IPL Auction ಮುನ್ನ ಮುಂಬೈ ಇಂಡಿಯನ್ಸ್‌ ಡೆಡ್ಲಿ ವೇಗಿಗೆ ಗೇಟ್‌ಪಾಸ್?

First Published | Nov 13, 2023, 9:58 AM IST

ಮುಂಬೈ: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇದೀಗ ಸಿದ್ದತೆಗಳು ಆರಂಭವಾಗಿವೆ. ಡಿಸೆಂಬರ್ 19ರಂದು ದುಬೈನಲ್ಲಿ ಆಟಗಾರರ ಹರಾಜು ನಡೆಯಲಿದೆ. ಹೀಗಿರುವಾಗಲೇ ಫ್ರಾಂಚೈಸಿಗಳು ಹರಾಜಿಗೂ ಮುನ್ನ ಕೆಲ ಆಟಗಾರರನ್ನು ರಿಲೀಸ್ ಮಾಡಲು ಮುಂದಾಗಿದೆ. ಈ ಪೈಕಿ ಮುಂಬೈ ಇಂಡಿಯನ್ಸ್ ಕಠಿಣ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ವರದಿಯಾಗಿದೆ.

ಐಪಿಎಲ್‌ನ ಯಶಸ್ವಿ ತಂಡಗಳಲ್ಲಿ ಒಂದು ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ದಾಖಲೆಯ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 6ನೇ ಟ್ರೋಫಿ ಗೆಲ್ಲಲು ರಣತಂತ್ರ ಹೆಣೆಯುತ್ತಿದೆ.

ಹೀಗಿರುವಾಗಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಬಿಗ್ ಶಾಕ್ ಎದುರಾಗಿದ್ದು, ಇಂಗ್ಲೆಂಡ್ ಮೂಲದ ಮಾರಕ ವೇಗಿ ಜೋಫ್ರಾ ಆರ್ಚರ್ ಮತ್ತೊಮ್ಮೆ ಮೊಣಕೈ ಗಾಯಕ್ಕೆ ಒಳಗಾಗಿದ್ದು, ಮತ್ತಷ್ಟು ಕಾಲ ಕ್ರಿಕೆಟ್‌ನಿಂದ ದೂರವಾಗಿದ್ದಾರೆ.

Latest Videos


2023ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಕೊನೆಯ ಬಾರಿಗೆ ಕಣಕ್ಕಿಳಿದಿದ್ದ ಜೋಫ್ರಾ ಆರ್ಚರ್, ಗಾಯದ ಸಮಸ್ಯೆಯಿಂದ ಐಪಿಎಲ್ ಟೂರ್ನಿಯನ್ನು ಅರ್ಧದಲ್ಲೇ ತೊರೆದಿದ್ದರು.

Jofra Archer

ಇದಾದ ಬಳಿಕ ಸಾಕಷ್ಟು ಸಮಯಗಳ ಕಾಲ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಫಿಟ್ನೆಸ್ ಸಾಧಿಸಿ, 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ಮೀಸಲು ಆಟಗಾರನ ರೂಪದಲ್ಲಿ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಮತ್ತೊಮ್ಮೆ ಜೋಫ್ರಾ ಆರ್ಚರ್‌ಗೆ ಮೊಣಕೈನಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 2023ರ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದರು. ಇದರ ಜತೆಗೆ ಇದೀಗ ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಎದುರಿನ ಸೀಮಿತ ಓವರ್‌ಗಳ ಸರಣಿಗೂ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

ಹೀಗಾಗಿ 2024ರ ಐಪಿಎಲ್‌ ಹರಾಜಿಗೂ ಮುನ್ನ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌ರನ್ನು ಮುಂಬೈ ಇಂಡಿಯನ್ಸ್‌ ತಂಡ ಕೈ ಬಿಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ದೀರ್ಘ ಕಾಲದಿಂದ ಮೊಣಕೈ ಗಾಯದಿಂದ ಬಳಲುತ್ತಿರುವ ಆರ್ಚರ್ ಅದರಿಂದ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲು ಮುಂಬೈ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. 

2022ರ ಹರಾಜಿನಲ್ಲಿ ಆರ್ಚರ್‌ ಮುಂಬೈಗೆ ಬಿಕರಿಯಾಗಿದ್ದರು. ಆದರೆ ಗಾಯದಿಂದಾಗಿ ಆ ವರ್ಷ ಯಾವುದೇ ಪಂದ್ಯವಾಡಿರಲಿಲ್ಲ. 2023ರಲ್ಲಿ ತಂಡದ ಪರ ಕೇವಲ 5 ಪಂದ್ಯಗಳನ್ನಾಡಿದ್ದರು. ಇದಾದ ಬಳಿಕ ಆರ್ಚರ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ.

click me!