IPL 2021ರ ಐಪಿಎಲ್ ಟೂರ್ನಿಗೆ 8 ತಂಡಗಳು ಸಜ್ಜಾಗಿದೆ. ಇತ್ತೀಚೆಗೆ ನಡೆದ ಹರಾಜಿನಲ್ಲಿ ಆಟಗಾರರನ್ನು ಖರೀದಿಸಿದ ತಂಡಗಳು ಮುಂಬರುವ ಐಪಿಎಲ್‌ಗೆ ತಯಾರಿ ಆರಂಭಿಸಿದೆ.
ನಿಷೇಧ ಶಿಕ್ಷೆ ಪೂರ್ಣಗೊಳಿಸಿ ವೃತ್ತಿಪರ ಕ್ರಿಕೆಟ್‌ಗೆ ಮರಳಿರುವ ಶ್ರೀಶಾಂತ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇತ್ತು. ಆದರೆ ಶ್ರೀಶಾಂತ್ ಹೆಸರನ್ನು ಬಿಸಿಸಿಐ ಅಂತಿಮ ಪಟ್ಟಿಯಿಂದ ತೆಗೆದುಹಾಕಿತ್ತು.
ಬಿಸಿಸಿಐ ಬಿಡುಗಡೆ ಮಾಡಿದ ಅಂತಿಮ 292 ಆಟಗಾರರ ಪಟ್ಟಿಯಲ್ಲಿ ಶ್ರೀಶಾಂತ್ ಹೆಸರು ಇರಲಿಲ್ಲ. ಹೀಗಾಗಿ ಹರಾಜಿನಲ್ಲಿ ಶ್ರೀ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದರೆ ಇದೀಗ ವಿಜಯ್ ಹಜಾರೆ ಟೂರ್ನಿಯಲ್ಲಿ ಶ್ರೀಶಾಂತ್ 5 ವಿಕೆಟ್ ಕಬಳಿಸಿ ಗಮನಸೆಳೆದಿದ್ದಾರೆ.
ತನ್ನಲ್ಲಿನ್ನು ಕ್ರಿಕೆಟ್ ಬಾಕಿ ಇದೆ. ವಯಸ್ಸು ಕೇವಲ ನಂಬರ್ ಮಾತ್ರ ಎಂದು 38ರ ಹರೆಯದ ಶ್ರೀಶಾಂತ್ ಸಾಬೀತುಪಡಿಸಿದ್ದಾರೆ. ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಶ್ರೀಶಾಂತ್ 7 ವರ್ಷಗಳ ಬಳಿಕ ಕ್ರಿಕೆಟ್ ಆಡುತ್ತಿದ್ದಾರೆ.
ಉತ್ತರ ಪ್ರದೇಶದ ವಿರುದ್ಧದ ವಿಜಯ್ ಹಜಾರೆ ಪಂದ್ಯದಲ್ಲಿ ಶ್ರೀಶಾಂತ್ 65 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ. ಶ್ರೀಶಾಂತ್ ಅಬ್ಬರಕ್ಕೆ ಕೇರಳ ಭರ್ಜರಿ ಗೆಲುವು ದಾಖಲಿಸಿದೆ.
ದೇಸಿ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಶಾಂತ್ 5 ವಿಕೆಟ್ ಸಾಧನೆ ಮಾಡಿ ಬರೋಬ್ಬರಿ 15 ವರ್ಷಗಳೇ ಉರುಳಿತ್ತು. ಇದೀಗ ಮತ್ತೆ 5 ವಿಕೆಟ್ ಕಬಳಿಸಿ ಐಪಿಎಲ್ ಫ್ರಾಂಚೈಸಿಗಳ ಗಮನಸೆಳೆದಿದ್ದಾರೆ.
ಐಪಿಎಲ್ ಹರಾಜು ಅಂತ್ಯಗೊಂಡರೂ ಶ್ರೀಶಾಂತ್ ಬಲವಾದ ನಂಬಿಕೆ ಇಟ್ಟಿದ್ದಾರೆ. ಇಂಜುರಿ, ಆಟಗಾರರ ಅಲಭ್ಯತೆ ಕಾರಣಗಳಿಂದ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರನ್ನು ತಂಡಕ್ಕೆ ಸೇರಿಸಿಕೊಳ್ಳುವು ಅವಕಾಶವಿದೆ. ಈ ಅವಾಕಾಶ ತನಗೆ ಒದಗಿ ಬರಲಿದೆ ಎಂದು ಶ್ರೀಶಾಂತ್ ನಂಬಿಕೆ ಇರಿಸಿದ್ದಾರೆ.
2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್‌ಗೆ ಬಿಸಿಸಿಐ ನಿಷೇಧದ ಶಿಕ್ಷೆ ವಿಧಿಸಿತ್ತು. ಕಾನೂನು ಹೋರಾಟ ಮುಂದುವರಿಸಿದೆ ಶ್ರೀಶಾಂತ್‌ಗೆ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಬರೋಬ್ಬರಿ 7 ವರ್ಷಗಳ ಬಳಿಕ ಶ್ರೀ ವೃತ್ತಿಪರ ಕ್ರಿಕೆಟ್‌ಗೆ ಮರಳಿದ್ದಾರೆ.