ರಾಹುಲ್ ದ್ರಾವಿಡ್ ಆಟಗಾರನಾಗಿ ಮಾತ್ರವಲ್ಲದೆ ಪ್ರಧಾನ ಕೋಚ್ ಆಗಿ ಟೀಂ ಇಂಡಿಯಾಗೆ ಅದ್ಭುತವಾದ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಭಾರತ ತಂಡವನ್ನು ಟಿ20 ವಿಶ್ವಕಪ್ ಚಾಂಪಿಯನ್ ಆಗಿ ನಿಲ್ಲಿಸಿದ್ದಾರೆ. ಅದೇ ರೀತಿ, ಪ್ರಸ್ತುತ ಭಾರತ ತಂಡದ ಪ್ರಧಾನ ಕೋಚ್ ಆಗಿ ಸೇವೆ ಸಲ್ಲಿಸುತ್ತಿರುವ ಗೌತಮ್ ಗಂಭೀರ್ ಕೂಡ ಭಾರತ ತಂಡದ ಗೆಲುವಿನ ಪ್ರಯಾಣವನ್ನು ಆರಂಭಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟಿ20 ವಿಶ್ವಕಪ್ ವಿಜೇತ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಪ್ರಸ್ತುತ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕೋಚಿಂಗ್ ವಿಧಾನಗಳ ಬಗ್ಗೆ ಮಾತನಾಡುತ್ತಾ ಅನೇಕ ವ್ಯತ್ಯಾಸಗಳನ್ನು ವಿವರಿಸಿದ್ದಾರೆ
ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಭಾರತ ಕ್ರಿಕೆಟ್ ನ ಇಬ್ಬರು ದಿಗ್ಗಜರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾ ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಗೌತಮ್ ಗಂಭೀರ್ ಭಾರತ ತಂಡದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರವಿಡ್ ಅವರಿಗಿಂತ ಹೆಚ್ಚು ಸ್ಪಂದಿಸುವವರಾಗಿದ್ದಾರೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
Ashwin
ದ್ರಾವಿಡ್ ನವೆಂಬರ್ 2021 ರಿಂದ ಭಾರತ ತಂಡದ ಕೋಚ್ ಆಗಿದ್ದರು. ಈ ವರ್ಷ ಜುಲೈನಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ಅವರ ಅವಧಿ ಮುಗಿದಿದೆ. ದ್ರಾವಿಡ್ ನಾಯಕತ್ವದಲ್ಲೇ ಭಾರತ ತಂಡ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿತು.
ಗಂಭೀರ್ ಬಗ್ಗೆ ಅಶ್ವಿನ್ ಮಾತನಾಡುತ್ತಾ, ಗಂಭೀರ್ ಶಾಂತವಾಗಿರುತ್ತಾರೆ ಮತ್ತು ಡ್ರೆಸ್ಸಿಂಗ್ ಕೋಣೆಯಲ್ಲಿ ಹರ್ಷಚಿತ್ತದ ವಾತಾವರಣವನ್ನು ಕಾಪಾಡಿಕೊಳ್ಳುವಲ್ಲಿ ಅವರ ವರ್ತನೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. 