ಜೈಪುರ: ಭಾರತೀಯ ಕ್ರಿಕೆಟ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ರಾಜಸ್ಥಾನ ರಾಯಲ್ಸ್ ತಂಡದ ಡೈರೆಕ್ಟರ್ ಝುಬಿನ್ ಬರೂಚಾ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್ ಹರಾಜಿನಲ್ಲಿ ವೈಭವ್ ಖರೀದಿಸಲು ರಾಜಸ್ಥಾನ ಫ್ರಾಂಚೈಸಿ ಬರೋಬ್ಬರಿ 10 ಕೋಟಿ ರೂಪಾಯಿ ವರೆಗೆ ಮೀಸಲಿಟ್ಟಿತ್ತು ಎಂದಿದ್ದಾರೆ.
ವೈಭವ್ ಸೂರ್ಯವಂಶಿ ಬಗ್ಗೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಅಚ್ಚರಿ ಮಾತು
ಇತ್ತೀಚೆಗಷ್ಟೇ 15ನೇ ವರ್ಷಕ್ಕೆ ಕಾಲಿಟ್ಟ ವೈಭವ್, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದರು. 'ಜನರೇಷನ್ ಟ್ಯಾಲೆಂಟ್' ಎಂದೇ ಕರೆಯಲ್ಪಡುವ ವೈಭವ್‌ನನ್ನು ರಾಜಸ್ಥಾನ ತಂಡ 2025ರ ಐಪಿಎಲ್ ಹರಾಜಿನಲ್ಲಿ 1.1 ಕೋಟಿ ರೂಪಾಯಿಗೆ ಖರೀದಿಸಿತ್ತು.
26
ಹರಾಜಿಗೂ ಮೊದಲೇ ವೈಭವ್ ಟ್ಯಾಲೆಂಟ್ ಗೊತ್ತಿತ್ತು ಎಂದು ಬರೊಚಾ
ಆದರೆ, ಹರಾಜಿಗೂ ಮುನ್ನವೇ ರಾಜಸ್ಥಾನ ತಂಡಕ್ಕೆ ವೈಭವ್ ಸಾಮರ್ಥ್ಯದ ಅರಿವಿತ್ತು ಎಂದು ಝುಬಿನ್ ಬರೂಚಾ ಸ್ಪಷ್ಟವಾಗಿ ಹೇಳಿದ್ದಾರೆ. "ದೇಶದ ಅತ್ಯುತ್ತಮ ಯುವ ಬ್ಯಾಟಿಂಗ್ ಪ್ರತಿಭೆಗಳಲ್ಲಿ ವೈಭವ್ ಕೂಡ ಒಬ್ಬ ಎಂದು ನಾವು ನಂಬಿದ್ದೆವು. ಹೀಗಾಗಿ, ಹರಾಜಿನಲ್ಲಿ ಆತನಿಗಾಗಿ ಒಂದೆರಡಲ್ಲ 10 ಕೋಟಿ ರೂಪಾಯಿ ವರೆಗೆ ಖರ್ಚು ಮಾಡಲು ನಾವು ಸಿದ್ಧರಾಗಿದ್ದೆವು" ಎಂದು ಬರೂಚಾ ಹೇಳಿದ್ದಾರೆ.
36
ಸಂಜು-ಜೈಸ್ವಾಲ್ ಆಟ ನೆನಪಿಸಿದ ವೈಭವ್
ಟ್ರಯಲ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್‌ರನ್ನು ಮೊದಲ ಬಾರಿಗೆ ನೋಡಿದಾಗ ಆದ ಅನುಭವವೇ ವೈಭವ್ ಆಟ ನೋಡಿದಾಗಲೂ ಸಿಕ್ಕಿತು ಎಂದು ಬರೂಚಾ ಹೇಳಿದ್ದಾರೆ.
"ಟ್ರಯಲ್ಸ್‌ನ ಮೊದಲ ಎಸೆತದಲ್ಲೇ ಶಾರ್ಟ್ ಫೈನ್ ಲೆಗ್ ಮೇಲೆ ಬೌಂಡರಿ ಬಾರಿಸಿ ಜೈಸ್ವಾಲ್ ನಮ್ಮನ್ನು ಬೆರಗುಗೊಳಿಸಿದ್ದರು. ಇನ್ನು, ಸಂಜು ಸ್ಯಾಮ್ಸನ್ ಟ್ರಯಲ್ಸ್‌ನಲ್ಲಿ ಅಮಿತ್ ಸಿಂಗ್ ಅವರ ಮೊದಲ ಎಸೆತವನ್ನು ಇಂದೋರ್ ಸ್ಟೇಡಿಯಂನ ಮೇಲ್ಛಾವಣಿಗೆ ತಾಗುವಂತೆ ಸಿಕ್ಸರ್ ಬಾರಿಸಿ ಅಚ್ಚರಿ ಮೂಡಿಸಿದ್ದರು," ಎಂದು ಬರೂಚಾ ನೆನಪಿಸಿಕೊಂಡರು.
56
ಆಯ್ಕೆ ಟ್ರಯಲ್ಸ್‌ನಲ್ಲಿ ರಾಯಲ್ಸ್ ಫ್ರಾಂಚೈಸಿ ಮನಗೆದ್ದ ವೈಭವ್
ಅದೇ ರೀತಿ, ರಾಜಸ್ಥಾನ್ ನಡೆಸಿದ ಟ್ರಯಲ್ಸ್‌ನಲ್ಲಿ ವೈಭವ್ ತಾನು ಎದುರಿಸಿದ ಐದನೇ ಎಸೆತವನ್ನು, ಅಂದರೆ ಗಂಟೆಗೆ 157 ಕಿ.ಮೀ ವೇಗದಲ್ಲಿ ಬಂದ ಚೆಂಡನ್ನು ಸಿಕ್ಸರ್‌ಗೆ ಅಟ್ಟಿ ಎಲ್ಲರನ್ನೂ ನಿಬ್ಬೆರಗಾಗಿಸಿದ್ದ ಎಂದು ಬರೂಚಾ ಹೇಳಿದರು. ಗಂಟೆಗೆ 157 ಕಿ.ಮೀ ವೇಗದ ಎಸೆತಗಳನ್ನು ಕೂಡಾ ಸುಲಭವಾಗಿ ಎದುರಿಸುವ ವೈಭವ್ ಸಾಮರ್ಥ್ಯವನ್ನು ಕಂಡು ಕ್ರಿಕೆಟ್ ಜಗತ್ತು ಆತನನ್ನು 'ಬೇಬಿ ಹಲ್ಕ್' ಎಂದು ಕರೆಯುತ್ತಿದೆ.
66
ಭಾರತ ತಂಡಕ್ಕೆ ಪಾದಾರ್ಪಣೆ ಮಾಡುವ ನಿರೀಕ್ಷೆಯಲ್ಲಿ ವೈಭವ್
ಮುಂಬರುವ ಐರ್ಲೆಂಡ್ ಪ್ರವಾಸಕ್ಕೆ ವೈಭವ್ ಆಯ್ಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಒಂದು ವೇಳೆ ಹಾಗೇನಾದರೂ ಆದರೆ, ಸಚಿನ್ ತೆಂಡೂಲ್ಕರ್ ಅವರ ಅತಿ ಕಿರಿಯ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ದಾಖಲೆಯನ್ನು ವೈಭವ್ ಮುರಿಯಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.