ಕಿವೀಸ್‌ ಎದುರಿನ ಸರಣಿಗೂ ಮುನ್ನ ಟಿಂ ಇಂಡಿಯಾಗೆ ಬಿಗ್‌ ಶಾಕ್‌, ಸ್ಟಾರ್ ಆಟಗಾರ ಔಟ್..!

First Published Jan 17, 2023, 3:59 PM IST

ಹೈದರಾಬಾದ್‌(ಜ.17): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಈ ಸರಣಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ಆಟಗಾರ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಈ ಆಟಗಾರನಿಗೆ ಬದಲಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರತಿಭಾನ್ವಿತ ಬ್ಯಾಟರ್‌ಗೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ.
 

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಜನವರಿ 18ರಂದು ಆರಂಭವಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ.

ಇನ್ನು ಮೊದಲ ಏಕದಿನ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ತಂಡದಲ್ಲಿ ಮಹತ್ತರ ಬೆಳವಣಿಗೆಯೊಂದು ಸಂಭವಿಸಿದ್ದು, ಶ್ರೇಯಸ್ ಅಯ್ಯರ್ ಬೆನ್ನು ನೋವಿನ ಸಮಸ್ಯೆಯಿಂದಾಗಿ, ಕಿವೀಸ್ ಎದುರಿನ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.
 

ಶ್ರೇಯಸ್ ಅಯ್ಯರ್ ಟೀಂ ಇಂಡಿಯಾದಿಂದ ಹೊರಬಿದ್ದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರತಿಭಾನ್ವಿತ ಬ್ಯಾಟರ್ ರಜತ್ ಪಾಟೀದಾರ್‌ಗೆ ಬುಲಾವ್ ಬಂದಿದ್ದು, ರಜತ್‌ ತಂಡ ಕೂಡಿಕೊಂಡಿದ್ದಾರೆ.

ರಜತ್ ಪಾಟೀದಾರ್, ದೇಶಿ ಕ್ರಿಕೆಟ್ ಟೂರ್ನಿಯಾದ ರಣಜಿ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದು, ಇತ್ತೀಚೆಗಷ್ಟೇ ವಿದರ್ಭ ಎದುರಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಗಮನ ಸೆಳೆದಿದ್ದರು.

ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ರಜತ್ ಪಾಟೀದಾರ್ ಕೆಚ್ಚೆದೆಯ ಬ್ಯಾಟಿಂಗ್ ನಡೆಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಮನೆಮಾತಾಗಿದ್ದರು. ಪಾಟೀದಾರ್, ಸ್ಪಿನ್ ಹಾಗೂ ವೇಗದ ಬೌಲರ್‌ಗಳ ಎದುರು ಮೈಚಳಿ ಬಿಟ್ಟು ಬ್ಯಾಟ್ ಮಾಡುವ ಕ್ಷಮತೆ ಹೊಂದಿದ್ದಾರೆ.

ಇನ್ನು ಶ್ರೇಯಸ್ ಅಯ್ಯರ್ ತಂಡದಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಅಯ್ಯರ್‌ ಸ್ಥಾನದಲ್ಲಿ ವಿಕೆಟ್‌ ಕೀಪರ್ ಬ್ಯಾಟರ್ ಇಶಾನ್ ಕಿಶನ್‌, ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ಸಾಧ್ಯತೆಯಿದೆ.

ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ದತೆ ನಡೆಸುತ್ತಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇತ್ತೀಚೆಗಷ್ಟೇ ಲಂಕಾ ಎದುರು ಏಕದಿನ ಸರಣಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇದೀಗ ಟೀಂ ಇಂಡಿಯಾ, ಕಿವೀಸ್ ಕಿವಿ ಹಿಂಡಲು ಸಜ್ಜಾಗಿದೆ.

ಏಕದಿನ ಸರಣಿ ವೇಳಾಪಟ್ಟಿ

ಮೊದಲ ಏಕದಿನ: ಜನವರಿ 18 - ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಮೈದಾನ, ಹೈದರಾಬಾದ್
ಎರಡನೇ ಏಕದಿನ: ಜನವರಿ 21 - ನಯಾ ರಾಯ್ಪುರ ಅಂತಾರಾಷ್ಟ್ರೀಯ ಮೈದಾನ, ರಾಯ್ಪುರ
ಮೂರನೇ ಏಕದಿನ: ಜನವರಿ 24 - ಹೋಳ್ಕರ್ ಸ್ಟೇಡಿಯಂ, ಇಂಡೋರ್

ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಗೆ ಪರಿಷ್ಕೃತ ಭಾರತ ತಂಡ ಹೀಗಿದೆ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ಇಶಾನ್ ಕಿಶನ್‌, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್‌, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್, ಶಾಬಾಜ್‌ ಅಹಮ್ಮದ್, ಶಾರ್ದೂಲ್‌ ಠಾಕೂರ್, ಕುಲ್ದೀಪ್‌ ಯಾದವ್, ಯುಜುವೇಂದ್ರ ಚಹಲ್‌, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮ್ರಾನ್‌ ಮಲಿಕ್.
 

click me!