ನಾಳೆ 'ಲಾರ್ಡ್‌' ಶಾರ್ದೂಲ್‌ಗೆ ಮದುವೆ, ಉದ್ಯಮಿ ಮಹಿಳೆಯ ಕೈಹಿಡಿಯಲಿದ್ದಾರೆ ಟೀಂ ಇಂಡಿಯ ವೇಗಿ!

First Published | Feb 26, 2023, 6:23 PM IST

ಟೀಮ್‌ ಇಂಡಿಯಾ ಆಟಗಾರರ ಮದುವೆಯ ಪರ್ವ ಮುಂದುವರಿದಿದೆ. ಕೆಎಲ್‌ ರಾಹುಲ್‌, ಅಕ್ಷರ್‌ ಪಟೇಲ್‌ ಬಳಿಕ ಆಲ್ರೌಂಡರ್‌ ಶಾರ್ದೂಲ್‌ ಠಾಕೂರ್‌ ಕೂಡ ಹಸೆಮಣೆ ಏರೋಕೆ ತಯಾರಾಗಿದ್ದಾರೆ. ಸೋಮವಾರ ಅವರ ವಿವಾಹ ಸಮಾರಂಭ ನಡೆಯಲಿದ್ದು, ಉದ್ಯಮಿ ಮಹಿಳೆಯಾಗಿರುವ ಮಿಥಾಲಿ ಪರುಲ್ಕರ್‌ ಅವರನ್ನು ವರಿಸಲಿದ್ದಾರೆ.

ಮಿಥಾಲಿ ಪರುಲ್ಕರ್‌ ಉದ್ಯಮಿ ಮಹಿಳೆಯಾಗಿದ್ದು, ಥಾಣೆಯಲ್ಲಿ ಆಲ್‌ ದ ಬೇಕ್ಸ್‌ ಎನ್ನುವ ಸ್ಟಾರ್ಟ್‌ಅಪ್‌ನ ಮಾಲೀಕರಾಗಿದ್ದಾರೆ. ಶಾರ್ದೂಲ್‌ ಹಾಗೂ ಮಿಥಾಲಿ ಕಳೆದ ಹಲವು ವರ್ಷಗಳಿಂದ ಡೇಟಿಂಗ್‌ ಮಾಡುತ್ತಿದ್ದರು. ಕಳೆದ ವರ್ಷ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಸೋಮವಾರ ಮುಂಬೈನಲ್ಲಿಯೇ ಶಾರ್ದೂಲ್‌ ಠಾಕೂರ್‌ ಹಾಗು ಮಿಥಾಲಿ ಪರುಲ್ಕರ್‌ ಅವರ ವಿವಾಹ ಸಮಾರಂಭ ನಡೆಯಲಿದೆ. ಆದರೆ, ಮುಂಬೈನ ಯಾವ ಸ್ಥಳದಲ್ಲಿ ನಡೆಯಲಿದೆ ಎನ್ನುವುದು ಇನ್ನೂ ತಿಳಿದುಬಂದಿಲ್ಲ.

Tap to resize

ಸೋಶಿಯಲ್‌ ಮೀಡಿಯಾದಲ್ಲಿ ಸ್ವಲ್ಪ ಮಟ್ಟಿಗೆ ಜನಪ್ರಿಯರಾಗಿರುವ ಮಿಥಾಲಿ ಪರುಲ್ಕರ್‌, ಇನ್ಸ್‌ಟಾಗ್ರಾಮ್‌ನಲ್ಲಿ 5 ಸಾವಿರಕ್ಕಿಂತ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗನ ಗೆಳತಿ ಎನ್ನುವ ಲೈಮ್‌ಲೈಟ್‌ನಿಂದ ಹೊರಗುಳಿಯಲು ಅವರು ಬಯಸುತ್ತಾರೆ. ಇದಕ್ಕಾಗಿ ಅವರ ಇನ್ಸ್‌ಟಾಗ್ರಾಮ್‌ ಅಕೌಟ್‌ 'ಪ್ರೈವೇಟ್‌' ಸ್ಟೇಟಸ್‌ನಲ್ಲಿದೆ.

2021ರ ನವೆಂಬರ್‌ 29 ರಂದು ಶಾರ್ದೂಲ್‌ ಹಾಗೂ ಮಿಥಾಲಿ ಅವರ ನಿಶ್ಚಿತಾರ್ಥ ನೆರವೇರಿತ್ತು. ಇವರ ನಿಶ್ಚಿತಾರ್ಥ ಸಮಾರಂಭ ಕೂಡ ಖಾಸಗಿಯಾಗಿ ನಡೆದಿತ್ತು. ಎಂಸಿಎ ಸ್ಟೇಡಿಯಂನ ವೇದಿಕೆಯಲ್ಲಿ ನಡೆದಿದ್ದ ಕಾರ್ಯಕ್ರಮಕ್ಕೆ ರೋಹಿತ್‌ ಶರ್ಮ ಕೂಡ ಆಗಮಿಸಿದ್ದರು.

