17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ಮೊದಲ ತಂಡವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ.
ಇನ್ನು ರಾಜಸ್ಥಾನ ರಾಯಲ್ಸ್ ಕೂಡಾ ಬಹುತೇಕ ಪ್ಲೇ ಆಫ್‌ನೊಳಗೆ ಒಂದು ಕಾಲಿಟ್ಟಿದೆ. 16 ಅಂಕ ಹೊಂದಿರುವ ಸಂಜು ಪಡೆ ಮುಂದಿನ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯ ಜಯಿಸಿದರು ಅಧಿಕೃತವಾಗಿ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ.
17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ಎದುರು 47 ರನ್ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.
ಮೇ 18ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಪ್ಲೇ ಆಫ್ ಪ್ರವೇಶಿಸಲಿದೆ.
ಆದರೆ ಆರ್‌ಸಿಬಿಗೆ ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ, ಸಿಎಸ್‌ಕೆ ತಂಡವನ್ನು ಸೋಲಿಸುವುದು ಮಾತ್ರವಲ್ಲದೇ ನೆಟ್ ರನ್‌ರೇಟ್ ಕೂಡಾ ಉತ್ತಮ ಪಡಿಸಿಕೊಳ್ಳಬೇಕಿದೆ. ಸದ್ಯ ಆರ್‌ಸಿಬಿ ತಂಡದ ನೆಟ್ ರನ್‌ರೇಟ್(+0.387) ಆಗಿದೆ.
ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸದ್ಯ 13 ಪಂದ್ಯಗಳನ್ನಾಡಿ 7 ಗೆಲುವು ಹಾಗೂ 6 ಸೋಲುಗಳೊಂದಿಗೆ 14 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸಿಎಸ್‌ಕೆ ಪಡೆಯ ನೆಟ್ ರನ್‌ರೇಟ್ +0.528 ಆಗಿದೆ
ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ಕೇವಲ 12 ಪಂದ್ಯಗಳನ್ನಾಡಿ 7 ಗೆಲುವು ಹಾಗೂ 5 ಸೋಲು ಸಹಿತ 14 ಅಂಕ ಗಳಿಸಿದೆಯಾದರೂ, ನೆಟ್ ರನ್‌ರೇಟ್ +0.406 ಇರುವುದರಿಂದ ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ
ಸದ್ಯ ಪ್ಲೇ ಆಫ್ ಲೆಕ್ಕಾಚಾರವೇನು?
ಸನ್‌ರೈಸರ್ಸ್ ಹೈದರಾಬಾದ್ ತಂಡವು ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯ ಜಯಿಸಿದರೂ ಆರೆಂಜ್ ಆರ್ಮಿ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ. ಸದ್ಯ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬಳಿ 14 ಅಂಕಗಳಿದ್ದು, ಇನ್ನೊಂದು ಗೆಲುವು ತಂಡವನ್ನು ಪ್ಲೇ ಆಫ್ ಹಂತಕ್ಕೇರಿಸಲಿದೆ.
ಇನ್ನು ಲಖನೌ ಸೂಪರ್ ಜೈಂಟ್ಸ್ ತಂಡಕ್ಕೂ ಕೂಡಾ ಪ್ಲೇ ಆಫ್‌ಗೇರಲು ಉತ್ತಮ ಅವಕಾಶವಿದೆ. ಲಖನೌ ಮುಂದಿನ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಈ ಎರಡು ಪಂದ್ಯ ಜಯಿಸಿದರೆ ಲಖನೌ ಕೂಡಾ 16 ಅಂಕಗಳೊಂದಿಗೆ ಪ್ಲೇ ಆಫ್‌ಗೇರಲಿದೆ. ಲಖನೌ ತಂಡವು ಒಂದು ಪಂದ್ಯ ಸೋತರೂ ಪ್ಲೇ ಆಫ್ ಹಾದಿ ಕಠಿಣವಾಗಲಿದೆ. ಯಾಕೆಂದರೆ ಲಖನೌ ತಂಡದ ನೆಟ್ ರನ್‌ರೇಟ್ -0.769 ಆಗಿದೆ.
ಇನ್ನು ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇನ್ನೂ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿಲ್ಲ. ಆದರೆ ಪ್ಲೇ ಆಫ್‌ಗೆ ಎಂಟ್ರಿಕೊಡಬೇಕಿದ್ದರೇ, ಈ ಎರಡು ತಂಡಗಳು ದೊಡ್ಡ ಅಂತರದ ಗೆಲುವು ಸಾಧಿಸಬೇಕು ಹಾಗೂ ಇತರ ತಂಡಗಳ ಫಲಿತಾಂಶ ತಮ್ಮ ಪರವಾಗಿ ಬರಬೇಕಿದೆ.