ಸತತ ಸೋಲುಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ಭರ್ಜರಿಯಾಗಿಯೇ ಗೆಲುವಿನ ಲಯಕ್ಕೆ ಮರಳಿದ್ದು, ಸತತ 4 ಪಂದ್ಯಗಳನ್ನು ಜಯಿಸುವ ಮೂಲಕ ಫಾಫ್ ಡು ಪ್ಲೆಸಿಸ್ ಪಡೆ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಮೇ 09ರಂದು ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ತಂಡವು 60 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದು ಆರ್‌ಸಿಬಿ ಪಾಳಯದಲ್ಲಿ ಪ್ಲೇ ಆಫ್ ಕನಸಿಗೆ ಮತ್ತಷ್ಟು ಬಲ ಬರುವಂತೆ ಮಾಡಿದೆ.
ಹೌದು, ಆರ್‌ಸಿಬಿ ತಂಡವು ತನ್ನ ಪಾಲಿನ ಇನ್ನುಳಿದ ಎರಡು ಪಂದ್ಯಗಳನ್ನು ಜಯಿಸಿದರೆ ಹಾಗೂ ಉಳಿದ ತಂಡಗಳ ಫಲಿತಾಂಶ ಕೂಡಾ ತನ್ನ ಪರವಾಗಿ ಬಂದರೆ ನಾಲ್ಕನೇ ತಂಡವಾಗಿ ಅಲ್ಲ ಮೂರನೇ ತಂಡವಾಗಿ ಕೂಡಾ ಪ್ಲೇ ಆಫ್‌ಗೆ ಲಗ್ಗೆಯಿಡಲು ಅವಕಾಶ ಇದೆ.
ಮೊದಲಾರ್ಧದ 8 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆ ಬಳಿಕ ಸತತ 4 ಪಂದ್ಯಗಳನ್ನು ಜಯಿಸುವ ಮೂಲಕ ಅಂಕಪಟ್ಟಿಯಲ್ಲಿ ಸದ್ಯ 7ನೇ ಸ್ಥಾನದಲ್ಲಿದೆ.
ಸದ್ಯ ಆರ್‌ಸಿಬಿ ತಂಡವು 12 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 7 ಸೋಲು ಸಹಿತ 10 ಅಂಕಗಳನ್ನು ಹೊಂದಿದೆ. ಪಂಜಾಬ್ ಎದುರಿನ ದೊಡ್ಡ ಗೆಲುವು ನೆಟ್ ರನ್‌ರೇಟ್ ಕೂಡಾ ಸುಧಾರಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ತಲ 12 ಅಂಕಗಳನ್ನು ಗಳಿಸುವ ಮೂಲಕ ಕ್ರಮವಾಗಿ 4-5-6ನೇ ಸ್ಥಾನದಲ್ಲಿವೆ. ಇದೀಗ ಆರ್‌ಸಿಬಿ ತಂಡವು ಮೂರನೇ ತಂಡವಾಗಿ ಪ್ಲೇ ಆಫ್‌ಗೆ ಎಂಟ್ರಿ ಕೊಡೋದು ಹೇಗೆ ಎನ್ನುವುದನ್ನು ನೋಡೋಣ ಬನ್ನಿ
ಆರ್‌ಸಿಬಿ ತಂಡವು ತನ್ನ ಪಾಲಿನ ಉಳಿದೆರಡು ಪಂದ್ಯ(ಡೆಲ್ಲಿ & ಚೆನ್ನೈ)ಗಳಲ್ಲಿ ಭರ್ಜರಿ ಗೆಲುವು ಸಾಧಿಸಬೇಕು. ಇದೇ ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡವು ತನ್ನ ಪಾಲಿನ ಉಳಿದೆರಡು ಪಂದ್ಯ(ಗುಜರಾತ್ ಟೈಟಾನ್ಸ್ & ಪಂಜಾಬ್ ಕಿಂಗ್ಸ್) ಎದುರು ದೊಡ್ಡ ಅಂತರದ ಸೋಲು ಕಾಣಬೇಕು.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಪಾಲಿನ ಮೂರು ಪಂದ್ಯಗಳಲ್ಲಿ ಅಂದರೆ ಗುಜರಾತ್ ಟೈಟಾನ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಸೋಲು ಕಾಣಬೇಕು.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರ್‌ಸಿಬಿ ಹಾಗೂ ಲಖನೌ ಎದುರು ಸೋಲು ಕಾಣಬೇಕು. ಇಲ್ಲವೇ ಲಖನೌ ತಂಡವು ಡೆಲ್ಲಿಯನ್ನು ಮಣಿಸಬೇಕು ಹಾಗೂ ಮುಂಬೈ ಎದುರು ಸೋಲಬೇಕು.
