ಟಿ20 ವಿಶ್ವಕಪ್ ವೇಳೆ ಕ್ಯಾಪ್ಟನ್ ಮೇಲೆ ಸಿಟ್ಟಾಗಿದ್ದ ಸ್ಟಾರ್ ಕ್ರಿಕೆಟಿಗ! ಕೊನೆಗೂ ತಪ್ಪಾಯ್ತು ಅಂತ ಕ್ಷಮೆ ಕೇಳಿದ ಸೂರ್ಯಕುಮಾರ್ ಯಾದವ್!

Published : Mar 12, 2026, 12:43 PM IST

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಯಶಸ್ವಿಯಾಗಿ ಮುಕ್ತಾಯವಾಗಿ ಒಂದು ವಾರ ಸಮೀಪಿಸುತ್ತಿದ್ದರೂ, ಅದರ ಕುರಿತಾದ ಚರ್ಚೆಗಳು ಮಾತ್ರ ನಿಂತಿಲ್ಲ. ಇದೀಗ ಈ ಟೂರ್ನಿಯ ವೇಳೆಯಲ್ಲಿ ಸೂರ್ಯಕುಮಾರ್ ಯಾದವ್ ಮೇಲೆ ಸಹ ಆಟಗಾರ ಸಿಟ್ಟಾಗಿರುವ ವಿಚಾರ ಬಹಿರಂಗವಾಗಿದೆ. 

PREV
16
ಕ್ಯಾಪ್ಟನ್ ಮೇಲೆ ಸಿಟ್ಟಾಗಿದ್ದ ಟೀಂ ಇಂಡಿಯಾ ಆಟಗಾರ

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನ್ಯೂಜಿಲೆಂಡ್ ಎದುರು ಫೈನಲ್‌ನಲ್ಲಿ ಭಾರತ 96 ರನ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಬಾರಿಗೆ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಟೂರ್ನಿಯ ವೇಳೆಯಲ್ಲಿ ಭಾರತದ ಸ್ಟಾರ್ ಆಟಗಾರ, ನಾಯಕ ಸೂರ್ಯಕುಮಾರ್ ಯಾದವ್ ಮೇಲೆ ಸಿಟ್ಟಾಗಿದ್ದ ವಿಚಾರವೀಗ ಬಹಿರಂಗವಾಗಿದೆ.

26
ಅಕ್ಷರ್ ಪಟೇಲ್ ಕೈಬಿಟ್ಟಿದ್ದು ಭಾರತದ ಹಿನ್ನಡೆಗೆ ಕಾರಣ!

ಹೌದು, ಟೀಂ ಇಂಡಿಯಾ ಉಪನಾಯಕ ಅಕ್ಷರ್ ಪಟೇಲ್ ಅವರನ್ನು ಈ ಬಾರಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಒಂಬತ್ತು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಕೈಬಿಡಲಾಗಿತ್ತು. ಆ ಎರಡೂ ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿತ್ತು. ಅದರಲ್ಲೂ ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರನ್ನು ಕೈಬಿಟ್ಟಿದ್ದು ಭಾರತ ತಂಡದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಏಕೆಂದರೆ ಆ ಮಹತ್ವದ ಪಂದ್ಯದಲ್ಲಿ ಭಾರತ 76 ರನ್‌ ಅಂತರದ ಸೋಲು ಅನುಭವಿಸಿತ್ತು.

36
ಅಕ್ಷರ್ ಕಡೆಗಣನೆ: ಟೀಕೆಗೆ ಗುರಿಯಾಗಿದ್ದ ಟೀಮ್ ಮ್ಯಾನೇಜ್‌ಮೆಂಟ್

ದಕ್ಷಿಣ ಆಫ್ರಿಕಾ ಎದುರಿನ ಮಹತ್ವದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಅವರನ್ನು ಕೈಬಿಟ್ಟ ಟೀಮ್ ಮ್ಯಾನೇಜ್‌ಮೆಂಟ್ ನಡೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇನ್ನು ಟೀಮ್‌ ಮ್ಯಾನೇಜ್‌ಮೆಂಟ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಮೇಲೆ ಅಕ್ಷರ್ ಪಟೇಲ್ ಸಿಟ್ಟಾಗಿದ್ದರು ಎಂದು ಸ್ವತಃ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

