T20 World Cup 2024: ಆಫ್ಘಾನ್‌ಗೆ ಶರಣಾದ ಆಸ್ಟ್ರೇಲಿಯಾ; ತಲೆಕೆಳಗಾದ ಸೆಮೀಸ್ ಲೆಕ್ಕಾಚಾರ...!

First Published | Jun 23, 2024, 4:23 PM IST

ಕಿಂಗ್ಸ್‌ಟೌನ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಟೂರ್ನಿಯಲ್ಲಿಂದು ಅಚ್ಚರಿಯ ಫಲಿತಾಂಶ ಎದುರಾಗಿದ್ದು, ಬಲಾಢ್ಯ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಬಾರಿಗೆ ಸೋಲುಣಿಸುವಲ್ಲಿ ಆಫ್ಘಾನಿಸ್ತಾನ ತಂಡವು ಯಶಸ್ವಿಯಾಗಿದೆ. ಈ ಮೂಲಕ 'ಎ' ಗುಂಪಿನಿಂದ ಸೆಮೀಸ್ ಪ್ರವೇಶಿಸುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ಲೆಕ್ಕಾಚಾರ ತಲೆ ಕೆಳಗಾಗಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.
 

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ಸೂಪರ್ 8 ಹಂತದ ಪಂದ್ಯದಲ್ಲಿ ರಶೀದ್ ಖಾನ್ ನೇತೃತ್ವದ ಆಫ್ಘಾನಿಸ್ತಾನ ತಂಡವು 21 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ.

ಆಫ್ಘಾನಿಸ್ತಾನ ತಂಡದಲ್ಲಿ ವಿಶ್ವಶ್ರೇಷ್ಠ ಸ್ಪಿನ್ ಬೌಲಿಂಗ್ ಆಲ್ರೌಂಡರ್‌ಗಳಿದ್ದರೂ, ಗುಲ್ಬದ್ದೀನ್ ನೈಬ್ ಹಾಗೂ ನವೀನ್ ಉಲ್ ಹಕ್ ಅವರ ಮಾರಕ ದಾಳಿಯ ನೆರವಿನಿಂದ ಆಸೀಸ್‌ ತಂಡವನ್ನು ಆಲೌಟ್‌ ಮಾಡಿದ ರಶೀದ್ ಖಾನ್ ಪಡೆ ಸೆಮೀಸ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

Tap to resize

ಸದ್ಯ ಗ್ರೂಪ್‌ 1 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಅನಾಯಾಸವಾಗಿ ಸೆಮೀಸ್‌ಗೆ ಲಗ್ಗೆಯಿಡಲಿವೆ ಎಂದೇ ಭಾವಿಸಲಾಗಿತ್ತು. ಆದರೆ ಆಸೀಸ್-ಆಫ್ಘಾನ್ ಪಂದ್ಯದ ಫಲಿತಾಂಶ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ.

ಸದ್ಯ ಸೂಪರ 8 ಹಂತದಲ್ಲಿ ಭಾರತ ತಾನಾಡಿದ ಎರಡು ಪಂದ್ಯ ಗೆದ್ದು ಗ್ರೂಪ್ 1ರಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೇ, ಆಸ್ಟ್ರೇಲಿಯಾ ಹಾಗೂ ಆಫ್ಘಾನಿಸ್ತಾನ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸಿವೆ. ಇನ್ನು ಬಾಂಗ್ಲಾದೇಶ ತಂಡವು ತಾನಾಡಿದ ಎರಡು ಪಂದ್ಯ ಸೋತು ಸೆಮೀಸ್‌ ರೇಸ್‌ನಿಂದ ಹೊರಬಿದ್ದಿದೆ.

ಈಗ ಸೆಮೀಸ್ ಲೆಕ್ಕಾಚಾರ ಹೇಗಿದೆ ನೋಡೋಣ ಬನ್ನಿ:

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಸೂಪರ್ 8 ಹಂತದಲ್ಲಿ ಎರಡು ಪಂದ್ಯ ಜಯಿಸಿದ್ದು, ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಟೀಂ ಇಂಡಿಯಾ ನೆಟ್ ರನ್‌ರೇಟ್ +2.425 ಆಗಿದೆ.

ಬಹುತೇಕ ಟೀಂ ಇಂಡಿಯಾ ಈಗಾಗಲೇ ಸೆಮೀಸ್‌ನೊಳಗೆ ಒಂದು ಕಾಲು ಇಟ್ಟಿದೆ. ಒಂದು ವೇಳೆ ಆಸ್ಟ್ರೇಲಿಯಾ ಎದುರು ಭಾರತ ಗೆಲುವಿನ ನಗೆ ಬೀರಿದರೆ ಅಗ್ರಸ್ಥಾನಿಯಾಗಿಯೇ ಸೆಮೀಸ್‌ಗೆ ಎಂಟ್ರಕೊಡಲಿದೆ. ಒಂದು ವೇಳೆ ಆಸೀಸ್‌ ಎದುರು ಭಾರತ ದೊಡ್ಡ ಅಂತರದಲ್ಲಿ ಸೋಲು ಅನುಭವಿಸಿದರೆ ಸೆಮೀಸ್‌ ರೇಸ್‌ನಿಂದಲೂ ಹೊರಬೀಳುವ ಸಾಧ್ಯತೆಯಿದೆ.

