4 ವರ್ಷ ಪ್ರೀತಿಸಿ ಮದುವೆಯಾಗಿದ್ದ ನವದಂಪತಿ, 4 ತಿಂಗಳೂ ಸಂಸಾರ ಸಾಗಿಸದೇ ಆತ್ಮಹತ್ಯೆಗೆ ಶರಣು

First Published | May 15, 2024, 3:06 PM IST

ವರದಿ - ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್
ವಿಜಯಪುರ (ಮೇ.15) :
ಕಳೆದ ನಾಲ್ಕು ತಿಂಗಳ ಹಿಂದಷ್ಟೆ ಅಧಿಕೃತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನವಜೋಡಿ ಆತ್ಮಹತ್ಯೆಗೆ ಶರಣಾಗಿದೆ. ಕಳೆದ 4 ವರ್ಷಗಳ ಹಿಂದೆಯೇ ಪ್ರೀತಿಸಿ  ಜೋಡಿ ಒಂದಾಗಿತ್ತು. ಈಗ ಅದ್ದೂರಿಯಾಗಿ ರಿಸೆಪ್ಷನ್‌ ಮಾಡಿಕೊಂಡ ಜೋಡಿ ಸಂಸಾರ ನೌಕೆ ಏರಿತ್ತು. ಆದ್ರೆ ಅದೇನಾಯ್ತೋ ಗೊತ್ತಿಲ್ಲ. ನಾಲ್ಕೇ ನಾಲ್ಕು ತಿಂಗಳ ಸಂಸಾರ ಸಾಗರದಲ್ಲಿ ನೌಕೆ ಸಾಗಿಸದೇ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ಶರಣಾದ ನಾಲ್ಕು ತಿಂಗಳ ನವಜೋಡಿ..!
ನಾಲ್ಕು ತಿಂಗಳ ಹಿಂದಷ್ಟೇ ಅದ್ದೂರಿಯಾಗಿ ರಿಸಪ್ಷನ್‌ ಮಾಡಿಕೊಂಡು ಅಧಿಕೃತವಾಗಿ ಒಂದಾಗಿದ್ದ ನವ ಜೋಡಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾರುಣ ಘಟನೆ ನಡೆದಿರೋದು ವಿಜಯಪುರ ನಗರದ ಹೊರವಲಯದ ಶ್ರೀ ಸಿದ್ದೇಶ್ವರ ಬಡಾವಣೆಯಲ್ಲಿ. 30 ವರ್ಷದ ಮನೋಜ್‌ ಪೋಳ್‌ 25 ವರ್ಷದ ರಾಖಿ ಆತ್ಮಹತೆಗೆ ಶರಣಾದ ನವ ವಿವಾಹಿತ ಜೋಡಿ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ರಾತ್ರಿ ಇಬ್ಬರು ನೇಣಿಗೆ ಶರಣಾಗಿದ್ದಾರೆ. ಊರಿಗೆ ಹೋಗಿದ್ದ ಕುಟುಂಬಸ್ಥರು ಬೆಳಗಿನ ಜಾವ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ.

ಸಣ್ಣ ಜಗಳ, ಆತ್ಮಹತ್ಯೆಯಂತ ಭಯಾನಕ ನಿರ್ಧಾರ..! 
ಕೆಲ ದಿನಗಳಿಂದ ಮನೋಜ್‌ ಹಾಗೂ ರಾಖಿ ನಡುವೆ ಸಣ್ಣ ಪುಟ್ಟ ಜಗಳ ನಡೆದಿದ್ವು. ಹೇಳಿಕೊಳ್ಳುವಂತ ತಕರಾರು ಏನು ಇರಲಿಲ್ಲವಂತೆ. ಆದ್ರೆ ನಿನ್ನೆ ಮನೆಯಲ್ಲಿ ಯಾರು ಇಲ್ಲದ ವೇಳೆ ಇಬ್ಬರ ನಡುವಿನ ಜಗಳ ತಾರಕ್ಕೇರಿತ್ತಂತೆ. ಬಳಿಕ ಮನೋಜ್‌ ಚಿಕ್ಕಪ್ಪ ಮನೆಗೆ ಬಂದು ಇಬ್ಬರಿಗು ಸಮಾಧಾನ ಪಡೆಸಿದ್ದರು. ಅಲ್ಲದೆ ರಾತ್ರಿ ಮುಂದೆ ಕುಳಿತು ಊಟ ಮಾಡಿಸಿ ಹೋಗಿದ್ದರಂತೆ. ಆದ್ರೆ ತಡರಾತ್ರಿ ಇಬ್ಬರ ನಡುವೆ ಅದೇನಾಯ್ತೋ ಗೊತ್ತಿಲ್ಲ, ಬೆಳಿಗ್ಗೆ ಕುಟುಂಬಸ್ಥರು ಮನೆಗೆ ವಾಪಸ್‌ ಆದಾಗ ರೂಂಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಹಗ್ಗ ಕಟ್‌ ಆಗಿ ಮನೋಜ್‌ ಶವ ಕೆಳಗೆ ಬಿದ್ದಿದ್ರೆ, ರಾಖೀ ಶವ ನೇಣು ಬಿಗಿದ ಸ್ಥಿತಿಯಲ್ಲೆ ಪತ್ತೆಯಾಗಿದೆ.

