ಪಂದ್ಯದಲ್ಲಿ ತಾವೆಸೆದ 2ನೇ ಓವರಲ್ಲೇ 4 ವಿಕೆಟ್‌ಗಳನ್ನು ಕಿತ್ತ ಸಿರಾಜ್, ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಹಾಗೂ ವಿಶ್ವದ 5ನೇ ಬೌಲರ್ ಎನಿಸಿಕೊಂಡರು.
ಈ ಮೊದಲು ಶ್ರೀಲಂಕಾದ ಲಸಿತ್ ಮಾಲಿಂಗಾ ಹಾಗೂ ಚಾಮಿಂಡ ವಾಸ್, ಪಾಕಿಸ್ತಾನದ ಮೊಹಮದ್ ಸಮಿ, ಇಂಗ್ಲೆಂಡ್‌ನ ಆದಿಲ್ ರಶೀದ್ ಈ ಸಾಧನೆ ಮಾಡಿದ್ದರು.
ವಾಸ್ 2003ರ ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ, ಸಮಿ 2003ರಲ್ಲಿ ನ್ಯೂಜಿಲೆಂಡ್ ವಿರುದ್ಧ, ಮಾಲಿಂಗ 2007ರ ವಿಶ್ವಕಪ್‌ನಲ್ಲಿ ದ.ಆಫ್ರಿಕಾ ವಿರುದ್ಧ, ರಶೀದ್ 2019ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಒಂದೇ ಓವರಲ್ಲಿ 4 ವಿಕೆಟ್ ಕಬಳಿಸಿದ್ದರು.
16 ಎಸೆತದಲ್ಲಿ 5 ವಿಕೆಟ್
ಸಿರಾಜ್ ಮೊದಲ 16 ಎಸೆತಗಳಲ್ಲೇ 5 ವಿಕೆಟ್ ಪಡೆದು, ಏಕದಿನದಲ್ಲಿ ಅತಿವೇಗದ 5 ವಿಕೆಟ್ ಗೊಂಚಲು ಪಡೆದ ಚಾಮಿಂಡ ವಾಸ್‌ರ ದಾಖಲೆ ಸರಿಗಟ್ಟಿದರು. 2003ರ ವಿಶ್ವಕಪ್‌ನಲ್ಲಿ ಬಾಂಗ್ಲಾ ವಿರುದ್ಧ ವಾಸ್ 16 ಎಸೆತದಲ್ಲಿ 5 ವಿಕೆಟ್ ಕಿತ್ತಿದ್ದರು.
ಏಷ್ಯಾಕಪ್‌ನಲ್ಲಿ 6 ವಿಕೆಟ್: ಸಿರಾಜ್ 2ನೇ ಬೌಲರ್
ಏಷ್ಯಾಕಪ್‌ನ ಇತಿಹಾಸದಲ್ಲೇ 6 ವಿಕೆಟ್ ಗೊಂಚಲು ಪಡೆದ 2ನೇ ಬೌಲರ್ ಎಂಬ ಹೆಗ್ಗಳಿಕೆಗೆ ಸಿರಾಜ್ ಪಾತ್ರರಾಗಿದ್ದಾರೆ. 2008ರಲ್ಲಿ ಭಾರತದ ವಿರುದ್ಧ ಶ್ರೀಲಂಕಾದ ಸ್ಪಿನ್ನರ್ ಅಜಂತಾ ಮೆಂಡಿಸ್ 13 ರನ್‌ಗೆ 6 ವಿಕೆಟ್ ಉರುಳಿಸಿದ್ದರು.
2ನೇ ವೇಗದ 50 ವಿಕೆಟ್!
ಸಿರಾಜ್ ಏಕದಿನ ಕ್ರಿಕೆಟ್‌ನಲ್ಲಿ 50 ವಿಕೆಟ್ ಪೂರ್ತಿಗೊಳಿಸಿದರು. ಭಾನುವಾರ 29ನೇ ಪಂದ್ಯವಾಡಿದ ಅವರು ಕೇವಲ 1002 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ್ದು, ಎಸೆತಗಳ ಆಧಾರದಲ್ಲಿ ವೇಗವಾಗಿ 50 ವಿಕೆಟ್ ಕಿತ್ತ ಸಾಧಕರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು. 847 ಎಸೆತಗಳಲ್ಲಿ 50 ವಿಕೆಟ್ ಪಡೆದಿದ್ದ ಶ್ರೀಲಂಕಾದ ಅಜಂತ ಮೆಂಡಿಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
11ನೇ ಬೌಲರ್
ಸಿರಾಜ್ ಏಕದಿನ ಕ್ರಿಕೆಟ್‌ನಲ್ಲಿ 6 ವಿಕೆಟ್ ಗೊಂಚಲು ಪಡೆದ ಭಾರತದ 11ನೇ ಬೌಲರ್. ಬಿನ್ನಿ, ಕುಂಬ್ಳೆ, ಬುಮ್ರಾ, ನೆಹ್ರಾ (2 ಬಾರಿ), ಕುಲ್ದೀಪ್, ಮುರಳಿ ಕಾರ್ತಿಕ್, ಅಗರ್ಕರ್, ಚಹಲ್, ಅಮಿತ್ ಮಿಶ್ರಾ, ಶ್ರೀಶಾಂತ್ ಇತರ ಸಾಧಕರು.
01ನೇ ಬೌಲರ್
2002ರ ಬಳಿಕ ಇನ್ನಿಂಗ್ಸ್‌ನ 10 ಓವರ್‌ನೊಳಗೆ 5 ವಿಕೆಟ್ ಕಿತ್ತ ಭಾರತದ ಮೊದಲ ಬೌಲರ್ ಸಿರಾಜ್. ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಎನ್ನುವ ಹಿರಿಮೆಗೂ ಸಿರಾಜ್ ಪಾತ್ರರಾಗಿದ್ದಾರೆ.