ಆಸ್ಟ್ರೇಲಿಯಾ ತಂಡದ ಪಾಲಿಗೆ ಭಾರತ ಎದುರಿನ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ. ಸದ್ಯ ಆಸೀಸ್‌ ನೆಟ್‌ ರನ್‌ರೇಟ್ +0.223 ಆಗಿದ್ದು, ಒಂದು ವೇಳೆ ಭಾರತ ಎದುರು ಆಸೀಸ್ ಸೋಲು ಕಂಡರೇ, ಸೂಪರ್ 8 ಹಂತದಲ್ಲೇ ಆಸೀಸ್ ಜರ್ನಿ ಕೊನೆಯಾಗಲಿದೆ.
 

ಆಸ್ಟ್ರೇಲಿಯಾ ತಂಡವು ಭಾರತ ಎದುರು ಸೋತರೇ, ಇದೇ ವೇಳೆ ಬಾಂಗ್ಲಾದೇಶ ಎದುರು ಆಫ್ಘಾನಿಸ್ತಾನ ತಂಡವು ಗೆಲುವು ಸಾಧಿಸಿದರೆ, ಗ್ರೂಪ್ 1ರಿಂದ ಭಾರತ ಹಾಗೂ ಆಫ್ಘಾನಿಸ್ತಾನ ತಂಡಗಳು ಸೆಮೀಸ್‌ಗೇರಲಿದ್ದು, ಆಸೀಸ್ ಅಭಿಯಾನ ಕೊನೆಯಾಗಲಿದೆ.

ರಶೀದ್ ಖಾನ್ ನೇತೃತ್ವದ ಆಫ್ಘಾನಿಸ್ತಾನಕ್ಕೂ ಕೂಡಾ ಬಾಂಗ್ಲಾದೇಶ ಎದುರಿನ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ. ಸದ್ಯ ಆಫ್ಘಾನ್ ತಂಡದ ನೆಟ್‌ ರನ್ ರೇಟ್ -0.650 ಆಗಿದೆ.

ಒಂದು ವೇಳೆ ಭಾರತ ಎದುರು ಆಸ್ಟ್ರೇಲಿಯಾ ಸೋತರೇ, ಬಾಂಗ್ಲಾ ಎದುರು ಆಫ್ಘಾನ್ ಗೆದ್ದರೇ ರಶೀದ್ ಖಾನ್ ಪಡೆ ಸೆಮೀಸ್‌ಗೇರಲಿದೆ. ಇದಷ್ಟೇ ಅಲ್ಲದೇ ಒಂದು ವೇಳೆ ಆಸೀಸ್‌ ಎದುರು ಭಾರತ ದೊಡ್ಡ ಅಂತರದ ಗೆಲುವು ಸಾಧಿಸಿದರೆ, ಆಫ್ಘಾನ್‌ ತಂಡವು ಬಾಂಗ್ಲಾ ತಂಡವು ಸಣ್ಣ ಅಂತರದ ಸೋಲು ಅನುಭವಿಸಿದರೂ ನೆಟ್‌ ರನ್‌ರೇಟ್ ಆಧಾರದಲ್ಲಿ ಸೆಮೀಸ್‌ಗೇರಬಹುದು.

ಬಾಂಗ್ಲಾದೇಶ ತಂಡವು ಈಗಾಗಲೇ ಮೊದಲೆರಡು ಪಂದ್ಯ ಸೋಲು ಅನುಭವಿಸುವ ಮೂಲಕ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆಯಾದರೂ ಅದಿನ್ನು ಅಧಿಕೃತವಾಗಿಲ್ಲ. ಒಂದು ವೇಳೆ ಬಾಂಗ್ಲಾದೇಶ ತಂಡವು ಆಫ್ಘಾನ್ ಎದುರು ಅತಿದೊಡ್ಡ ಅಂತರದ ಗೆಲುವು ಸಾಧಿಸಿದರೆ, ಅದೇ ರೀತಿ ಆಸ್ಟ್ರೇಲಿಯಾ ಎದುರು ಭಾರತ ಕೂಡಾ ಅತಿದೊಡ್ಡ ಗೆಲುವು ಸಾಧಿಸಿದರೆ, ಬಾಂಗ್ಲಾದೇಶ ಪವಾಡಸದೃಶ ರೀತಿಯಲ್ಲಿ ಸೆಮೀಸ್‌ಗೇರಬಹುದು.

Latest Videos

click me!