IPL Auction 2022: ಹರಾಜಿನ ಬಳಿಕ ಐಪಿಎಲ್‌ ತಂಡಗಳ ಬಲಾಬಲ ಹೇಗಿದೆ..?

First Published | Feb 14, 2022, 1:14 PM IST

ಬೆಂಗಳೂರು: ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ (IPL 2022) ಆಟಗಾರರ ಹರಾಜು ಪ್ರಕ್ರಿಯೆ ಎರಡು ದಿನ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಎಲ್ಲಾ 10 ಫ್ರಾಂಚೈಸಿಗಳು ಅಳೆದು-ತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿವೆ. ಮೆಗಾ ಹರಾಜಿನಲ್ಲಿ (IPL Mega Auction) 600 ಆಟಗಾರರು ಪಾಲ್ಗೊಂಡಿದ್ದು, ಈ ಪೈಕಿ 204 ಆಟಗಾರರು ಬಿಕರಿಯಾಗಿದ್ದಾರೆ. ಹರಾಜಿನ ಬಳಿಕ ಯಾವೆಲ್ಲಾ ಬಲಾಬಲಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ
 

1. ಚೆನ್ನೈ ಸೂಪರ್‌ ಕಿಂಗ್ಸ್‌

ಹಿಂದಿನ ಆವೃತ್ತಿಗಳಲ್ಲಿ ತನ್ನಲ್ಲಿದ್ದ ಬಹುತೇಕ ಪ್ರಮುಖ ಆಟಗಾರರನ್ನು ಮತ್ತೆ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಧೋನಿ, ಋುತುರಾಜ್‌, ಜಡೇಜಾ, ಅಲಿ, ಉತ್ತಪ್ಪ, ರಾಯುಡು, ದೀಪಕ್‌ ಚಹರ್‌, ಬ್ರಾವೋ ಹೀಗೆ ಹೆಚ್ಚೂ ಕಡಿಮೆ ಆಡುವ ಹನ್ನೊಂದು ನಿಗದಿಯಾದಂತಿದೆ. ಜೋರ್ಡನ್‌, ತೀಕ್ಷಣ, ದುಬೆ, ಕಾನ್‌ವೇ, ಸ್ಯಾಂಟ್ನರ್‌ರಂತಹ ಉತ್ತಮ ಆಯ್ಕೆಗಳು ತಂಡಕ್ಕಿದೆ. ಅಗ್ರ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟರ್‌, ಚಹರ್‌ ಬಿಟ್ಟರೆ ಅನುಭವಿ ಭಾರತೀಯ ವೇಗಿ ಕೊರತೆ ಇದೆ.
 

2. ಡೆಲ್ಲಿ ಕ್ಯಾಪಿಟಲ್ಸ್‌

ವಾರ್ನರ್‌, ಶಾ ಆರಂಭಿಕರಾಗಿ ಆಡಲಿದ್ದಾರೆ. ಪಂತ್‌ ಮೇಲ್ಕ್ರಮಾಂಕದಲ್ಲಿ ಆಡಬೇಕಾಗಬಹುದು. ಮಿಚೆಲ್‌ ಮಾಷ್‌ರ್‍ ಫಿಟ್ನೆಸ್‌ ಸಮಸ್ಯೆ ಇರುವ ಕಾರಣ ಯಾವಾಗ ಬೇಕಿದ್ದರೂ ಟೂರ್ನಿಯಿಂದ ಹೊರಬೀಳಬಹುದು. ಹಾಗಾದರೆ ತಜ್ಞ ಫಿನಿಶರ್‌ ಕೊರತೆ ಎದುರಾಗಬಹುದು. ನೋಕಿಯಾ, ಮುಸ್ತಾಫಿಜುರ್‌, ಸಕಾರಿಯಾ, ಖಲೀಲ್‌, ನಾಗರಕೋಟಿಯಂತಹ ಉತ್ತಮ ವೇಗಿಗಳಿದ್ದಾರೆ. ಅನುಭವಿ ಸ್ಪಿನ್ನರ್‌ನ ಕೊರತೆ ಎದ್ದು ಕಾಣುತ್ತಿದೆ.
 

Tap to resize

3. ಗುಜರಾತ್‌ ಟೈಟಾನ್ಸ್‌

ಹಾರ್ದಿಕ್‌, ರಶೀದ್‌, ಗಿಲ್‌ರನ್ನು ಹರಾಜಿಗೂ ಮುನ್ನ ಆಯ್ಕೆ ಮಾಡಿಕೊಂಡಿದ್ದ ಗುಜರಾತ್‌ ಟೈಟಾನ್ಸ್‌, ಹರಾಜಿನಲ್ಲಿ ಹೇಳಿಕೊಳ್ಳುವಷ್ಟುಉತ್ತಮವಾಗಿ ಕಾರ‍್ಯನಿರ್ವಹಿಸಲಿಲ್ಲ ಎಂದು ಮೇಲ್ನೋಟಕ್ಕೆ ಎನಿಸುತ್ತಿದೆ. ಜೇಸನ್‌ ರಾಯ್‌, ಅಭಿನವ್‌ ಮನೋಹರ್‌, ಡೊಮಿನಿಕ್‌ ಡ್ರೇಕ್ಸ್‌, ರಾಹುಲ್‌ ತೆವಾಟಿಯಾ, ಲಾಕಿ ಫಗ್ರ್ಯೂಸನ್‌, ವಿಜಯ್‌ ಶಂಕರ್‌ ಹೀಗೆ ಪ್ರತಿಭಾವಂತರ ಪಡೆ ಇದೆ. ಆಡುವ ಹನ್ನೊಂದನ್ನು ನಿರ್ಧರಿಸುವುದು ಸವಾಲಾಗಿ ಪರಿಣಮಿಸಬಹುದು.

4. ಕೋಲ್ಕತಾ ನೈಟ್‌ರೈಡರ್ಸ್‌

ಹರಾಜಿಗೂ ಮುನ್ನ ವೆಂಕಿ ಅಯ್ಯರ್‌, ಸುನಿಲ್‌ ನರೈನ್‌, ಆ್ಯಂಡ್ರೆ ರಸೆಲ್‌, ವರುಣ್‌ ಚಕ್ರವರ್ತಿಯನ್ನು ಉಳಿಸಿಕೊಂಡಿದ್ದ ಕೆಕೆಆರ್‌, ದೊಡ್ಡ ಮೊತ್ತ ನೀಡಿ ಶ್ರೇಯಸ್‌ ಅಯ್ಯರ್‌ರನ್ನು ಖರೀದಿಸಿದೆ. ಬಹುತೇಕ ಅವರೇ ತಂಡದ ನಾಯಕ. ನಿತೀಶ್‌ ರಾಣಾ, ಅಜಿಂಕ್ಯ ರಹಾನೆ ಉತ್ತಮ ಆಯ್ಕೆ. ಪ್ಯಾಟ್‌ ಕಮಿನ್ಸ್‌, ಟಿಮ್‌ ಸೌಥಿ ಬಿಟ್ಟರೆ ಅನುಭವಿ ವೇಗಿಗಳಿಲ್ಲ. ಕೆಳ ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಹೊಡೆತಗಳನ್ನು ಆಡುವ ಆಟಗಾರರ ಕೊರತೆ ಕಾಣುತ್ತಿದೆ.
 

5. ಲಖನೌ ಸೂಪರ್‌ ಜೈಂಟ್ಸ್‌

ರಾಹುಲ್‌, ಸ್ಟೋಯ್ನಿಸ್‌ ಹಾಗೂ ಬಿಷ್ಣೋಯ್‌ರನ್ನು ಆಯ್ಕೆ ಮಾಡಿಕೊಂಡಿದ್ದ ಲಖನೌ, ಬಹಳ ಅಳೆದು ತೂಗಿ ಆಟಗಾರರನ್ನು ಖರೀದಿ ಮಾಡಿದೆ. ಜೇಸನ್‌ ಹೋಲ್ಡರ್‌, ಆವೇಶ್‌ ಖಾನ್‌, ಮಾರ್ಕ್ವುಡ್‌ರಂತಹ ಟಿ20 ತಜ್ಞ ವೇಗಿಗಳಿದ್ದಾರೆ. ಡಿ ಕಾಕ್‌ ವಿಕೆಟ್‌ ಕೀಪಿಂಗ್‌ ಮಾಡುವುದರ ಜೊತೆ ರಾಹುಲ್‌ರೊಂದಿಗೆ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮನೀಶ್‌ ಪಾಂಡೆಗೆ ದೊಡ್ಡ ಜವಾಬ್ದಾರಿ ಸಿಗಲಿದೆ. ಸ್ಟೋಯ್ನಿಸ್‌ ಫಿನಿಶರ್‌ ಪಾತ್ರ ನಿರ್ವಹಿಸಬೇಕಾಗಬಹುದು.
 

6. ಮುಂಬೈ ಇಂಡಿಯನ್ಸ್‌

ಹರಾಜಿನ ಮೊದಲ ದಿನ ಮುಂಬೈ ತಂಡ ಲೆಕ್ಕಾಚಾರ ಬಹಳ ಕುತೂಹಲ, ಗೊಂದಲ ಮೂಡಿಸಿತ್ತು. ಪಟ್ಟು ಹಿಡಿದು ಇಶಾನ್‌ ಕಿಶನ್‌ರನ್ನು ಖರೀದಿಸಿದ ಮುಂಬೈ, ‘ಬೇಬಿ ಡಿ ವಿಲಿಯ​ರ್‍ಸ್’ ಎಂದೇ ಕರೆಸಿಕೊಳ್ಳುತ್ತಿರುವ ದ.ಆಫ್ರಿಕಾದ ಡೆವಾಲ್ಡ್‌ ಬ್ರೆವಿಸ್‌ರನ್ನು ಖರೀದಿ ಮಾಡಿ ಬ್ಯಾಟಿಂಗ್‌ ಬಲ ಹೆಚ್ಚಿಸಿಕೊಂಡಿತು. ಮುಂಬೈನ ವೇಗದ ಪಡೆ ತಕ್ಕಮಟ್ಟಿಗೆ ಬಲಿಷ್ಠವಾಗಿ ತೋರುತ್ತಿದ್ದರೂ, ಅನುಭವಿ ಸ್ಪಿನ್ನರ್‌ಗಳ ಕೊರತೆ ಎದ್ದು ಕಾಣುತ್ತಿದೆ. ಈ ಸವಾಲನ್ನು ತಂಡ ಹೇಗೆ ನಿರ್ವಹಿಸಲಿದೆ ಎನ್ನುವುದೇ ಕುತೂಹಲ.

Image Credit: Punjab Kings

7. ಪಂಜಾಬ್‌ ಕಿಂಗ್ಸ್‌

ಅತಿಹೆಚ್ಚು ಹಣ ಉಳಿಸಿಕೊಂಡು ಹರಾಜು ಪ್ರಕ್ರಿಯೆಗೆ ಕಾಲಿಟ್ಟ ಪಂಜಾಬ್‌ ಈ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಉತ್ತಮ ಆಟಗಾರರನ್ನು ಖರೀದಿ ಮಾಡಿತು. ಬೇರ್‌ಸ್ಟೋವ್‌, ಧವನ್‌ ಆರಂಭಿಕರಾಗಿ ಆಡುವ ಸಾಧ್ಯತೆ ಇದ್ದು, ಮಯಾಂಕ್‌ 3ನೇ ಕ್ರಮಾಂಕದಲ್ಲಿ ಆಡಬಹುದು. ಲಿವಿಂಗ್‌ಸ್ಟೋನ್‌, ಶಾರುಖ್‌ ಖಾನ್‌, ಒಡಿಯೇನ್‌ ಸ್ಮಿತ್‌, ರಾಜ್‌ ಬಾವಾ ಹೀಗೆ ಹಲವು ಫಿನಿಶರ್‌ಗಳು ತಂಡದಲ್ಲಿದ್ದಾರೆ. ರಬಾಡ ಅವರನ್ನೊಳಗೊಂಡ ಬೌಲಿಂಗ್‌ ಪಡೆ ಸಹ ಉತ್ತಮವಾಗಿ ತೋರುತ್ತಿದೆ.
 

8. ರಾಜಸ್ಥಾನ ರಾಯಲ್ಸ್‌

ಹರಾಜಿನಲ್ಲಿ ಉತ್ತಮ ಆಯ್ಕೆಗಳನ್ನು ಮಾಡಿಕೊಂಡ ತಂಡಗಳ ಪೈಕಿ ರಾಜಸ್ಥಾನ ಕೂಡ ಒಂದು. ಬಟ್ಲರ್‌, ಸ್ಯಾಮ್ಸನ್‌, ಯಶಸ್ವಿ ಜೈಸ್ವಾಲ್‌ರನ್ನು ಹರಾಜಿಗೂ ಮೊದಲೇ ಉಳಿಸಿಕೊಂಡಿದ್ದ ರಾಯಲ್ಸ್‌, ಪಡಿಕ್ಕಲ್‌, ಹೆಟ್ಮೇಯರ್‌, ರಿಯಾನ್‌ ಪರಾಗ್‌ರನ್ನು ಖರೀದಿಸಿ ಬ್ಯಾಟಿಂಗ್‌ ಪಡೆಗೆ ಬಲ ತುಂಬಿದೆ. ಅಶ್ವಿನ್‌, ಚಹಲ್‌, ಕಾರ್ಯಪ್ಪ ತಂಡದಲ್ಲಿರುವ ಸ್ಪಿನ್ನರ್‌ಗಳು. ಬೌಲ್ಟ್‌, ಪ್ರಸಿದ್ಧ್, ಸೈನಿ ವೇಗಿಗಳು. ತಂಡದಲ್ಲಿ ಅನುಭವಿ ಭಾರತೀಯ ವೇಗಿಯ ಕೊರತೆ ಕಾಣುತ್ತಿದೆ.
 

9. ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು

ಆರ್‌ಸಿಬಿ ತಂಡ ಕೆಲ ಉತ್ತಮ ಆಯ್ಕೆಗಳನ್ನು ಮಾಡಿದರೆ, ತಂಡದ ಕೆಲ ಆಯ್ಕೆಗಳು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿತು. ಡು ಪ್ಲೆಸಿ, ಫಿನ್‌ ಆ್ಯಲೆನ್‌, ಮ್ಯಾಕ್ಸ್‌ವೆಲ್‌, ರುಥರ್‌ಫೋರ್ಡ್‌, ಹೇಜಲ್‌ವುಡ್‌, ಬೆಹ್ರೆನ್‌ಡಾರ್ಫ್‌‍, ಹಸರಂಗ ಪೈಕಿ ನಾಲ್ವರ ಆಯ್ಕೆ ಕಷ್ಟವಾಗಲಿದೆ. ಬ್ಯಾಟಿಂಗ್‌ನಲ್ಲಿ ಕೊಹ್ಲಿ ಮೇಲೆಯೇ ಮತ್ತೆ ಹೆಚ್ಚು ಒತ್ತಡ ಬಿದ್ದರೆ ಅಚ್ಚರಿಯಿಲ್ಲ. ತಂಡದಲ್ಲಿ ಭಾರತೀಯ ವೇಗಿಗಳ ಕೊರತೆ ಇದೆ. ಸೂಕ್ತ ಆಡುವ ಹನ್ನೊಂದರ ಆಯ್ಕೆ ಗೊಂದಲವಾಗಬಹುದು.
 

10. ಸನ್‌ರೈಸ​ರ್ಸ್‌ ಹೈದರಾಬಾದ್‌

ವಾರ್ನರ್‌, ರಶೀದ್‌ ಖಾನ್‌ರಂತಹ ಆಟಗಾರರನ್ನು ಕೈಬಿಟ್ಟಿದ್ದ ಸನ್‌ರೈಸ​ರ್ಸ್‌, ಅವರ ಜಾಗವನ್ನು ತುಂಬಬಲ್ಲ ಆಟಗಾರರನ್ನು ಖರೀದಿಸುವಲ್ಲಿ ವಿಫಲವಾಗಿದೆ. ತಂಡದ ಬ್ಯಾಟಿಂಗ್‌ ವಿಭಾಗ ಬಲಿಷ್ಠವಾಗಿ ಕಾಣುತ್ತಿಲ್ಲ. ಪ್ರತಿ ಬಾರಿಯಂತೆ ತಂಡದ ಬೌಲಿಂಗ್‌ ವಿಭಾಗ ಸದೃಢವಾಗಿದೆ. ಭುವನೇಶ್ವರ್‌, ನಟರಾಜನ್‌, ಯಾನ್ಸನ್‌, ವಾಷಿಂಗ್ಟನ್‌, ಶ್ರೇಯ್‌ ಗೋಪಾಲ್‌ ಸೇರಿ ಇನ್ನೂ ಕೆಲ ಉತ್ತಮ ಬೌಲರ್‌ಗಳಿದ್ದಾರೆ. ಬ್ಯಾಟಿಂಗ್‌ನಲ್ಲಿ ನಾಯಕ ವಿಲಿಯಮ್ಸನ್‌ ಮೇಲೆ ಹೆಚ್ಚು ಒತ್ತಡ ಬಿದ್ದರೆ ಆಶ್ಚರ್ಯವಿಲ್ಲ.

Latest Videos

click me!