ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭವಾಗಿ ನವೆಂಬರ್ 19ರ ವರೆಗೆ ಭಾರತದ ವಿವಿಧ 10 ಸ್ಟೇಡಿಯಂನಲ್ಲಿ ನಡೆಯಲಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ.
ಇದೇ ಮೊದಲ ಬಾರಿಗೆ ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿದ್ದು, ಆತಿಥೇಯ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸೇರಿದಂತೆ 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.
ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ತಂಡಕ್ಕೆ 40 ಲಕ್ಷ ಅಮೆರಿಕನ್ ಡಾಲರ್ (ಅಂದಾಜು 33 ಕೋಟಿ ರು) ಬಹುಮಾನ ಮೊತ್ತ ನೀಡುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಶುಕ್ರವಾರ ಘೋಷಿಸಿದೆ. ರನ್ನರ್-ಅಪ್ ಆಗುವ ತಂಡಕ್ಕೆ 20 ಲಕ್ಷ ಅಮೆರಿಕನ್ ಡಾಲರ್(ಅಂದಾಜು 16 ಕೋಟಿ ರು.) ಸಿಗಲಿದೆ.
2019ರ ವಿಶ್ವಕಪ್‌ನಲ್ಲೂ ಇಷ್ಟೇ ಮೊತ್ತವನ್ನು ನೀಡಲಾಗಿತ್ತು. ಒಟ್ಟಾರೆ 10 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ತಂಡಗಳಿಗೆ ವಿತರಿಸಲು ಐಸಿಸಿ ಮೀಸಲಿಟ್ಟಿರುವುದಾಗಿ ತಿಳಿಸಿದೆ.
ಸೆಮಿಫೈನಲ್‌ನಲ್ಲಿ ಸೋಲುವ 2 ತಂಡಗಳಿಗೆ ತಲಾ 6 ಕೋಟಿ ರುಪಾಯಿ, ನಾಕೌಟ್ ಹಂತಕ್ಕೆ ಪ್ರವೇಶಿಸಲು ವಿಫಲವಾಗುವ 6 ತಂಡಗಳಿಗೆ ತಲಾ 82 ಲಕ್ಷ ರು. ಪ್ರೋತ್ಸಾಹ ಧನ ಸಿಗಲಿದೆ.
ಇನ್ನು ಗುಂಪು ಹಂತದಲ್ಲಿ ಪ್ರತಿ ಗೆಲುವಿಗೆ ತಂಡಗಳಿಗೆ ತಲಾ 33 ಲಕ್ಷ ರು. ಬಹುಮಾನ ಮೊತ್ತ ಸಿಗಲಿದೆ ಎಂದು ಐಸಿಸಿ ಮಾಹಿತಿ ನೀಡಿದೆ. ಅ.5ರಿಂದ ವಿಶ್ವಕಪ್ ಆರಂಭಗೊಳ್ಳಿದ್ದು, ನ.19ರ ವರೆಗೂ ನಡೆಯಲಿದೆ. ಭಾರತ ಸೇರಿ ಒಟ್ಟು 10 ತಂಡಗಳು ಟ್ರೋಫಿಗಾಗಿ ಸೆಣಸಲಿವೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭವಾದರೂ, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಕ್ಟೋಬರ್ 08ರಂದು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸುತ್ತಿರುವ ಭಾರತ ಕ್ರಿಕೆಟ್ ತಂಡವು, ಈ ಬಾರಿ ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಕಪ್ ಗೆದ್ದು, ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.