IPL Auction 2022: ಐಪಿಎಲ್ ಮೆಗಾ ಹರಾಜಿನಿಂದ ಹೊರಗುಳಿದ ಟಾಪ್ 4 ಕ್ರಿಕೆಟಿಗರಿವರು..!

First Published | Feb 7, 2022, 12:56 PM IST

ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, ಫೆಬ್ರವರಿ 12 ಹಾಗೂ 13 ರಂದು ಬೆಂಗಳೂರಿನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಸಾವಿರಕ್ಕೂ ಅಧಿಕ ಮಂದಿ ಐಪಿಎಲ್‌ (IPL) ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಈ ಪೈಕಿ ಇದೀಗ 590 ಆಟಗಾರರನ್ನು ಬಿಸಿಸಿಐ (BCCI) ಹರಾಜಿಗೆ ಶಾರ್ಟ್‌ ಲಿಸ್ಟ್‌ ಮಾಡಿದೆ.
ಇನ್ನು ಐಪಿಎಲ್‌ನ ಮೆಗಾ ಹರಾಜಿನಲ್ಲಿ (IPL Mega Auction) ಈ ಬಾರಿ ಪಾಲ್ಗೊಳ್ಳದೇ ಇರುವ ಟಾಪ್ 4 ಟಿ20 ಸ್ಪೆಷಲಿಸ್ಟ್ ಆಟಗಾರರ ವಿವರವನ್ನು ನಾವಿಂದು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ
 

1. ಬೆನ್ ಸ್ಟೋಕ್ಸ್:

ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿರುವ ಇಂಗ್ಲೆಂಡ್ ಮೂಲದ ಆಲ್ರೌಂಡರ್ ಬೆನ್ ಸ್ಟೋಕ್ಸ್ 15ನೇ ಆವೃತ್ತಿಯ ಐಪಿಎಲ್‌ ಹರಾಜಿನಲ್ಲಿ ಪಾಲ್ಗೊಳ್ಳುತ್ತಿಲ್ಲ. ಬೆನ್ ಸ್ಟೋಕ್ಸ್‌ 2018 ರಿಂದ 2021ರ ವರೆಗೆ ರಾಜಸ್ಥಾನ ರಾಯಲ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು.

ಬೆನ್ ಸ್ಟೋಕ್ಸ್‌ 43 ಐಪಿಎಲ್‌ ಪಂದ್ಯಗಳನ್ನಾಡಿ 2 ಶತಕ ಹಾಗೂ 2 ಅರ್ಧಶತಕ ಸಹಿತ 920 ರನ್‌ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 28 ವಿಕೆಟ್ ಪಡೆದಿದ್ದಾರೆ. 2017ರ ಐಪಿಎಲ್‌ನಲ್ಲಿ ಬೆನ್ ಸ್ಟೋಕ್ಸ್‌ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್‌ ಪರ ಒಂದೇ ಆವೃತ್ತಿಯಲ್ಲಿ 300 ರನ್ ಹಾಗೂ 10 ವಿಕೆಟ್‌ ಪಡೆದು ಮಿಂಚಿದ್ದರು.  

Tap to resize

ಇಂಗ್ಲೆಂಡ್ ತಂಡದ ಪರ ಕಳೆದ ಹಲವು ವರ್ಷಗಳಿಂದ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಮಾನಸಿಕ ಹಾಗೂ ದೈಹಿಕ ವಿಶ್ರಾಂತಿ ಪಡೆಯುವ ಉದ್ದೇಶದಿಂದ ಬೆನ್ ಸ್ಟೋಕ್ಸ್‌ 15ನೇ ಆವೃತ್ತಿಯ ಐಪಿಎಲ್‌ನಿಂದ ಹೊರಗುಳಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ.
 

2. ಕ್ರಿಸ್ ಗೇಲ್‌

ಸ್ವಯಂ ಘೋಷಿತ ಯೂನಿವರ್ಸೆಲ್ ಬಾಸ್ ಖ್ಯಾತಿಯ ಕ್ರಿಸ್‌ ಗೇಲ್‌, ಐಪಿಎಲ್‌ ಟೂರ್ನಿಯಲ್ಲಿ ಇದುವರೆಗೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೇ, ಇದೇ ಮೊದಲ ಬಾರಿಗೆ ಗೇಲ್‌ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.
 

ಕ್ರಿಸ್ ಗೇಲ್‌ ಇದುವರೆಗೂ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೂ ಒಟ್ಟು 142 ಪಂದ್ಯಗಳನ್ನಾಡಿ 39.72ರ ಬ್ಯಾಟಿಂಗ್ ಸರಾಸರಿಯಲ್ಲಿ 4965 ರನ್ ಬಾರಿಸಿದ್ದಾರೆ. 