46
ಸೂರ್ಯಕುಮಾರ್ ಯಾದವ್ ಮೇಲೆ ಸಿಟ್ಟಾಗಿದ್ದ ಅಕ್ಷರ್ ಪಟೇಲ್

ಅಕ್ಷರ್ ಪಟೇಲ್ ನನ್ನ ಮೇಲೆ ತುಂಬಾನೆ ಸಿಟ್ಟಾಗಿದ್ದರು. ಯಾಕೆಂದರೆ ಅವರು ತುಂಬಾ ಅನುಭವಿ ಆಟಗಾರರಾಗಿದ್ದಾರೆ. ಅವರು ಫ್ರಾಂಚೈಸಿಯ ತಂಡವನ್ನು ಮುನ್ನಡೆಸಿದ ಅನುಭವ ಇರುವ ಆಟಗಾರರಾಗಿದ್ದಾರೆ. ಹೀಗಾಗಿ ಅವರು ಸಿಟ್ಟಾಗಿದ್ದರಲ್ಲಿ ಅರ್ಥವಿದೆ. ನಾನು ಅವರ ಬಳಿ ಕ್ಷಮೆ ಕೇಳಿದೆ. ನಾನು ತಪ್ಪು ಮಾಡಿದೆ, ಕ್ಷಮಿಸು. ಆದರೆ ಆ ತೀರ್ಮಾನ ತಂಡದ ಒಳಿತಿಗಾಗಿ ತೆಗೆದುಕೊಂಡಿದ್ದೆವು ಎಂದು ತಿಳಿಸಿದೆ.

56
ಹರಿಣಗಳ ಎದುರಿನ ಸೋಲಿನ ಬಳಿಕ ಎಚ್ಚೆತ್ತುಕೊಂಡ ಟೀಂ ಇಂಡಿಯಾ

ದಕ್ಷಿಣ ಆಫ್ರಿಕಾ ಎದುರಿನ ಸೋಲು ನಮಗೆ ಕಣ್ಣು ತೆರೆಸುವಂತೆ ಮಾಡಿತು. ಈ ತಂಡದ ಆಟಗಾರರ ಸಾಮರ್ಥ್ಯದ ಬಗ್ಗೆ ನನಗೆ ಯಾವುದೇ ಅನುಮಾನ ಇರಲಿಲ್ಲ. ಆದರೆ ಆ ಸೋಲು ನಾವು ಎಚ್ಚೆತ್ತುಕೊಳ್ಳುವಂತೆ ಮಾಡಿತು. ಇದಾದ ಬಳಿಕ ಜಿಂಬಾಬ್ವೆ, ವೆಸ್ಟ್ ಇಂಡೀಸ್ ಎದುರಿನ ಪಂದ್ಯ ಸೇರಿದಂತೆ ಸೆಮೀಸ್ ಹಾಗೂ ಫೈನಲ್ ಪಂದ್ಯಗಳನ್ನು ನಾಕೌಟ್ ಪಂದ್ಯದಂತೆಯೇ ಆಡಿದೆವು ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.

66
ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಂ ಇಂಡಿಯಾ

ಸೂಪರ್-8 ಎದುರಿನ ದಕ್ಷಿಣ ಆಫ್ರಿಕಾ ಎದುರಿನ ಸೋಲಿನ ಬಳಿಕ ಟೀಂ ಇಂಡಿಯಾ ಪಾಲಿಗೆ ಪ್ರತಿ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿತ್ತು. ಅದರಲ್ಲೂ ಸಂಜು ಸ್ಯಾಮ್ಸನ್ ಕಮ್‌ಬ್ಯಾಕ್ ಬಳಿಕ ಟೀಂ ಇಂಡಿಯಾ ಮತ್ತಷ್ಟು ಸದೃಢವಾಗುವುದರ ಜತೆಗೆ ಅದ್ಭುತ ಪ್ರದರ್ಶನ ತೋರುವ ಮೂಲಕ ಮತ್ತೊಮ್ಮೆ ಟಿ20 ವಿಶ್ವಕಪ್ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಯಿತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories