ಈ ಸಲದ ಐಪಿಎಲ್‌ನಲ್ಲಿ ದಾಖಲೆಗಳ ಅಬ್ಬರ..! ಕಂಡು-ಕೇಳರಿಯದ ದಾಖಲೆ ನಿರ್ಮಾಣ..!

First Published | May 28, 2024, 10:23 AM IST

ಚೆನ್ನೈ: ಕ್ರಿಕೆಟ್‌ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಒದಗಿಸಿದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿ ಅದ್ಧೂರಿ ತೆರೆ ಕಂಡಿದೆ. ಮಾ.22ರಂದು ಚೆನ್ನೈನಲ್ಲಿ ಚಾಲನೆ ಲಭಿಸಿದ್ದ 17ನೇ ಆವೃತ್ತಿ ಟೂರ್ನಿ ಚೆನ್ನೈನಲ್ಲೇ ಭಾನುವಾರ ಮುಕ್ತಾಯಗೊಂಡಿದೆ. ಈ ಬಾರಿಯ ಐಪಿಎಲ್ ಟೂರ್ನಿಯು ಹತ್ತು ಹಲವು ಅಪರೂಪದ ದಾಖಲೆಗಳಿಗೆ ಸಾಕ್ಷಿಯಾದವು.

ಲೋಕಸಭಾ ಚುನಾವಣೆ ಕಾರಣಕ್ಕೆ ವೇಳಾಪಟ್ಟಿ ಪ್ರಕಟದ ವೇಳೆ ಕೆಲ ಗೊಂದಲ ಉಂಟಾದರೂ, ಯಾವುದೇ ದೊಡ್ಡ ವಿವಾದಗಳಿಲ್ಲದೇ ಟೂರ್ನಿಗೆ ತೆರೆ ಬಿದ್ದಿದೆ. 

10 ತಂಡಗಳ ಹಲವು ಸ್ಟಾರ್‌ ಆಟಗಾರರು ಹಿಂದೆಂದಿಗಿಂತಲೂ ಹೆಚ್ಚಾಗಿ ಈ ಬಾರಿ ತಮ್ಮ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಬೆಂಗಳೂರು ಸೇರಿದಂತೆ ದೇಶದ ವಿವಿಧ 13 ಕ್ರೀಡಾಂಗಣಗಳಲ್ಲಿ, ಒಟ್ಟು 70 ಲೀಗ್ ಹಂತದ ಪಂದ್ಯಗಳು, 4 ನಾಕೌಟ್‌ ಪಂದ್ಯಗಳು ನಡೆದವು.

Tap to resize

ಈ ಹಿಂದಿನ ಯಾವ ಆವೃತ್ತಿಗಳಲ್ಲೂ ಕಾಣದ ಹಲವು ದಾಖಲೆಗಳು ಸೃಷ್ಟಿಯಾಗಿದ್ದು ಈ ಬಾರಿಯ ವಿಶೇಷ. ಬೌಲರ್‌ಗಳು ನಿರೀಕ್ಷೆಗಿಂತ ಹೆಚ್ಚು ದುಬಾರಿಯಾಗಿ, ಬ್ಯಾಟರ್‌ಗಳು ಆರ್ಭಟಿಸಿದ್ದು ಟೂರ್ನಿಯ ಪ್ರಮುಖ ಆಕರ್ಷಣೆ. ಬೌಂಡರಿ, ಸಿಕ್ಸರ್‌, ಸೆಂಚುರಿ, ಹೈಸ್ಕೋರ್‌ ಸೇರಿ ಹಲವು ದಾಖಲೆಗಳಿಗೆ 2024ರ ಐಪಿಎಲ್‌ ಸಾಕ್ಷಿಯಾಯಿತು.

41 ಬಾರಿ 200+ ಸ್ಕೋರ್‌!

ಈ ಬಾರಿ ಐಪಿಎಲ್‌ನಲ್ಲಿ 200+ ಮೊತ್ತಕ್ಕೆ ಬೆಲೆಯೇ ಇಲ್ಲ ಎಂಬಂತಾಗಿದ್ದು ಸುಳ್ಳಲ್ಲ. ಫೈನಲ್‌ಗೂ ಮುನ್ನ ಒಟ್ಟು 41 ಇನ್ನಿಂಗ್ಸ್‌ಗಳಲ್ಲಿ 200+ ಮೊತ್ತ ದಾಖಲಾದವು. ಇದು ಆವೃತ್ತಿಯೊಂದರಲ್ಲಿ ಗರಿಷ್ಠ. 2023ರಲ್ಲಿ 37 ಬಾರಿ ತಂಡಗಳ ಸ್ಕೋರ್‌ 200ರ ಗಡಿ ದಾಟಿತ್ತು. ಈ ಬಾರಿ ಸನ್‌ರೈಸರ್ಸ್‌ ಹೈದರಾಬಾದ್‌, ಆರ್‌ಸಿಬಿ ಹಾಗೂ ಕೆಕೆಆರ್‌ ತಲಾ 6 ಬಾರಿ 200+ ಮೊತ್ತ ಗಳಿಸಿದವು.

8 ಬಾರಿ 250ಕ್ಕೂ ಹೆಚ್ಚು ರನ್‌: ಹೊಸ ದಾಖಲೆ!

ಟಿ20 ಕ್ರಿಕೆಟ್‌ನ ಇನ್ನಿಂಗ್ಸ್‌ವೊಂದರಲ್ಲಿ 250 ರನ್‌ ದಾಖಲಾಗುವುದು ಅಪರೂಪ ಎಂಬ ಕಾಲವಿತ್ತು. ಆದರೆ ಅದನ್ನು ಈ ಬಾರಿ ಐಪಿಎಲ್‌ ಅಕ್ಷರಶಃ ಸುಳ್ಳಾಗಿಸಿತು. ಈ ಆವೃತ್ತಿಗೂ ಮುನ್ನ ತಂಡವೊಂದು ಇನ್ನಿಂಗ್ಸ್‌ನಲ್ಲಿ 250+ ಗಳಿಸಿದ್ದು ಕೇವಲ 2 ಬಾರಿ. 2013 ಮತ್ತು 2023ರಲ್ಲಿ ತಲಾ 1 ಬಾರಿ 250+ ಸ್ಕೋರ್‌ ದಾಖಲಾಗಿದ್ದವು.

ಆದರೆ ಈ ಬಾರಿ 8 ಸಲ ತಂಡದ ಮೊತ್ತ 250ರ ಗಡಿ ದಾಟಿತು. ಸನ್‌ರೈಸರ್ಸ್‌ ತಂಡವೇ 3 ಬಾರಿ ಈ ಮೈಲುಗಲ್ಲು ಸಾಧಿಸಿ ಎಲ್ಲರ ಹುಬ್ಬೇರಿಸಿತು. ಕೆಕೆಆರ್‌ 2 ಬಾರಿ ಈ ಸಾಧನೆ ಮಾಡಿದರೆ, ಆರ್‌ಸಿಬಿ, ಪಂಜಾಬ್‌, ಡೆಲ್ಲಿ ಕೂಡಾ ತಲಾ 1 ಬಾರಿ 250+ ಸ್ಕೋರ್‌ ದಾಖಲಿಸಿದವು.

1,250ಕ್ಕೂ ಹೆಚ್ಚು ಸಿಕ್ಸರ್!

ಐಪಿಎಲ್‌ನ ಪ್ರತಿ ಆವೃತ್ತಿಯಲ್ಲೂ ಸಿಕ್ಸರ್‌ಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇವೆ. ಈ ಬಾರಿ ಅದರ ಸಂಖ್ಯೆ 1250ರ ಗಡಿ ದಾಟಿತು. ಆವೃತ್ತಿಯೊಂದಲ್ಲಿ ಅತಿಹೆಚ್ಚು ಸಿಕ್ಸರ್‌ ದಾಖಲಾಗಿದ್ದನ್ನು ಈ ಬಾರಿ ನೋಡಿದೆವು.

2022ರಲ್ಲಿ 1062 ಹಾಗೂ 2023ರಲ್ಲಿ 1124 ಸಿಕ್ಸರ್‌ಗಳು ದಾಖಲಾಗಿದ್ದವು. ಎಸೆತಗಳ ಆಧಾರದಲ್ಲಿ ಅತಿ ವೇಗವಾಗಿ 1000 ಸಿಕ್ಸರ್‌ಗಳ ಮೈಲುಗಲ್ಲು ಸಾಧಿಸಿದ್ದು ಈ ಆವೃತ್ತಿಯ ವಿಶೇಷತೆ. ಈ ಸಲ 13079 ಎಸೆತಗಳಲ್ಲಿ 1000 ಸಿಕ್ಸರ್‌ ಸಿಡಿದರೆ, ಕಳೆದ ವರ್ಷ ಇಷ್ಟೇ ಸಿಕ್ಸರ್‌ಗೆ 15390 ಎಸೆತಗಳು ಬೇಕಾಗಿದ್ದವು.

13 ಬ್ಯಾಟರ್‌ಗಳಿಂದ ಒಟ್ಟು 14 ಸೆಂಚುರಿ

ಅತಿಹೆಚ್ಚು ಶತಕ ದಾಖಲಾಗಿದ್ದು ಈ ಐಪಿಎಲ್‌ನ ಮತ್ತೊಂದು ಪ್ರಮುಖಾಂಶ. ಈ ಆವೃತ್ತಿಯಲ್ಲಿ ಒಟ್ಟು 14 ಶತಕಗಳು ದಾಖಲಾದವು. 2022ರಲ್ಲಿ 12 ಸೆಂಚುರಿಗಳು ದಾಖಲಾಗಿದ್ದವು. ಈ ಬಾರಿ 13 ಬ್ಯಾಟರ್‌ಗಳು ಶತಕ ಸಿಡಿಸಿದ್ದು ಮತ್ತೊಂದು ದಾಖಲೆ. 

ಈ ವರೆಗಿನ ಯಾವುದೇ ಆವೃತ್ತಿಯಲ್ಲೂ 10 ಬ್ಯಾಟರ್‌ಗಳು ಶತಕ ಸಿಡಿಸಿದ ಉದಾಹರಣೆ ಇರಲಿಲ್ಲ. 2022ರಲ್ಲಿ 9 ಬ್ಯಾಟರ್‌ಗಳು ಶತಕ ಬಾರಿಸಿದ್ದರು. ಈ ವರ್ಷ ಜೋಸ್‌ ಬಟ್ಲರ್‌ 2 ಶತಕ ಸಿಡಿಸಿದರು.

549: ಪಂದ್ಯವೊಂದರ ದಾಖಲಾದ ಅತಿಹೆಚ್ಚು ರನ್‌!

ಐಪಿಎಲ್‌ನ ಪಂದ್ಯವೊಂದರಲ್ಲಿ ಅತಿಹೆಚ್ಚು ರನ್ ದಾಖಲಾಗಿದ್ದ 2024ರಲ್ಲಿ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ-ಸನ್‌ರೈಸರ್ಸ್‌ ಪಂದ್ಯದಲ್ಲಿ ಒಟ್ಟು 549 ರನ್‌ ದಾಖಲಾಯಿತು. 

ಸನ್‌ರೈಸರ್ಸ್-ಮುಂಬೈ ಪಂದ್ಯದಲ್ಲಿ 523, ಕೆಕೆಆರ್‌-ಪಂಜಾಬ್‌ ಪಂದ್ಯದಲ್ಲಿ 523, ಡೆಲ್ಲಿ-ಮುಂಬೈ ಪಂದ್ಯದಲ್ಲಿ 504 ರನ್‌ ದಾಖಲಾಯಿತು.

ಐಪಿಎಲ್‌ನಲ್ಲಿ 100 ಸೆಂಚುರಿ!

