ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಎದುರಿಸಿದ ಸವಾಲು ಅಷ್ಟಿಷ್ಟಲ್ಲ. ಆದರೆ ಎಲ್ಲಾ ಚಾಲೆಂಜ್ ಎದುರಿಸಿದ ಸಿರಾಜ್ ಹೀರೋ ಆಗಿ ಮಿಂಚಿದ್ದಾರೆ.
ಟೀಂ ಇಂಡಿಯಾ ಸರಣಿ ಗೆಲುವಿನಲ್ಲಿ ಸಿರಾಜ್ ಪ್ರಮುಖ ಪಾತ್ರನಿರ್ವಹಿಸಿದ್ದಾರೆ. ಆಸ್ಟ್ರೇಲಿಯಾದಿಂದ ಹೈದರಾಬಾದ್‌ಗೆ ಬಂದಿಳಿದ ಸಿರಾಜ್ ಮೊದಲು ನೇರವಾಗಿ ತಂದೆಯ ಸಮಾಧಿಗೆ ತೆರಳಿ ನಮನ ಸಲ್ಲಿಸಿದ್ದಾರೆ.
ಮೊದಲು ತಂದೆ ಸಮಾಧಿಗೆ ಭೇಟಿ ನೀಡಿದ ಬಳಿಕ ಮನೆಗೆ ಭೇಟಿ ನೀಡಿದ್ದಾರೆ. ಸಿರಾಜ್ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗುವಲ್ಲಿ ತಂದೆ ಪಾತ್ರ ದೊಡ್ಡದು. ಆದರೆ ಟೆಸ್ಟ್ ತಂಡದಲ್ಲಿ ಮಿಂಚಿ ತವರಿಗೆ ಬಂದಾಗ ಸ್ವಾಗತಿಸಲು ತಂದೆ ಇಲ್ಲ ಅನ್ನೋ ನೋವು ಸಿರಾಜ್‌ಗೆ ಕಾಡುತ್ತಿದೆ.
ನವೆಂಬರ್ ತಿಂಗಳಲ್ಲಿ ಮೊಹಮ್ಮದ್ ಸಿರಾಜ್ ತಂದೆ ನಿಧನರಾಗಿದ್ದರು. ಈ ವೇಳೆ ಆಸೀಸ್ ಪ್ರವಾಸದಲ್ಲಿ ಸಿರಾಜ್‌ಗೆ ತವರಿಗೆ ಆಗಮಿಸಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿತ್ತು.
ಆದರೆ ಮೊದಲ ಬಾರಿಗೆ ಸಿಕ್ಕ ಅವಕಾಶ, ಹಾಗೂ ದೇಶಕ್ಕೆ ಹೆಮ್ಮೆ ತರಬೇಕು ಅನ್ನೋ ತಂದೆ ಮಾತನ್ನು ಸಾಕಾರಗೊಳಿಸಲು ಸಿರಾಜ್, ತಂದೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳದೆ ಟೀಂ ಇಂಡಿಯಾ ಪರ ಕಣಕ್ಕಿಳಿದರು.
ತನ್ನ ಎಲ್ಲಾ ಕನಸನ್ನು ಸಾಕಾರಗೊಳಿಸಲು ಶಕ್ತಿಯಾಗಿ ನಿಂತಿದ್ದ ಮೊಹಮ್ಮದ್ ಸಿರಾಜ್ ತಂದೆ ಇನ್ನಿಲ್ಲ ಅನ್ನೋದನ್ನು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಸಿರಾಜ್ ಅದ್ಭುತ ಪ್ರದರ್ಶದ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ
ಟೆಸ್ಟ್ ಸರಣಿ ವೇಳೆ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ಅಭಿಮಾನಿಗಳಿಂದ ಜನಾಂಗೀಯ ನಿಂದನೆ ಎದುರಿಸಿದರು. ಈ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಕ್ಷಮೆ ಕೇಳಿತ್ತು.
ಟೆಸ್ಟ್ ಸರಣಿಯಲ್ಲಿ ಸಿರಾಜ್ 13 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಆಸೀಸ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಭಾರತೀಯ ವೇಗಿ ಅನ್ನೋ ಹೆಗ್ಗಳಿಕೆಗೆ ಸಿರಾಜ್ ಪಾತ್ರರಾಗಿದ್ದಾರೆ