Tap to resize

4 ವರ್ಷಗಳ ಪ್ರೀತಿ, 4 ತಿಂಗಳ ಹಿಂದೆ ರಿಸಪ್ಷನ್, ರಾತ್ರಿ ಸಾವು..!
ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡ್ತಿದ್ದ ಮನೋಜ್‌ ಹಾಗೂ ರಾಖಿ 4 ವರ್ಷಗಳಿಂದ ಪ್ರೀತಿ ಮಾಡ್ತಿದ್ದರು. ಇಬ್ಬರ ಜಾತಿ ಬೇರೆ ಬೇರೆಯಾಗಿದ್ದರಿಂದ ಕುಟುಂಬಸ್ಥರ ವಿರೋಧದ ನಡುವೆ 2 ವರ್ಷಗಳ ಹಿಂದೆ ಮದುವೆ ರಜಿಸ್ಟರ್‌ ಮದುವೆಯಾಗಿದ್ದರು. ಆದ್ರೆ 4 ತಿಂಗಳ ಹಿಂದೆ ಕುಟುಂಬಸ್ಥರ ಮನವೊಲಿಕೆ ಮಾಡಿ ಅಧಿಕೃತ ಸಂಸಾರಕ್ಕೆ ಕಾಲಿಟ್ಟಿದ್ದರು. ಅದ್ದೂರಿಯಾಗಿ ರಿಸಪ್ಷನ್‌ ಕೂಡ ಮಾಡಿಕೊಂಡು ಬಂಧು-ಬಳಗಕ್ಕೆ ಊಟಕ್ಕೆ ಹಾಕಿದ್ದರು. ಆದ್ರೆ ಕೆಲ ದಿನಗಳಿಂದ ಇಬ್ಬರ ನಡುವೆ ಶುರುವಾಗಿದ್ದ ತಕರಾರು, ಜಗಳ ಪರಲೋಕ ಸೇರಿಸಿದೆ.

ಸೋಶಿಯಲ್‌ ಮೀಡಿಯಾದಲ್ಲೂ ಆಕ್ಟಿವ್‌ ಆಗಿದ್ದ ಜೋಡಿ..!
ಇಬ್ಬರು ನಡುವೆ ಪ್ರೀತಿ ಯಾವ ಮಟ್ಟಿಗೆ ಇತ್ತು ಎಂದ್ರೆ ಇಬ್ಬರು ಡಬ್‌ ಸ್ಮಾಶ್‌, ರೀಲ್ಸ್‌ ಗಳನ್ನ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಆಕ್ಟಿವ್‌ ಆಗಿದ್ದರು. ಲವ್‌ ಸಾಂಗ್‌ ಗಳಿಗೆ ಡಾನ್ಸ್‌ ಮಾಡಿ ರೀಲ್ಸ್‌ ಮಾಡ್ತಿದ್ರು. ಇನ್ಸ್ಟಾಗ್ರಾಂ, ಪೇಸ್ಬುಕ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ವಿಡಿಯೋಗಳನ್ನ ಅಪ್ಲೋಡ್‌ ಮಾಡುತ್ತಿದ್ದರು. ಈ ಜೋಡಿ ಸಾವಿಗೆ ಶರಣಾಗಿರೋದು ಅಚ್ಚರಿ ಮೂಡಿಸಿದೆ.

ಮನೋಜ ಕುಮಾರ್ ಅವರ ತಾಯಿ ಭಾರತಿ ಅವರು ನವದಂಪತಿ ಏಕಾಂತದಲ್ಲಿ ಇರುವುದಕ್ಕೆ ಅವಕಾಶ ಒದಗಿಸಲೆಂದು ಮಗಳ ಊರಿಗೆ ಹೋಗಿದ್ದರು. ರಾತ್ರಿ ಫೋನ್ ಮಾಡಿ ಆರೋಗ್ಯ ಕುಶಲೋಪರಿ ವಿಚಾರಿಸಿ ನಾಳೆ ಬೆಳಗ್ಗೆ ಊರಿಗೆ ಬರುವುದಾಗಿ ತಿಳಿಸಿದ್ದಾರೆ.

ಬೆಳಗ್ಗೆ ಮಗಳ ಊರಿನಿಂದ ಬಂದ ಮನೋಜ್‌ನ ತಾಯಿ ಭಾರತಿ ಅವರು ಮನೆಗೆ ಬಂದು ನೋಡಿದಾಗ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದರಿಂದ ಶಾಕ್‌ಗೆ ಒಳಗಾದ ತಾಯಿ ನೆರೆಹೊರೆಯವರಿಗೆ ತಿಳಿಸಿದ್ದಾರೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ತಿಳಿಯದ ಸಾವಿನ ನಿಖರ ಕಾರಣ..!
ಇನ್ನೂ ಇಷ್ಟು ಅನ್ಯೋನ್ಯತೆಯಿಂದ ಇದ್ದ ಜೋಡಿ ದಿಢೀರ್‌ ಆತ್ಮಹತ್ಯೆಗೆ ಶರಣಾಗಿದ್ದು ಅಚ್ಚರಿ ಮೂಡಿಸಿದೆ. ಅಷ್ಟಕ್ಕು ಇಬ್ಬರ ನಡುವೆ ಯಾವ ಕಾರಣಕ್ಕೆ ಜಗಳ ಇತ್ತು? ಇಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವೇನು ಅನ್ನೋದು ಸ್ಪಷ್ಟವಾಗಿಲ್ಲ.

ಇಬ್ಬರ ನಡುವೆ ಸಂಶಯದ ಸುಳಿ ಸುಳಿದಾಡಿತ್ತಾ? ಒಬ್ಬರ ಮೇಲೆ ಒಬ್ಬರು ಅನುಮಾನ ಪಟ್ಟು ಜಗಳವಾಡಿದ್ರಾ ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಜಲನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆಯನ್ನ ಪೊಲೀಸರು ಕೈಗೊಂಡಿದ್ದಾರೆ.

Latest Videos

click me!