ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿಂದು ಸಾಂಪ್ರದಾಯಿಕ ಎದುರಾಳಿಗಳೆಂದು ಕರೆಯಲ್ಪಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.
14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 39ನೇ ಪಂದ್ಯವು ಪ್ಲೇ ಅಫ್‌ಗೇರುವ ದೃಷ್ಠಿಯಿಂದ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಸಾಕಷ್ಟು ಮಹತ್ವ ಪಡೆದಿದೆ.
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಸ್ಫೋಟಕ ಅರ್ಧಶತಕದ ಮೂಲಕ ಫಾರ್ಮ್‌ಗೆ ಮರಳಿದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಬ್ಬರಿಸಲು ಸಾಕಷ್ಟು ಸಿದ್ದತೆ ನಡೆಸಿದ್ದಾರೆ. ಇದೆಲ್ಲದರ ನಡುವೆ ಮುಂಬೈ ಎದುರಿನ ಪಂದ್ಯದಲ್ಲಿ ಕೊಹ್ಲಿ ಅಪರೂಪದ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 10,000 ರನ್ ಮೈಲಿಗಲ್ಲು ತಲುಪಲು ಇನ್ನು ಕೇವಲ 13 ರನ್‌ಗಳ ಅವಶ್ಯಕತೆಯಿದೆ. ಮುಂಬೈ ಎದುರು 13 ರನ್ ಸಿಡಿಸಿದರೆ, ಅಪರೂಪದ ದಾಖಲೆ ಕಿಂಗ್ ಕೊಹ್ಲಿ ಪಾಲಾಗಲಿದೆ.
ಸದ್ಯ ವಿರಾಟ್ ಕೊಹ್ಲಿ 313 ಟಿ20 ಪಂದ್ಯಗಳನ್ನಾಡಿ 9,987 ರನ್ ಬಾರಿಸಿದ್ದಾರೆ. ಇನ್ನು ಕೇವಲ 13 ರನ್ ಬಾರಿಸಿದರೆ ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನ್ನುವ ದಾಖಲೆಗೆ ವಿರಾಟ್ ಪಾತ್ರರಾಗಲಿದ್ದಾರೆ.
ಇದಷ್ಟೇ ಅಲ್ಲದೇ ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಬಾರಿಸಿದ ಜಗತ್ತಿನ 5ನೇ ಬ್ಯಾಟ್ಸ್‌ಮನ್ ಎನ್ನುವ ಶ್ರೇಯಕ್ಕೂ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಈಗಾಗಲೇ ಕ್ರಿಸ್ ಗೇಲ್, ಕೀರಮ್ ಪೊಲ್ಲಾರ್ಡ್, ಶೋಯೆಬ್ ಮಲಿಕ್ ಹಾಗೂ ಡೇವಿಡ್ ವಾರ್ನರ್ ಚುಟುಕು ಕ್ರಿಕೆಟ್‌ನಲ್ಲಿ 10,000+ ರನ್ ದಾಖಲಿಸಿದ್ದಾರೆ.