ಐಪಿಎಲ್‌ ಇತಿಹಾಸದಲ್ಲೇ 100 ಸೆಂಚುರಿಗಳ ಮೈಲುಗಲ್ಲು ತಲುಪಿದ್ದು ಕೂಡಾ 2024ರಲ್ಲಿ. 2008ರಲ್ಲಿ ಆರ್‌ಸಿಬಿ ವಿರುದ್ಧ ಕೆಕೆಆರ್‌ನ ಬ್ರೆಂಡನ್‌ ಮೆಕಲಂ ಐಪಿಎಲ್‌ನ ಮೊದಲ ಶತಕ ಬಾರಿಸಿದ್ದರು. ಇತ್ತೀಚೆಗೆ ಚೆನ್ನೈ ವಿರುದ್ಧ ಗುಜರಾತ್‌ನ ಶುಭ್‌ಮನ್‌ ಗಿಲ್‌ ಬಾರಿಸಿದ ಶತಕ ಐಪಿಎಲ್‌ನ 100ನೇ ಶತಕ ಎನಿಸಿಕೊಂಡಿತು.

ಪವರ್‌-ಪ್ಲೇನಲ್ಲಿ ಅತಿಹೆಚ್ಚು ಮೊತ್ತ: ಹೊಸ ದಾಖಲೆ!

ಈ ಬಾರಿ ಐಪಿಎಲ್‌ನಲ್ಲಿ ಪವರ್‌-ಪ್ಲೇನಲ್ಲಿ ಅತಿಹೆಚ್ಚು ಮೊತ್ತದ ದಾಖಲೆಯೂ ನಿರ್ಮಾಣವಾಯಿತು. ಡೆಲ್ಲಿ ವಿರುದ್ಧ ಹೈದರಾಬಾದ್‌ ತಂಡ ಮೊದಲ 6 ಓವರ್‌ನಲ್ಲಿ 125 ರನ್‌ ಗಳಿಸಿತು. 2017ರಲ್ಲಿ ಕೋಲ್ಕತಾ ವಿರುದ್ಧ ಆರ್‌ಸಿಬಿ ಪವರ್‌-ಪ್ಲೇನಲ್ಲಿ 105 ರನ್‌ ಗಳಿಸಿದ್ದ ಈ ಆವೃತ್ತಿಗೂ ಮೊದಲಿದ್ದ ದಾಖಲೆ.

287 ರನ್‌: ಐಪಿಎಲ್‌ನಲ್ಲಿ ಗರಿಷ್ಠ ಮೊತ್ತದ ದಾಖಲೆ

2013ರಲ್ಲಿ ಆರ್‌ಸಿಬಿ ತಂಡ ಪುಣೆ ವಿರುದ್ಧ 263 ರನ್‌ ಗಳಿಸಿದ್ದು ಬರೋಬ್ಬರಿ 11 ವರ್ಷಗಳ ಕಾಲ ದಾಖಲೆಯಾಗಿಯೇ ಉಳಿದಿತ್ತು. ಆದರೆ ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ದಾಖಲೆ ಪತನವಾಗಿದ್ದು ಮಾತ್ರವಲ್ಲ, ತಂಡದ ಸ್ಕೋರ್ ಐಪಿಎಲ್‌ನ ಗರಿಷ್ಠ ರನ್‌ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿಯಿತು.

ಮುಂಬೈ ವಿರುದ್ಧ 277 ರನ್‌ ಸಿಡಿಸಿದ ಸನ್‌ರೈಸರ್ಸ್, ಬಳಿಕ ಆರ್‌ಸಿಬಿ ವಿರುದ್ಧ ಬೆಂಗಳೂರಲ್ಲಿ 287 ರನ್‌ ಬಾರಿಸಿ ತನ್ನದೇ ದಾಖಲೆ ಉತ್ತಮಗೊಳಿಸಿತು. ಡೆಲ್ಲಿ ವಿರುದ್ಧ ಕೆಕೆಆರ್‌ 272, ಡೆಲ್ಲಿ ವಿರುದ್ಧ ಸನ್‌ರೈಸರ್ಸ್‌ 266 ರನ್‌ ಕಲೆಹಾಕಿತು.

Latest Videos

click me!