ದಿಢೀರ್ ಐಪಿಎಲ್ ತೊರೆದ ಇಂಗ್ಲೆಂಡ್ ಸ್ಟಾರ್ ಪ್ಲೇಯರ್ಸ್‌; ಈ ಎರಡು ತಂಡಗಳಿಗೆ ಬಿಗ್ ಲಾಸ್..!

First Published | May 14, 2024, 3:03 PM IST

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಿರ್ಣಾಯಕ ಘಟ್ಟಕ್ಕೆ ತಲುಪುತ್ತಿರುವ ಬೆನ್ನಲ್ಲೇ ಇಂಗ್ಲೆಂಡ್‌ ಸ್ಟಾರ್ ಆಟಗಾರರು ನ್ಯಾಷನಲ್ ಡ್ಯೂಟಿಗೋಸ್ಕರ ಐಪಿಎಲ್ ತಂಡಗಳನ್ನು ತೊರೆದಿದ್ದಾರೆ. ಇದು ಐಪಿಎಲ್‌ನ ಕೆಲ ತಂಡಗಳ ಪಾಲಿಗೆ ಬಲವಾದ ಹೊಡೆತ ಬೀಳುವಂತೆ ಮಾಡಿದೆ. ಯಾವ ತಂಡಕ್ಕೆ ದೊಡ್ಡ ಲಾಸ್ ಎನ್ನುವುದನ್ನು ನಾವಿಂದು ನೋಡೋಣ ಬನ್ನಿ
 

ಭರ್ಜರಿಯಾಗಿ ಸಾಗುತ್ತಿರುವ 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ರೋಚಕ ಘಟ್ಟ ತಲುಪಿದೆ ಇದರ ಬೆನ್ನಲ್ಲೇ ದಿಢೀರ್ ಎನ್ನುವಂತೆ ರಾಷ್ಟ್ರೀಯ ತಂಡ ಕೂಡಿಕೊಳ್ಳಲು ಇಂಗ್ಲೆಂಡ್ ಆಟಗಾರರು ಐಪಿಎಲ್ ಟೂರ್ನಿಯನ್ನು ತೊರೆದಿದ್ದಾರೆ.

ಟಿ20 ವಿಶ್ವಕಪ್‌ ಸಿದ್ಧತೆಗಾಗಿ ಅವರು ಶೀಘ್ರದಲ್ಲೇ ರಾಷ್ಟ್ರೀಯ ತಂಡಗಳನ್ನು ಕೂಡಿಕೊಳ್ಳಲಿದ್ದಾರೆ. ಇಂಗ್ಲೆಂಡ್‌ ತಂಡ ಮೇ 22ರಿಂದ ಪಾಕಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದ್ದು, ಹೀಗಾಗಿ ಐಪಿಎಲ್‌ನ ಲೀಗ್‌ ಹಂತ ಹಾಗೂ ನಾಕೌಟ್‌ ಪಂದ್ಯಗಳಿಗೆ ಗೈರಾಗಲಿದ್ದಾರೆ.

Tap to resize

ಯಾವೆಲ್ಲ ಐಪಿಎಲ್ ತಂಡದ ಇಂಗ್ಲೆಂಡ್ ಆಟಗಾರರು ತವರಿಗೆ ವಾಪಾಸ್ಸಾಗಿದ್ದಾರೆ. ಇದು ಆ ತಂಡಗಳಿಗೆ ಯಾವೆಲ್ಲಾ ರೀತಿಯಲ್ಲಿ ಹೊಡೆತ ಬೀಳಬಹುದು ಎನ್ನುವುದನ್ನು ನೋಡೋಣ ಬನ್ನಿ.

1. ಜೋಸ್ ಬಟ್ಲರ್:

ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್, ಬುಧವಾರ ನಡೆಯಲಿರುವ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯಕ್ಕೂ ಮುನ್ನ ಸೋಮವಾರವೇ ತವರಿಗೆ ವಾಪಾಸ್ಸಾಗಿದ್ದಾರೆ. 

