1. ಕೀರನ್ ಪೊಲ್ಲಾರ್ಡ್ (ಮುಂಬೈ ಇಂಡಿಯನ್ಸ್)
ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಕೀರನ್ ಪೊಲ್ಲಾರ್ಡ್ ಕಳೆದೊಂದು ದಶಕದಿಂದ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡವು 5 ಬಾರಿ ಚಾಂಪಿಯನ್ ಆಗುವಲ್ಲಿ ಪೊಲ್ಲಾರ್ಡ್ ತನ್ನದೇ ಆದ ಪಾತ್ರವಹಿಸಿದ್ದಾರೆ.
ಆದರೆ ಮುಂದಿನ ವರ್ಷ ಪರಿಸ್ಥಿತಿ ಕೊಂಚ ಭಿನ್ನವಾಗಬಹುದು. ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ 11 ಪಂದ್ಯಗಳನ್ನಾಡಿ 14.40 ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 144 ರನ್‌ಗಳನ್ನಷ್ಟೇ ಬಾರಿಸಿದ್ದಾರೆ. ಹೀಗಾಗಿ ಪೊಲ್ಲಾರ್ಡ್, ಮುಂಬೈ ತಂಡದಿಂದ ಹೊರಬಿದ್ದರೂ ಅಚ್ಚರಿಪಡುವಂತಿಲ್ಲ.
2. ರವೀಂದ್ರ ಜಡೇಜಾ (ಚೆನ್ನೈ ಸೂಪರ್ ಕಿಂಗ್ಸ್)
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್ರೌಂಡರ್ ಜಡೇಜಾ, ಯೆಲ್ಲೋ ಆರ್ಮಿ ಯಶಸ್ಸಿನ ಬಗ್ಗೆ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಆದರೆ ಈ ಬಾರಿ ಜಡೇಜಾ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದಾರೆ.
ಇನ್ನು ಆರ್‌ಸಿಬಿ ವಿರುದ್ದದ ಪಂದ್ಯದ ವೇಳೆ ಜಡೇಜಾ ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದರೆ, ಆದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಜತೆಗೆ ಜಡೇಜಾ ಕಿತ್ತಾಟ ಮಾಡಿಕೊಂಡು ಬಯೋಬಬಲ್ ತೊರೆದಿದ್ದಾರೆ ಎಂದೆಲ್ಲಾ ವರದಿಯಾಗಿದ್ದು, ಸಿಎಸ್‌ಕೆ ಜಡೇಜಾ ಅವರನ್ನು ರೀಟೈನ್ ಮಾಡಿಕೊಳ್ಳುವುದು ಅನುಮಾನ ಎನಿಸಿದೆ.
3. ಕೇನ್ ವಿಲಿಯಮ್ಸನ್ (ಸನ್‌ರೈಸರ್ಸ್ ಹೈದರಾಬಾದ್)
ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇದರ ಜತೆಗೆ ಸನ್‌ರೈಸರ್ಸ್ ತಂಡಕ್ಕೆ ವಿಲಿಯಮ್ಸನ್‌ಗೆ ನಾಯಕ ಪಟ್ಟ ಕಟ್ಟಲಾಯಿತು. ವಿಲಿಯಮ್ಸನ್ 11 ಪಂದ್ಯಗಳಿಂದ 19.90ರ ಸರಾಸರಿಯಲ್ಲಿ ಕೇವಲ 199 ರನ್‌ಗಳನ್ನಷ್ಟೇ ಬಾರಿಸಿದ್ದಾರೆ.
Kane Williamson
ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಮಾತ್ರವಲ್ಲದೇ ನಾಯಕತ್ವದಲ್ಲೂ ವೈಫಲ್ಯ ಅನುಭವಿಸಿದ್ದಾರೆ. ಕೇನ್ ವಿಲಿಯಮ್ಸನ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು 12 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 7 ಸೋಲುಗಳೊಂದಿಗೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, ಪ್ಲೇ ಆಫ್‌ಗೇರುವುದು ಅನುಮಾನ ಎನಿಸಿದೆ. ಹೀಗಾಗಿ ಮುಂದಿನ ಐಪಿಎಲ್‌ನಲ್ಲಿ ವಿಲಿಯಮ್ಸನ್, ಸನ್‌ರೈಸರ್ಸ್ ಪರ ಆಡೋದು ಅನುಮಾನ.
4. ಮೊಹಮ್ಮದ್ ಸಿರಾಜ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಆರ್‌ಸಿಬಿ ತಂಡವು ರೀಟೈನ್ ಮಾಡಿಕೊಂಡು ತಪ್ಪು ಮಾಡಿಕೊಂಡಿತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ತೋರಿದ ಪ್ರದರ್ಶನವನ್ನು ಪುನರಾವರ್ತಿಸುವಲ್ಲಿ ವಿಫಲವಾಗಿದ್ದಾರೆ.
ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಸಿರಾಜ್ 13 ಪಂದ್ಯಗಳನ್ನಾಡಿ ಕೇವಲ 8 ವಿಕೆಟ್ ಕಬಳಿಸಿದ್ದಾರೆ. ಅದರಲ್ಲೂ ಸಿರಾಜ್ 9.82ರ ಎಕಾನಮಿಯಲ್ಲಿ ರನ್ ನೀಡಿ ದುಬಾರಿ ಬೌಲರ್ ಎನಿಸಿದ್ದಾರೆ. ಆದರೆ ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಸಿರಾಜ್ ಅವರನ್ನು ಆರ್‌ಸಿಬಿ ತಂಡದಿಂದ ಕೈಬಿಡುವ ಸಾಧ್ಯತೆಯಿದೆ.
5. ಅಬ್ದುಲ್ ಸಮದ್ (ಸನ್‌ರೈಸರ್ಸ್ ಹೈದರಾಬಾದ್)
ಸನ್‌ರೈಸರ್ಸ್ ಹೈದರಾಬಾದ್ ತಂಡವು ಅಬ್ದುಲ್ ಸಮದ್ ಅವರನ್ನು ರೀಟೈನ್ ಮಾಡಿಕೊಂಡಿದ್ದಾಗ ಅಚ್ಚರಿ ಮೂಡಿಸಿತ್ತು. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಸಮದ್ 11 ಪಂದ್ಯಗಳನ್ನಾಡಿ 111 ರನ್ ಬಾರಿಸಿದ್ದರು. ಇನ್ನು ಹಂಗಾಮಿ ಬೌಲರ್ ಆಗಿ ಸಮದ್ ಒಂದು ವಿಕೆಟ್ ಕೂಡಾ ಕಬಳಿಸಿದ್ದರು.
abdul samad
ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಬ್ದುಲ್ ಸಮದ್ ಕೇವಲ 2 ಪಂದ್ಯಗಳನ್ನಾಡಿ 4 ರನ್‌ಗಳನ್ನಷ್ಟೇ ಬಾರಿಸಿದ್ದಾರೆ. ಇದಾದ ಬಳಿಕ ಸರಿಯಾಗಿ ಸಮದ್‌ಗೆ ಆಡುವ ಹನ್ನೊಂದರ ಬಳಗದಲ್ಲೂ ಸರಿಯಾಗಿ ಸ್ಥಾನ ಸಿಗಲಿಲ್ಲ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಸಮದ್ ಅವರನ್ನು ತಂಡದಿಂದ ಕೈಬಿಟ್ಟರೂ ಅಚ್ಚರಿ ಪಡುವಂತಿಲ್ಲ.