'ಅವರು (ಗಂಭೀರ್) ತುಂಬಾ ಶಾಂತವಾಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ಅವರನ್ನು 'ರಿಲ್ಯಾಕ್ಸ್ಡ್ ರಾಂಚೋ' ಎಂದು ಕರೆಯುವುದನ್ನು ಇಷ್ಟಪಡುತ್ತೇನೆ. ಅವರ ಸಮ್ಮುಖದಲ್ಲಿ ಯಾವುದೇ ಒತ್ತಡವಿರುವುದಿಲ್ಲ' ಎಂದು ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಬಗ್ಗೆ ಅಶ್ವಿನ್ ಮಾತನಾಡುತ್ತಾ, 'ಬೆಳಿಗ್ಗೆ ತಂಡದ ಸಭೆಗೆ ಸಂಬಂಧಿಸಿದಂತೆ ಕೂಡ ಅವರು ತುಂಬಾ ಸ್ಪಷ್ಟವಾಗಿರುತ್ತಿದ್ದರು. ಬೆಳಿಗ್ಗೆ ಸಭೆಗೆ ಬರುತ್ತೀರಾ, ಬನ್ನಿ ಎಂದು ಕೇಳುತ್ತಿದ್ದರು. ಗಂಭೀರ್ ಅವರಿಗಿಂತ ದ್ರಾವಿಡ್ ಅವರ ವರ್ತನೆ ತುಂಬಾ ಕಠಿಣ ಮತ್ತು ಕ್ರಮಬದ್ಧವಾಗಿರುತ್ತಿತ್ತು ಎಂದು ಅಶ್ವಿನ್ ಹೇಳಿದ್ದಾರೆ. 'ರಾಹುಲ್ ಭಾಯಿ (ದ್ರಾವಿಡ್) ಎಲ್ಲವೂ ತುಂಬಾ ಕ್ರಮಬದ್ಧವಾಗಿರಬೇಕೆಂದು ಬಯಸುತ್ತಿದ್ದರು. ಒಂದು ನಿರ್ದಿಷ್ಟ ಸಮಯದಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಒಂದು ಬಾಟಲಿಯನ್ನೂ ಇಡಬೇಕೆಂದು ಅವರು ಬಯಸುತ್ತಿದ್ದರು. ಈ ವಿಷಯದಲ್ಲಿ ಅವರು ತುಂಬಾ ಶಿಸ್ತಿನಿಂದ ವರ್ತಿಸುತ್ತಿದ್ದರು' ಎಂದು ಹೇಳಿದ್ದಾರೆ.
ಗಂಭೀರ್ ಅವರಿಂದ ಅಂತಹ ನಿರೀಕ್ಷೆ ಇರುವುದಿಲ್ಲ ಎಂದು ಅಶ್ವಿನ್ ಹೇಳಿದ್ದಾರೆ. 'ಅವರು ತುಂಬಾ ಕಠಿಣವಾಗಿರಲು ಇಷ್ಟಪಡುವುದಿಲ್ಲ. ಅವರು ಪ್ರತಿಯೊಬ್ಬರನ್ನೂ ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ತಂಡದಲ್ಲಿರುವ ಎಲ್ಲಾ ಆಟಗಾರರು ಅವರನ್ನು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.
ಭೀಕರ ಕಾರು ಅಪಘಾತದಲ್ಲಿ ತೀವ್ರ ಗಾಯದಿಂದ ಚೇತರಿಸಿಕೊಂಡು ಟೆಸ್ಟ್ ತಂಡಕ್ಕೆ ಮರಳಿದ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಕೂಡ ಅಶ್ವಿನ್ ಶ್ಲಾಘಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಪಂತ್ ತಮ್ಮ ಮರಳುವಿಕೆಯನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಿಷಭ್ ಪಂತ್ ಕ್ರಿಕೆಟ್ ಗಾಗಿ ಹುಟ್ಟಿದ್ದಾರೆ ಮತ್ತು ಅವರ ಸಾಮರ್ಥ್ಯವನ್ನು ಹೆಚ್ಚಾಗಿ ಕಡಿಮೆ ಅಂದಾಜು ಮಾಡಲಾಗುತ್ತದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. 'ಅವರು (ಪಂತ್) ತುಂಬಾ ಚೆನ್ನಾಗಿ ಆಡಿದರು. ರೋಹಿತ್ ಬಳಿ ಪಂತ್ ಬ್ಯಾಟಿಂಗ್ ಮಾಡುತ್ತಿರುವಾಗ ನಾನು 10 ಬಾರಿ ಹೇಳಿದೆ, ಅವರು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ, ಆದರೆ ಅವರು ಹೇಗೆ ಔಟ್ ಆಗುತ್ತಾರೆಂದು ನನಗೆ ತಿಳಿದಿಲ್ಲ. ಅವರು ಕ್ರಿಕೆಟ್ ಗಾಗಿಯೇ ಹುಟ್ಟಿದ್ದಾರೆ. ತುಂಬಾ ಬಲಶಾಲಿ ವ್ಯಕ್ತಿ' ಎಂದಿದ್ದಾರೆ.