ದೀಪಾವಳಿಗೆ ಮಾತ್ರ ದರ್ಶನ ನೀಡೋ ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ!

First Published | Oct 22, 2024, 9:55 PM IST

ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ಸಕಲಸಿದ್ದತೆ ನಡೆದಿದೆ. ಈ ಭಾರೀ ಜಿಲ್ಲೆಯಲ್ಲಿ ವಿಪರೀತ ಮಳೆ ಹೆಚ್ಚಾಗಿರುವುದರಿಂದ ಭಕ್ತರು ಬೆಟ್ಟ ಹತ್ತುವಾಗ ತುಂಬಾ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

Deviramma Jatra 2024: ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ನಾನಾ ರೀತಿ ದೇವರ ಮೊರೆ ಹೋಗ್ತಾರೆ. ಆದ್ರೆ, ಚಿಕ್ಕಮಗಳೂರಿನ ದೇವಿರಮ್ಮನ ಭಕ್ತರು ತಮ್ಮ ಬಯಕೆ ಈಡೇರಿಸಿಕೊಳ್ಳಲು ಸೃಷ್ಠಿಕರ್ತರೆದುರು ದೇಹವನ್ನು ದಂಡಿಸಿಸ್ತಾರೆ. ಬರಿಗಾಲಲ್ಲೇ 3,000 ಅಡಿ ಎತ್ತರದ ಬೆಟ್ಟವನ್ನೇರಿ ಹರಕೆ ತೀರಿಸ್ತಾರೆ. ವರ್ಷಕ್ಕೊಮ್ಮೆ ನಡೆಯೋ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಸಾವಿರಾರು ಭಕ್ತರು ಪಾಲ್ಗೊಳ್ಳೋ ನಿರೀಕ್ಷೆ ಇದೆ.ಇದೇ ತಿಂಗಳು 31 ರಿಂದ ನವೆಂಬರ್ 3 ರವರೆಗೆ ದೀಪೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗಿನ ಜಾವ ಬೆಟ್ಟಕ್ಕೆ 60 ಸಾವಿರಕ್ಕೂ ಅಧಿಕ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಾಲಯದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದೆ.ಬೆಟ್ಟವನ್ನೇರಿ ದೇವಿ ದರ್ಶನ : 

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿರೋ ಬಿಂಡಿಗ ದೇವಿರಮ್ಮ ದೇವಾಲಯ. ದೀಪಾವಳಿ ಅಂಗವಾಗಿ ಮೂರು ದಿನಗಳ ಕಾಲ ಈ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತೇ.  3000 ಅಡಿಗಳಷ್ಟು ಎತ್ತರ ಗುಡ್ಡದಲ್ಲಿರೋ ದೇವಿರಮ್ಮ ವರ್ಷಗೊಮ್ಮೆ ಮಾತ್ರ ಜನರಿಗೆ ದರ್ಶನ ನೀಡೋದು. ಮತ್ತೊಂದು ವಿಶೇಷ ಅಂದ್ರೆ 3000 ಅಡಿ ಎತ್ತರವಿರೋ ಈ ಬೆಟ್ಟವನ್ನ ಭಕ್ತಾಧಿಗಳ ಬರಿಗಾಲಲ್ಲೇ ಬೆಟ್ಟವೇರೋದು. ಮೂರು ದಿನಗಳ ಕಾಲ ನಡೆಯೋ ದೇವರಮ್ಮ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆ ನಡೆಸಲಾಗಿದೆ. ಅಕ್ಟೋಬರ್ 31 ಅಂದ್ರೆ ನರಕ ಚತುರ್ದಶಿಯಂದು ದೇವಿರಮ್ಮನ ಬೆಟ್ಟದಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನ ದೇವಿಗೆ ಸಲ್ಲಿಸಿ ಬೆಳಗಿನ ಜಾವ 4 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತೆ. ನರಕ ಚತುದರ್ಶಿಯಂದು ಕಾಲಿಗೆ ಚಪ್ಪಲಿಯನ್ನು ಹಾಕದೆ ಕಾಡು, ಬೆಟ್ಟ-ಗುಡ್ಡದ ಕಲ್ಲಿನ ಹಾದಿ, ಕಲ್ಲು-ಮುಳ್ಳುಗಳ ನಡುವೆ ಬೆಟ್ಟವನ್ನೇರಿ ದೇವಿಯ ದರ್ಶನ ಪಡೆದು ಭಕ್ತರು ಪುನೀತರಾಗ್ತಾರೆ. ಈ ಜಾತ್ರೆಯಲ್ಲಿ ಪಾಲ್ಗೊಂಡು, ಬೆಟ್ಟವನ್ನೇರಿ ಪೂಜೆ ಮಾಡಿಸಿದ್ರೆ ಭಕ್ತರ ಇಷ್ಟಾರ್ಥ ಸಿದ್ಧಿಸೋದ್ರಿಂದ ಭಕ್ತರು ಜಾತ್ರೆಯಂದು ದೇಹವನ್ನ ದಂಡಿಸೋದ್ರ ಮೂಲಕ ತಮ್ಮ ಕಾರ್ಯ, ಬಯಕೆಯನ್ನ ಸಿದ್ಧಿಸಿಕೊಳ್ತಾರೆ.

ಮಳೆ ಅಧಿಕ, ಎಚ್ಚರಿಕೆ ಅಗತ್ಯ : 

ಸಮುದ್ರಮಟ್ಟದಿಂದ ಸುಮಾರು 3000 ಅಡಿ ಎತ್ತದಲ್ಲಿರೋ ದೇವಿರಮ್ಮನ ಬೆಟ್ಟದಲ್ಲಿ ವರ್ಷದಲ್ಲಿ ಒಮ್ಮೆ ಮಾತ್ರ ಪೂಜೆ ನಡೆಯೋದು. ಈ ಬೆಟ್ಟಕ್ಕೆ ಯಾವುದೇ ರಸ್ತೆ ಸಂಪರ್ಕವೂ ಇಲ್ಲ. ಇದರಿಂದಾಗಿ ಬೆಟ್ಟಗುಡ್ಡಗಳನ್ನು ಅಲೆದಾಡಿಕೊಂಡೆ ಬರಬೇಕು. ಜೊತೆಗೆ ಬೆಟ್ಟ ಏರುವಾಗ ಯಾವುದೇ ಆಹಾರವನ್ನು ಸ್ವೀಕರಿಸುವಂತಿಲ್ಲ. ಕಾಲಿಗೆ ಚಪ್ಪಲಿಯನ್ನು ಹಾಕುವಂತಿಲ್ಲ. ದೇವರಿಗೆ ಪೂಜೆ ಸಲ್ಲಿಸಿದ ನಂತರ ಈ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ. ರಾಜ್ಯ ಹೊರರಾಜ್ಯಗಳಿಂದ ಆಗಮಿಸೋ ಭಕ್ತಾಧಿಗಳಿಗೆ ಸಕಲ ಸಿದ್ದತೆಯನ್ನ ಜಿಲ್ಲಾಡಳಿತ ಹಾಗೂ ದೇವಾಲಯ ಸಮಿತಿ ವ್ಯವಸ್ಥೆಯನ್ನ ನಿರ್ಮಿಸಿಕೊಂಡಿದ್ದಾರೆ. ಈ ಬಾರಿ ಅಧಿಕ ಸಂಖ್ಯೆಯ ಭಕ್ತರು ಬೆಟ್ಟವನ್ನೆರೋ ನಿರೀಕ್ಷೆಯಿ ಇದ್ದು ಈ ಭಾರೀ ಹಿಂಗಾರು ಮಳೆಯೂ ಅಧಿಕವಾಗಿ ಸುರಿಯುತ್ತಿರುವುದರಿಂದ ಭಕ್ತರು ಎಚ್ಚರಿಕೆಯಿಂದ ಬೆಟ್ಟವನ್ನೇರಬೇಕು ಅಂತಾರೆ ದೇವಸ್ಥಾನದ ಆಡಳಿತ ಮಂಡಳಿಯವರು.

Latest Videos


ಬೆಟ್ಟದ ಮೇಲೆ ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ. ಇದೇ ದಿನ ದೇವೀರಮ್ಮನವರ ದೇವಸ್ಥಾನದಲ್ಲಿ ಹಣ್ಣು ಕಾಯಿಯನ್ನು ಮಾಡಿಸಬಹುದು. ದೇವಸ್ಥಾನದಲ್ಲಿ ಹಣ್ಣು ಕಾಯಿ ಮತ್ತು ತೀರ್ಥ-ಪ್ರಸಾದದೊರೆಯುತ್ತದೆ.ಭಕ್ತರು ಪಾದರಕ್ಷೆಗಳನ್ನು ಧರಿಸದೇ ಬರೀಕಾಲಿನಲ್ಲಿಯೇ ಬೆಟ್ಟ ಹತ್ತುವುದು. ದೇವಿಯವರ ದರ್ಶನವಾದ ತಕ್ಷಣ ಬೆಟ್ಟದ ಮೇಲೆಯೇ ಕುಳಿತುಕೊಳ್ಳದೇ ಬೆಟ್ಟದಿಂದ ಕೆಳಗೆ ಇಳಿಯತಕ್ಕದ್ದು.

ಬೆಟ್ಟದಲ್ಲಿ ಹಾಗೂ ದೇವಸ್ಥಾನದ ಸುತ್ತ-ಮುತ್ತ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯ ವಸ್ತುಗಳನ್ನು ಎಸೆಯಬೇಡಿ - ಬೆಟ್ಟದಲ್ಲಿ ಹಾಗೂ ದೇವಸ್ಥಾನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.ತರೀಕೆರೆ, ಬೀರೂರು, ಕಡೂರು, ಚಿಕ್ಕಮಗಳೂರಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ವ್ಯವಸ್ಥೆ ಇರುತ್ತದೆ. ಪ್ರತಿದಿನ ಅನ್ನ ದಾಸೋಹ ಇರುತ್ತದೆ. ಅನ್ನ ದಾಸೋಹ ಮಾಡಿಸುವವರು ದೇವಸ್ಥಾನದ ಕಾರ್ಯಾಲಯದಲ್ಲಿ ಹೆಸರು ನೊಂದಾಯಿಸಬಹುದು. ಬೆಟ್ಟದ ಮೇಲೆ ಪಟಾಕಿ ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಹಸೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಒಟ್ಟಾರೆ, ದೀಪಾವಳಿಯ ದಿನದಂದು ಆರಂಭಗೊಳ್ಳೋ ದೇವಿರಮ್ಮ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೇ ಆರಂಭಗೊಂಡಿದೆ. ಕಾಫಿನಾಡಲ್ಲಿ ನೆಲೆಸಿರುವ ಮಲ್ಲೇನಹಳ್ಳಿ ಬಿಂಡಿಗ ದೇವಿರಮ್ಮ ಅಗಣಿತ ಮಂದಿ ಭಕ್ತರ ಪಾಲಿಗೆ ಬೇಡಿಕೆಯನ್ನೆಲ್ಲಾ ಈಡೇರಿಸೋ ಕರುಣಾಳು ಅಂದ್ರೆ ತಪ್ಪಲ್ಲ. ಜನರು ತಮ್ಮ ಆಸೆ, ಆಶೋತ್ತರಗಳನ್ನು ಈಡೇರಿಸುವ ದೇವಿಯಾಗಿ ದೇವಿರಮ್ಮನನ್ನು ನಂಬಿ ವರ್ಷಕ್ಕೊಂದು ಭಾರಿ ನಿಷ್ಕಲ್ಮಷ ಮನಸ್ಸಿನಿಂದ ತಮ್ಮ ಕೈಲಾದಷ್ಟು ಮಟ್ಟಿಗೆ ಭಕ್ತಿ ಸಮರ್ಪಿಸಿ ಪಾವನರಾಗ್ತಾರೆ.

click me!