ಈ ಮೇಲಿನ ಲೆಕ್ಕಾಚಾರ ನಿಜವಾದರೆ, ಆರ್‌ಸಿಬಿ ತಂಡವು ಉತ್ತಮ ರನ್‌ರೇಟ್‌ನೊಂದಿಗೆ 3ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಲು ಈಗಲೂ ಅವಕಾಶ ಇದೆ. ಅದೃಷ್ಟ ಕೈ ಹಿಡಿದರೆ ಈ ಅವಕಾಶ ಸಾಧ್ಯವಿದೆ.
ಆರ್‌ಸಿಬಿ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಲು ಏನ್ ಮಾಡಬೇಕು?:
ಸನ್‌ರೈಸರ್ಸ್ ಹೈದರಾಬಾದ್ 3 ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಎರಡು ಪಂದ್ಯಗಳನ್ನು ಆಡಲು ಬಾಕಿ ಇದ್ದು, ಆ ಪಂದ್ಯಗಳನ್ನು ಸೋತರೆ ಆರ್‌ಸಿಬಿ ಪ್ಲೇ ಆಫ್ ಹಾದಿ ಸುಗಮವಾಗಲಿದೆ
ಸನ್‌ರೈಸರ್ಸ್ ಹಾಗೂ ಚೆನ್ನೈ ತಂಡಗಳು ಯಾವುದೇ ಕಾರಣಕ್ಕೂ ಒಂದಕ್ಕಿಂತ ಹೆಚ್ಚು ಪಂದ್ಯಗಳನ್ನು ಜಯಿಸಬಾರದು. ಈ ಎರಡು ತಂಡಗಳು ತಮ್ಮ ಪಾಲಿನ ಪಂದ್ಯಗಳ ಪೈಕಿ ಎರಡು ಗೆಲುವು ಸಾಧಿಸಿದರೆ ಕನಿಷ್ಠ 16 ಅಂಕಗಳೊಂದಿಗೆ ಪ್ಲೇ ಆಫ್ ಪ್ರವೇಶಿಸಲಿವೆ.
ಆಗ ಎಲ್ಲಾ ತಂಡಗಳ ಬಳಿ 14 ಅಂಕಗಳು ಉಳಿಯಲಿವೆ. ಹೀಗಾದಲ್ಲಿ ಚೆನ್ನೈ/ಸನ್‌ರೈಸರ್ಸ್, ಹಾಗೂ ಲಖನೌ/ಡೆಲ್ಲಿ ಕ್ಯಾಪಿಟಲ್ಸ್‌ಗಿಂತ ಉತ್ತಮ ರನ್‌ರೇಟ್ ಕಾಪಾಡಿಕೊಂಡರೆ ಆರ್‌ಸಿಬಿ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಲಿದೆ.
ಇದೆಲ್ಲ ಸಾಕಾರವಾಗಬೇಕಾದರೇ, ಅದೃಷ್ಟ ಕೂಡಾ ಆರ್‌ಸಿಬಿ ಕೈಹಿಡಿಯಬೇಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎಲ್ಲಾ ಸವಾಲು ಮೆಟ್ಟಿ ನಿಂತು ಪ್ಲೇ ಆಫ್ ಪ್ರವೇಶಿಸುತ್ತಾ ಎನ್ನುವುದನ್ನು ಕಮೆಂಟ್ ಮಡಿ ತಿಳಿಸಿ.