RCB ಗೆ ಚೊಚ್ಚಲ IPL ಕಪ್ ಗೆಲ್ಲಿಸಲು ಪಣತೊಟ್ಟು ಮದುವೆಯನ್ನೇ ಮುಂದೂಡಿದ ರಜತ್ ಪಾಟೀದಾರ್..! ಸೆಲ್ಯೂಟ್

First Published | May 21, 2024, 1:57 PM IST

ಬೆಂಗಳೂರು: ರಜತ್ ಪಾಟೀದಾರ್ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪೋಟಕ ಮಧ್ಯಮ ಕ್ರಮಾಂಕದ ಬ್ಯಾಟರ್‌ ಆರ್‌ಸಿಬಿಗೆ ಕಪ್‌ ಗೆಲ್ಲಿಸಲು ತಮ್ಮ ಮದುವೆಯನ್ನೇ ಮುಂದೂಡಿದ್ದು ಬಹುತೇಕ ಮಂದಿಗೆ ಗೊತ್ತಿಲ್ಲ. ನಾವಿಂದು ರಜತ್ ಪಾಟೀದಾರ್ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ ಬನ್ನಿ.

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ 6 ಗೆಲುವು ದಾಖಲಿಸುವ ಮೂಲಕ 4ನೇ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ.

ಆರ್‌ಸಿಬಿ ತಾನಾಡಿದ ಮೊದಲ 8 ಪಂದ್ಯಗಳ ಪೈಕಿ 7 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಆರಂಭಿಕ ಪಂದ್ಯಗಳಲ್ಲಿ ಆರ್‌ಸಿಬಿ ಪ್ರತಿಭಾನ್ವಿತ ಬ್ಯಾಟರ್ ರಜತ್ ಪಾಟೀದಾರ್ ಕೂಡಾ ವೈಪಲ್ಯ ಅನುಭವಿಸಿದ್ದರು.

Latest Videos


ಆದರೆ ಆರ್‌ಸಿಬಿ ಸತತ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇ ಆಫ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಆರ್‌ಸಿಬಿ ಪವಾಡಸದೃಶ ರೀತಿಯಲ್ಲಿ ಪ್ಲೇ ಆಫ್‌ಗೇರಲು ಪ್ರಮುಖ ಕಾರಣ ಮಧ್ಯಪ್ರದೇಶ ಮೂಲದ ಬ್ಯಾಟರ್ ರಜತ್ ಪಾಟೀದಾರ್ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ನಾವಿಂದು ರಜತ್ ಪಾಟೀದಾರ್ ಯಾರು? ಅವರ ಹಿನ್ನಲೆ ಏನು ಎನ್ನುವುದನ್ನು ತಿಳಿಯೋಣ ಬನ್ನಿ

ರಜತ್ ಪಾಟೀದಾರ್ ಜೂನ್ 01, 1993ರಲ್ಲಿ ಮಧ್ಯಪ್ರದೇಶದಲ್ಲಿ ಜನಿಸಿದರು. ಬಲಗೈ ಬ್ಯಾಟರ್ ಆಗಿರುವ ರಜತ್, ದೇಶಿ ಕ್ರಿಕೆಟ್‌ನಲ್ಲಿ ಮಧ್ಯ ಪ್ರದೇಶ ಹಾಗೂ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ.

ಆಫ್‌ಸ್ಪಿನ್ ಬೌಲರ್‌ ಆಗಿ ಕ್ರಿಕೆಟ್ ಜರ್ನಿ ಆರಂಭಿಸಿದ ಪಾಟೀದಾರ್, ಇಂದು ಸ್ಪೋಟಕ ಬ್ಯಾಟರ್ ಆಗಿ ಬೆಳೆದು ನಿಂತಿದ್ದಾರೆ. 2021ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 20 ಲಕ್ಷ ರುಪಾಯಿ ನೀಡಿ ಪಾಟೀದಾರ್ ಅವರನ್ನು ಖರೀದಿಸಿತು.

2021ರ ಐಪಿಎಲ್ ಟೂರ್ನಿಯಲ್ಲಿ ಪಾಟೀದಾರ್ 4 ಪಂದ್ಯಗಳನ್ನಾಡಿ ಕೇವಲ 71 ರನ್ ಗಳಿಸಿದರು. ಪರಿಣಾಮ ಆರ್‌ಸಿಬಿ ಫ್ರಾಂಚೈಸಿಯು ಮರು ವರ್ಷದ ಹರಾಜಿಗೂ ಮುನ್ನ ಪಾಟೀದಾರ್ ಅವರನ್ನು ತಂಡದಿಂದ ಕೈಬಿಟ್ಟಿತ್ತು.