Photo- iplt20.com

ಕ್ರಿಸ್ ಗೇಲ್ ಇದುವರೆಗೂ ಐಪಿಎಲ್‌ನಲ್ಲಿ 357 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೂ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಗೇಲ್‌ ಅವರಿಗೀಗ 42 ವರ್ಷ. ವಯಸ್ಸಿನ ಕಾರಣದಿಂದಾಗಿ ಗೇಲ್‌ ಐಪಿಎಲ್‌ನಿಂದ ಹಿಂದೆ ಸರಿಯುವ ತೀರ್ಮಾನಕ್ಕೆ ಬಂದಿರಬಹುದು.
 

3. ಮಿಚೆಲ್ ಸ್ಟಾರ್ಕ್‌

ಆಸ್ಟ್ರೇಲಿಯಾದ ಎಡಗೈ ಮಾರಕ ವೇಗಿ ಮಿಚೆಲ್ ಸ್ಟಾರ್ಕ್, ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಹುತೇಕ ಕ್ರಿಕೆಟ್ ಅಭಿಮಾನಿಗಳು ಭಾವಿಸಿದ್ದರು. ಆದರೆ ಸ್ಟಾರ್ಕ್‌ ಮತ್ತೊಮ್ಮೆ ಐಪಿಎಲ್‌ನಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದ್ದಾರೆ. 

ಮಿಚೆಲ್ ಸ್ಟಾರ್ಕ್ 2015ರಲ್ಲಿ ಕೊನೆಯ ಬಾರಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಮಿಚೆಲ್ ಸ್ಟಾರ್ಕ್‌ ಐಪಿಎಲ್‌ನಲ್ಲಿ ಇದುವರೆಗೂ ಕೇವಲ ಎರಡು ಆವೃತ್ತಿಗಳನ್ನಷ್ಟೇ ಆಡಿದ್ದು, ಒಟ್ಟು 27 ಪಂದ್ಯಗಳಿಂದ 34 ವಿಕೆಟ್ ಕಬಳಿಸಿದ್ದಾರೆ.

ಸ್ಟಾರ್ಕ್‌ ಕ್ರಿಕೆಟ್ ಆಡಿದ್ದಕ್ಕಿಂತ ಹೆಚ್ಚಾಗಿ ಗಾಯಕ್ಕೆ ತುತ್ತಾಗಿದ್ದೇ ಹೆಚ್ಚು. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಅಸ್ತ್ರವಾಗಿ ಗುರುತಿಸಿಕೊಂಡಿರುವ ಸ್ಟಾರ್ಕ್‌, ರಾಷ್ಟ್ರೀಯ ತಂಡದ ಪರ ಹೆಚ್ಚು ಪಂದ್ಯಗಳನ್ನಾಡಲು ಫಿಟ್ ಆಗಿರುವ ಉದ್ದೇಶದಿಂದ ಐಪಿಎಲ್‌ನಿಂದ ಹೊರಗುಳಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ.

4. ಸ್ಯಾಮ್ ಕರ್ರನ್‌

ಇಂಗ್ಲೆಂಡ್ ತಂಡದ ಪ್ರತಿಭಾನ್ವಿತ ಆಲ್ರೌಂಡರ್‌ ಸ್ಯಾಮ್ ಕರ್ರನ್‌, 2022ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನುವುದು ಅಚ್ಚರಿಯಾದರೂ ಸಹಾ ಸತ್ಯ. ಕಳೆದ ಆವೃತ್ತಿಗಳಲ್ಲಿ ಚೆನ್ನೈ ಪರ ಗಮನಾರ್ಹ ಪ್ರದರ್ಶನ ತೋರಿದ್ದ ಸ್ಯಾಮ್ ಕರ್ರನ್‌ ಮುಂಬರುವ ಐಪಿಎಲ್‌ನಿಂದ ಹೊರಗುಳಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ.
 

2019ರಲ್ಲಿ ಪಂಜಾಬ್ ಕಿಂಗ್ಸ್‌ ಕಣಕ್ಕಿಳಿಯುವ ಮೂಲಕ ತನ್ನ ಐಪಿಎಲ್ ಅಭಿಯಾನ ಆರಂಭಿಸಿದ್ದ ಸ್ಯಾಮ್ ಕರ್ರನ್, 2020 ಹಾಗೂ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಸ್ಯಾಮ್ ಕರ್ರನ್ 32 ಪಂದ್ಯಗಳಿಂದ 32 ವಿಕೆಟ್ ಪಡೆದಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ 23 ಇನಿಂಗ್ಸ್‌ಗಳಿಂದ 337 ರನ್ ಚಚ್ಚಿದ್ದಾರೆ.

ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಆಸರೆಯಾಗುವ ಕ್ಷಮತೆ ಹೊಂದಿರುವ 23 ವರ್ಷದ ಸ್ಯಾಮ್ ಕರ್ರನ್ ಕೂಡಾ, ರಾಷ್ಟ್ರೀಯ ತಂಡದ ಆಯ್ಕೆಗೆ ಫಿಟ್ ಆಗಿರುವ ಉದ್ದೇಶದಿಂದ ಮುಂಬರುವ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ.
 

Latest Videos

click me!