ಅಂದಾಜು ಒಂದು ವರ್ಷಗಳ ಬಳಿಕ ಗೆಳತಿಯನ್ನು ವಿವಾಹವಾಗಲು ಶಾರ್ದೂಲ್‌ ಬಯಸಿದ್ದಾರೆ. ಕಳೆದ ವರ್ಷ ನಿಬಿಡ ಕ್ರಿಕೆಟ್‌ನ ಕಾರಣದಿಂದಾಗಿ ಮದುವೆಗೆ ಸಮಯ ಸಿಕ್ಕಿರಲಿಲ್ಲ. ಈಗ ಫೆ.27ಕ್ಕೆ ಮದುವೆಯಾಗುವ ತೀರ್ಮಾನ ಮಾಡಿದ್ದಾರೆ.
 

ಶಾರ್ದೂಲ್‌ಗೆ ಈ ವರ್ಷವೂ ನಿಬಿಡ ಕ್ರಿಕೆಟ್‌ ವೇಳಾಪಟ್ಟಿ ಇದೆ. ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿದ್ದರೆ, ಆ ಬಳಿಕ ಡಲ್ಲಿ ಕ್ಯಾಪಿಟಲ್ಸ್‌ ಪರವಾಗಿ ಐಪಿಎಲ್‌ ಆಡಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಮಾರ್ಚ್‌ 17 ರಂದು ಆರಂಭವಾಗಲಿದ್ದು, ಒಂದು ವಾರ ಮುಂಚಿತವಾಗಿ ಅಭ್ಯಾಸ ಶಿಬಿರ ನಡೆಯಲಿದೆ. ಹಾಗಾಗಿ ಶಾರ್ದೂಲ್‌ ಠಾಕೂರ್‌ ಅವರಿಗೆ ದೀರ್ಘ ಹನಿಮೂನ್‌ಗೆ ಹೋಗುವ ಅವಕಾಶ ಕೂಡ ಸಿಗೋದಿಲ್ಲ.

ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ಬೌಲಿಂಗ್‌ ಮೂಲಕ ಗಮನಸೆಳೆದಿರುವ ಶಾರ್ದೂಲ್‌ ಠಾಕೂರ್‌, ಮೈದಾನದ ಹೊರಗೆ ತಮ್ಮ ಸೌಮ್ಯ ಸ್ವಭಾವದಿಂದ ಗುರುತಿಸಿಕೊಂಡಿದ್ದಾರೆ

ಫೆಬ್ರವರಿ 25 ರಂದು ಹಳದಿ ಸಮಾರಂಭ ಕೂಡ ನಡೆದಿದ್ದು, ಈ ವೇಳೆ ಅವರು ಬಾಲಿವುಡ್‌ ಚಿತ್ರಗೀತೆಗಳಿಗೆ ಡಾನ್ಸ್‌ ಮಾಡಿರುವ ವಿಡಿಯೋ ವೈರಲ್‌ ಆಗಿದೆ.

ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರವಾಗಿ ಆಡಿದುವ ಶಾರ್ದೂಲ್‌ ಠಾಕೂರ್‌ ಅವರನ್ನು 2022ರ ಐಪಿಎಲ್‌ ಹರಾಜಿನಲ್ಲಿ 10.75 ಕೋಟಿ ರೂಪಾಯಿಗೆ ಖರೀದಿಸಿತ್ತು.

ಡೆಲ್ಲಿ ಕ್ಯಾಪಿಟಲ್ಸ್‌ ಪರವಾಗಿ ಅವರ ನಿರ್ವಹಣೆ ತೃಪ್ತಿದಾಯಕವಾಗಿರದ ಹಿನ್ನಲೆಯಲ್ಲಿ ಐಪಿಎಲ್‌ 2023ಗೆ ಕೆಕೆಆರ್‌ ತಂಡಕ್ಕೆ ವರ್ಗಾವಣೆಯಾಗಿದ್ದಾರೆ. ಕೆಕೆಆರ್‌ ತಂಡಕ್ಕೂ 10.75 ಕೋಟಿ ರೂಪಾಯಿಗೆ ವರ್ಗಾವಣೆಯಾಗಿದ್ದಾರೆ.

Latest Videos

click me!