2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ವಿದಾಯದಿಂದ ಮರಳುತ್ತಿದ್ದಾರೆ. ಹೌದು. ಯುವಿ ಈಗಾಗಲೇ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಮಹತ್ವದ ಟೂರ್ನಿಗೆ ಪ್ರಕಟಿಸಿದ ಸಂಭವನೀಯ ತಂಡದಲ್ಲಿ ಯುವಿ ಕಾಣಿಸಿಕೊಂಡಿದ್ದಾರೆ.
ಬಿಸಿಸಿಐ ಸಯ್ಯದ್ ಮುಷ್ತಾಕ್ ಆಲಿ ಟಿ20 ಟೂರ್ನಿ ಆಯೋಜಿಸುವುದಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ಆಯಾ ರಾಜ್ಯಗಳು ಸಂಭವನೀಯ ತಂಡ ಪ್ರಕಟಿಸುತ್ತಿದೆ.
ಪಂಜಾಬ್ ಕ್ರಿಕೆಟ್ ಸಂಸ್ಥೆ ಸಯ್ಯದ್ ಮುಷ್ತಾಕ್ ಆಲಿ ಟೂರ್ನಿಗೆ ಸಂಭವನೀಯ 30 ಆಟಗಾರರ ತಂಡ ಪ್ರಕಟಿಸಿದೆ. ಈ ತಂಡದಲ್ಲಿ ಯುವರಾಜ್ ಸಿಂಗ್ ಹೆಸರನ್ನು ಪಂಜಾಬ್ ಪ್ರಕಟಿಸಿದೆ
ಕಳೆದ ವರ್ಷ ಜೂನ್ ತಿಂಗಳಲ್ಲಿ ಯುವಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇತ್ತೀಚೆಗೆ ಯುವಿ ಪಂಜಾಬ್ ತಂಡ ಪ್ರತಿನಿಧಿಸುವುದಾಗಿ ಪಂಜಾಬ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಪುನೀತ್ ಬಾಲಿ ಬಳಿ ಹೇಳಿಕೊಂಡಿದ್ದರು.
ಸಯ್ಯದ್ ಮುಷ್ತಾಕ್ ಆಲಿ ಟಿ20 ಟೂರ್ನಿಗೆ ಕೇರಳ ಕ್ರಿಕೆಟ್ ಸಂಸ್ಥೆ ಕೂಡ 26 ಸದಸ್ಯರ ಸಂಭವನೀಯ ತಂಡ ಪ್ರಕಟಿಸಿದೆ. ಈ ತಂಡದಲ್ಲಿ 37 ವರ್ಷದ ಶ್ರೀಶಾಂತ್ ಸ್ಥಾನ ಪಡೆದಿದ್ದಾರೆ.
2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಲ್ಲಿ ಜೈಲು ಸೇರಿದ್ದ ಶ್ರೀಶಾಂತ್‌ಗೆ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಇತ್ತ ಬಿಸಿಸಿಐ ಆಜೀವ ನಿಷೇಧವನ್ನು ಕಡಿತಗೊಳಿಸಿತ್ತು.
ಕೇರಳ ಪ್ರಕಟಿಸಿದ ಸಂಭವನೀಯ ತಂಡದಲ್ಲಿ ಸಂಜು ಸಾಮ್ಸನ್, ಸಚಿನ್ ಬೇಬಿ, ಕನ್ನಡಿಗ ರಾಬಿನ್ ಉತ್ತಪ್ಪ, ಜಲಜ್ ಸಕ್ಸೇನಾ, ಬಸಿಲ್ ಥಂಪಿ ಸೇರಿದಂತೆ ಹಲವು ಪ್ರಮುಖರು ಸ್ಥಾನ ಪಡೆದಿದ್ದಾರೆ.
39 ವರ್ಷದ ಯುವರಾಜ್ ಸಿಂಗ್ ವಿದಾಯದ ಬಳಿಕ ಕೆನಡಾ ಟಿ20 ಲೀಗ್ ಟೂರ್ನಿ ಆಡಿದ್ದರು. ಇದೀಗ ಯುವಿ ಮೊಹಾಲಿ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ಅತ್ತ ಶಾಂತಕುಮಾರನ್ ಶ್ರೀಶಾಂತ್ ಇಂದಿನಿಂದ(ಡಿ.17) ಕೇರಳ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವ ಸ್ಥಳೀಯ ಟಿ20 ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.