ನೂರಾರು ಪಂದ್ಯಗಳನ್ನಾಡಿದರೂ ಒಂದೂ ನೋ ಬಾಲ್‌ ಎಸೆಯದ ಟಾಪ್ 5 ಬೌಲರ್‌ಗಳಿವರು..!

First Published Jan 18, 2023, 12:15 PM IST

ಬೆಂಗಳೂರು(ಜ.18): ಕ್ರಿಕೆಟ್‌ ಎನ್ನುವ ಕ್ರೀಡೆಯನ್ನು ಜಂಟಲ್‌ಮನ್‌ ಗೇಮ್ ಎಂದೂ ಕರೆಯುತ್ತಾರೆ. ಹಾಗೆಯೇ ಈ ಕ್ರಿಕೆಟ್‌ ಸಾಕಷ್ಟು ಅನಿರೀಕ್ಷಿತ ಹಾಗೂ ರೋಚಕ ಕ್ಷಣಗಳನ್ನು ಕಟ್ಟಿಕೊಡುತ್ತದೆ. ಅದೇ ರೀತಿ ಒಂದು ನೋ ಬಾಲ್ ಪಂದ್ಯದ ದಿಕ್ಕನ್ನೇ ಬದಲಿಸಿ ಬಿಡಬಹುದು. ಒಬ್ಬ ಬೌಲರ್‌, ಕ್ರೀಸ್‌ನಿಂದ ಒಂದು ಇಂಚು ಹೆಜ್ಜೆ ಮುಂದಿಟ್ಟರೂ ಸಾಕು, ಆ ತಂಡ ಬೆಲೆ ತೆರಬೇಕಾಗಿ ಬರುತ್ತದೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನೋ ಬಾಲ್ ಎಸೆದರೇ, ಹೆಚ್ಚುವರಿ ಒಂದು ರನ್ ಸೇರ್ಪಡೆ ಜತೆಗೆ ಈಗ ಐಸಿಸಿ, ಫ್ರೀ ಹಿಟ್‌ ಅವಕಾಶವನ್ನು ಜಾರಿಗೆ ತಂದಿದೆ. ಹೀಗೆಲ್ಲಾ ಇರುವಾಗ, ಕೆಲವು ಕ್ರಿಕೆಟಿಗರು ನೂರಾರು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದರೂ ಸಹಾ, ಒಂದೇ ಒಂದು ನೋ ಬಾಲ್ ಎಸೆಯದ ಟಾಪ್ 5 ಬೌಲರ್‌ಗಳ ಕಂಪ್ಲೀಟ್‌ ಡೀಟೈಲ್ಸ್ ಇಲ್ಲಿದೆ ನೋಡಿ.
 

1. ಲ್ಯಾನ್ಸ್‌ ಗಿಬ್ಸ್‌: 

ವೆಸ್ಟ್ ಇಂಡೀಸ್ ಸ್ಪಿನ್ ದಿಗ್ಗಜ ಲ್ಯಾನ್ಸ್‌ ಗಿಬ್ಸ್‌, ಕೆರಿಬಿಯನ್ ಪಡೆಯ ಪರ  79 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನ್ನಾಡಿದ್ದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ 300 ವಿಕೆಟ್ ಕಬಳಿಸಿದ ಜಗತ್ತಿನ ಮೊದಲ ಸ್ಪಿನ್ನರ್ ಎನ್ನುವ ಹೆಗ್ಗಳಿಕೆ ಲ್ಯಾನ್ಸ್ ಗಿಬ್ಸ್ ಅವರದ್ದು. ಸುದೀರ್ಘ ಕಾಲ ಕ್ರಿಕೆಟ್ ಆಡಿದರೂ ಒಂದೇ ಒಂದು ನೋ ಬಾಲ್ ಎಸೆಯದ ಜಗತ್ತಿನ ಏಕೈಕ ಸ್ಪಿನ್ನರ್ ಲ್ಯಾನ್ಸ್‌ ಗಿಬ್ಸ್‌.

2. ಇಯಾನ್ ಬಾಥಮ್‌:

ಇಂಗ್ಲೆಂಡ್ ಕಂಡ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಇಯಾನ್ ಬಾಥಮ್‌ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. 16 ವರ್ಷಗಳ ಕಾಲ ಸುದೀರ್ಘ ಕಾಲ ಕ್ರಿಕೆಟ್ ಬದುಕಿನಲ್ಲಿ ಬಾಥಮ್‌ 102 ಟೆಸ್ಟ್ ಹಾಗೂ 116 ಏಕದಿನ ಪಂದ್ಯಗಳನ್ನಾಡಿದ್ದಾರೆ. ಆದರೆ ಇಯಾಮ್‌ ಬಾಥಮ್ ಒಂದೇ ಒಂದು ನೋ ಬಾಲ್ ಎಸೆದಿಲ್ಲ.

3. ಇಮ್ರಾನ್ ಖಾನ್: 

ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಮಾರಕ ವೇಗಿ ಇಮ್ರಾನ್ ಖಾನ್‌, ಪಾಕ್ ತಂಡದ ಪರ 88 ಟೆಸ್ಟ್‌ ಹಾಗೂ 175 ಏಕದಿನ ಪಂದ್ಯಗಳನ್ನಾಡಿದ್ದಾರೆ. ಇಮ್ರಾನ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡವು 1992ರಲ್ಲಿ ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇಮ್ರಾನ್ ಖಾನ್, ಇಡೀ ವೃತ್ತಿಬದುಕಿನಲ್ಲಿ ಒಂದೇ ಒಂದು ಬಾರಿ ನೋ ಬಾಲ್ ಗೆರೆದಾಟಿ ಬೌಲಿಂಗ್ ಮಾಡಿಲ್ಲ.

4. ಡೆನಿಸ್ ಲಿಲ್ಲಿ; 

ಆಸ್ಟ್ರೇಲಿಯಾದ ಮಾರಕ ವೇಗಿ ಡೇನಿಸ್ ಲಿಲ್ಲಿ, ಕ್ರಿಕೆಟ್ ಜಗತ್ತು ಕಂಡ ದಿಗ್ಗಜ ವೇಗಿಗಳಲ್ಲಿ ಒಬ್ಬರೆನಿಸಿದ್ದರು. ಶಿಸ್ತುಬದ್ದ ದಾಳಿಗೆ ಹೆಸರಾದ ಡೆನಿಸ್ ಲಿಲ್ಲಿ, ಆಸೀಸ್ ಪರ 70 ಟೆಸ್ಟ್ ಹಾಗೂ 63 ಏಕದಿನ ಪಂದ್ಯಗಳನ್ನಾಡಿದ್ದರೂ ಸಹಾ, ಒಂದೇ ಒಂದು ನೋ ಬಾಲ್ ಹಾಕಿಲ್ಲ. 

5. ಕಪಿಲ್ ದೇವ್:

ಭಾರತದ ಸಾರ್ವಕಾಲಿನ ಶ್ರೇಷ್ಠ ಆಲ್ರೌಂಡರ್‌ ಕಪಿಲ್ ದೇವ್, ದೇಶಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಹೀರೋ. ಭಾರತ ಪರ 131 ಟೆಸ್ಟ್ ಹಾಗೂ 225 ಏಕದಿನ ಪಂದ್ಯಗಳನ್ನಾಡಿದ್ದರೂ, ಸಹಾ ಒಮ್ಮೆಯೂ ನೋ ಬಾಲ್ ಎಸೆಯದೇ ದಾಖಲೆ ಬರೆದಿದ್ದಾರೆ.

click me!