಪ್ಪ ಅಜ್ಜ ಉರ್ಮಿ ಅವರು, ದೇವರಗುಡ್ಡದ ಪವಿತ್ರ ಕರಿಯಾಲ್ ಕಟ್ಟಿಯ ಬಳಿ 15 ಅಡಿ ಎತ್ತರದ ಬಿಲ್ಲನ್ನೇರಿ ಈ ದೈವವಾಣಿಯನ್ನು ನುಡಿದು ಕೆಳಗೆ ಜಿಗಿದಿದ್ದರು.
55
ಯೋಗಿ ಆದಿತ್ಯನಾಥ ಪ್ರಧಾನಮಂತ್ರಿ?
ಒಟ್ಟಿನಲ್ಲಿ ದೇವರಗುಡ್ಡದ ಮಾಲತೇಶ ದೇವರ ಈ ಬಾರಿಯ ಕಾರ್ಣೀಕವು ರೈತರಿಗೆ ಸಮೃದ್ಧಿಯ ಆಶಾಕಿರಣ ಮೂಡಿಸಿದ್ದರೆ, ರಾಜಕೀಯ ವಲಯದಲ್ಲಿ ದೇಶದ ಮುಂದಿನ ಪ್ರಧಾನಿ ಯಾರು ಎಂಬ ಬಗ್ಗೆ ಹೊಸದೊಂದು ಕುತೂಹಲಕಾರಿ ಚರ್ಚೆಗೆ ಮುನ್ನುಡಿ ಬರೆದಿದೆ.
ಇನ್ನು ಜನಸಾಮಾನ್ಯರು ಹಾಗೂ ರಾಜಕೀಯ ಆಸಕ್ತರು ದೇಶದಲ್ಲಿ ಮುಂದಿನ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಈಗಾಗಲೇ ಸಾಧು-ಸಂತರ ಪೈಕಿ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಆಗಿರುವ ಯೋಗಿ ಆದಿತ್ಯನಾಥ ಅವರು ದೇಶದ ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ.