ಕೋವಿಡ್-19 ಕಾರಣದಿಂದ 8 ತಿಂಗಳಿನಿಂದ ಬಂದ್ ಆಗಿದ್ದ ಸ್ನಾತಕೋತ್ತರ, ಪದವಿ, ಡಿಪ್ಲೊಮೋ ಅಂತಿಮ ವರ್ಷದ ವಿದ್ಯಾರ್ಥಿಗಳ ಭೌತಿಕ ತರಗತಿಗಳು ಮಂಗಳವಾರದಿಂದ ಆರಂಭವಾಗಿದ್ದು, ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ನಗರದ ಮಹಾರಾಣಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಲೇಜುಗಳು ಪುನರಾರಂಭವಾದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಬೆಂಗಳೂರಿನ ಶೇಷಾದ್ರಿಪುರಂನ ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣೆ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದರು.
ವಿದ್ಯಾರ್ಥಿಗಳ ದೈಹಿಕ ಅಂತರ, ತರಗತಿಗಳ ಸ್ಯಾನಿಟೈಶೇಷನ್, ಸ್ವಚ್ಛತೆ, ಮಾಸ್ಕ್ ಧರಿಸುವುದು, ಕೊಠಡಿಗಳಲ್ಲಿ ಗಾಳಿ-ಬೆಳಕು ಮುಂತಾದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು, ಕಾಲೇಜಿನ ಕಾರಿಡಾರ್‌ಗಳಲ್ಲಿ ಸಂಚರಿಸಿದರು.
ಕೋವಿಡ್ ನಡುವೆಯೂ ವಿದ್ಯಾಭ್ಯಾಸದ ಬಗ್ಗೆ ಉತ್ಕಟ ಶ್ರದ್ಧೆ ಹೊಂದಿರುವ ವಿದ್ಯಾರ್ಥಿಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ ಡಿಸಿಎಂ ಅಶ್ವತ್ಥನಾರಾಯಣ ಅವರು, ತರಗತಿ ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರಲ್ಲದೆ, ವಿದ್ಯಾರ್ಥಿಗಳ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಜತೆಗೆ, ವೈರಸ್ ಬಗ್ಗೆ ಅಲಕ್ಷ್ಯ ಬೇಡ. ಮನೆಯಿಂದ ಕಾಲೇಜಿಗೆ ಸುರಕ್ಷಿತವಾಗಿ ಬಂದುಹೋಗಿ. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ, ದೈಹಿಕ ಅಂತರ, ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸ್ ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಉಪ ಮುಖ್ಯಮಂತ್ರಿಗಳು; "ಎಂಟು ತಿಂಗಳ ನಂತರ ಕಾಲೇಜುಗಳು ಆರಂಭವಾಗಿವೆ. ಅಂತಿಮ ವರ್ಷದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ. ಉತ್ತಮ ಸ್ಪಂದನೆ ಸಿಕ್ಕಿದೆ. ಇದು ಪ್ರಾರಂಭ ಮಾತ್ರ. ಹಂತವಾಗಿ ಹಂತವಾಗಿ ಮಕ್ಕಳು ಹೆಚ್ಚುಹೆಚ್ಚಾಗಿ ಕಾಲೇಜುಗಳಿಗೆ ಬರಲಿದ್ದಾರೆ. ಯುಜಿಸಿ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಸರಕಾರ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದೆ ಎಂದರು.