ಇನ್ನು 2022ರ ಐಪಿಎಲ್ ಆಟಗಾರರ ಹರಾಜಿನಲ್ಲಿ 20 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಪಾಟೀದಾರ್ ಅವರನ್ನು ಖರೀದಿಸಲು ಯಾವೊಂದು ಫ್ರಾಂಚೈಸಿಯು ಮನಸ್ಸು ಮಾಡಲಿಲ್ಲ. ಪರಿಣಾಮ ಪಾಟೀದಾರ್ ಅನ್‌ಸೋಲ್ಡ್ ಆದರು.

ಇನ್ನು ಇದೆಲ್ಲದರ ನಡುವೆ 2022ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಲವ್ನಿತ್ ಸಿಸೋಡಿಯಾ ಗಾಯಗೊಂಡಿದ್ದರಿಂದ ಆರ್‌ಸಿಬಿ ಫ್ರಾಂಚೈಸಿಯು 20 ಲಕ್ಷ ರುಪಾಯಿ ಮೂಲ ಬೆಲೆಗೆ ಪಾಟೀದಾರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು.

ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಪಾಟೀದಾರ್, 2022ರ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ಕೇವಲ 54 ಎಸೆತಗಳಲ್ಲಿ ಅಜೇಯ 112 ರನ್ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು.

ಈ ಮೂಲಕ ಐಪಿಎಲ್ ಪ್ಲೇ ಆಫ್‌ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಅನ್‌ಕ್ಯಾಪ್ಡ್ ಆಟಗಾರ ಎನ್ನುವ ದಾಖಲೆ ನಿರ್ಮಿಸಿದರು. 2022ರ ಐಪಿಎಲ್‌ನಲ್ಲಿ ಪಾಟೀದಾರ್ ಕೇವಲ 8 ಪಂದ್ಯಗಳನ್ನಾಡಿ ಒಂದು ಶತಕ ಹಾಗೂ ಎರಡು ಅರ್ಧಶತಕ ಸಹಿತ 333 ರನ್ ಸಿಡಿಸಿದರು.

2022ರ ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ರಜತ್ ಪಾಟೀದಾರ್ 2022ರ ಮೇ 09ರಂದು ರತ್ನಮ್ ಎನ್ನುವ ಗೆಳತಿಯನ್ನು ಮದುವೆಯಾಗಲು ತೀರ್ಮಾನಿಸಿದ್ದರು. ಆದರೆ ಆರ್‌ಸಿಬಿ ತಂಡಕ್ಕೆ ದಿಢೀರ್ ಬುಲಾವ್ ಬಂದಿದ್ದರಿಂದ, ಆರ್‌ಸಿಬಿಗೆ ಕಪ್ ಗೆಲ್ಲಿಸಿಕೊಡಲು ತಮ್ಮ ಮದುವೆಯನ್ನೇ ಮುಂದೂಡಿದರು.

ಇನ್ನು 2023ರ ಐಪಿಎಲ್ ಟೂರ್ನಿಗೂ ಮುನ್ನ ಗಾಯಗೊಂಡು ಸಂಪೂರ್ಣ ಟೂರ್ನಿಯಿಂದಲೇ ಹೊರಬಿದ್ದಿದ್ದ ಪಾಟೀದಾರ್, ಇದೀಗ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಟೀದಾರ್ ಅಕ್ಷರಶಃ ಆರ್‌ಸಿಬಿ ಆಪತ್ಬಾಂಧವ ಎನಿಸಿಕೊಂಡಿದ್ದಾರೆ.

ಸದ್ಯ ರಜತ್ ಪಾಟೀದಾರ್ ಆರ್‌ಸಿಬಿ ತಂಡದ ಪರ 14 ಪಂದ್ಯಗಳನ್ನಾಡಿ 5 ಸ್ಪೋಟಕ ಅರ್ಧಶತಕಗಳ ಸಹಿತ 361 ರನ್ ಸಿಡಿಸಿದ್ದಾರೆ. ಅದರಲ್ಲೂ ಚೆನ್ನೈ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಟೀದಾರ್ ಕೇವಲ 23 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಒಟ್ಟಾರೆ ತಮಗೆ ಎರಡನೇ ಅವಕಾಶ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಡುವ ಪಣ ತೊಟ್ಟಿರುವ ರಜತ್ ಪಾಟೀದಾರ್, ಐಪಿಎಲ್ ಪ್ಲೇ ಆಫ್‌ನಲ್ಲೂ ಆರ್‌ಸಿಬಿ ಗೆಲುವಿನ ರೂವಾರಿ ಆಗಲಿ ಎನ್ನುವುದು ಅಭಿಮಾನಿಗಳ ಹಾರೈಕೆಯಾಗಿದೆ.

click me!