ರಾಜಸ್ಥಾನ ರಾಯಲ್ಸ್‌ನ ಅತ್ಯಂತ ನಂಬಿಗಸ್ಥ ಬ್ಯಾಟರ್ ಆಗಿರುವ ಬಟ್ಲರ್ ಅನುಪಸ್ಥಿತಿ ತಂಡವನ್ನು ಕಾಡುವ ಸಾಧ್ಯತೆಯಿದೆ. ಇನ್ನು ರಾಜಸ್ಥಾನ ರಾಯಲ್ಸ್ ತಂಡವು ಅಧಿಕೃತವಾಗಿ ಪ್ಲೇ ಆಫ್‌ಗೆ ಎಂಟ್ರಿಕೊಟ್ಟಿಲ್ಲ.

2. ರೀಸ್ ಟಾಪ್ಲೆ:

ಇಂಗ್ಲೆಂಡ್ ಮೂಲದ ಎಡಗೈ ವೇಗಿ ರೀಸ್ ಟಾಪ್ಲೆ ಕೂಡಾ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತೊರೆದಿದ್ದಾರೆ. ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಟಾಪ್ಲೆ ಆರ್‌ಸಿಬಿ ಪರ ಕೆಲವು ಪಂದ್ಯಗಳನ್ನಾಡಿದ್ದರು.

3. ವಿಲ್‌ ಜ್ಯಾಕ್ಸ್‌:

ಆರ್‌ಸಿಬಿ ತಂಡದ ವಿಸ್ಪೋಟಕ ಬ್ಯಾಟರ್ ವಿಲ್ ಜ್ಯಾಕ್ಸ್ ಕೂಡಾ ತವರಿಗೆ ವಾಪಾಸ್ಸಾಗಿದ್ದಾರೆ. ಆರ್‌ಸಿಬಿ ಪರ ಶತಕ ಸೇರಿದಂತೆ ಕೆಲವು ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ್ದ ಜ್ಯಾಕ್ಸ್ ಅನುಪಸ್ಥಿತಿ ತಂಡವನ್ನು ಕಾಡುವ ಸಾಧ್ಯತೆಯಿದೆ.

ಐಪಿಎಲ್‌ನ ಮೊದಲಾರ್ಧದಲ್ಲಿ ಬೆಂಚ್ ಕಾಯಿಸಿದ್ದ ವಿಲ್ ಜ್ಯಾಕ್ಸ್, ಆರ್‌ಸಿಬಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಬಳಿಕ ಆಲ್ರೌಂಡ್ ಆಟದ ಮೂಲಕ ಮಿಂಚಿದ್ದರು. ಅದರಲ್ಲೂ ಸಿಎಸ್‌ಕೆ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಜ್ಯಾಕ್ಸ್‌ ಇಲ್ಲದಿರುವುದು ಆರ್‌ಸಿಬಿಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.

4. ಲಿಯಾಮ್ ಲಿವಿಂಗ್‌ಸ್ಟೋನ್:

ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡಾ ಸೋಮವಾರ ತವರಿಗೆ ವಾಪಾಸ್ಸಾಗಿದ್ದಾರೆ. ಪಂಜಾಬ್ ಕಿಂಗ್ಸ್ ತಂಡವು ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ.

5. ಫಿಲ್ ಸಾಲ್ಟ್:

ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಕೂಡಾ ಇದೀಗ ಇಂಗ್ಲೆಂಡ್‌ಗೆ ವಾಪಾಸ್ಸಾಗಿದ್ದಾರೆ. ಕೆಕೆಆರ್ ಪರ ಫಿಲ್ ಸಾಲ್ಟ್ 12 ಪಂದ್ಯಗಳನ್ನಾಡಿ 435 ರನ್ ಸಿಡಿಸಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ತಂಡವು ಈಗಾಗಲೇ ಮೊದಲ ತಂಡವಾಗಿ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ. ಆದರೆ ಮಹತ್ವದ ಪ್ಲೇ ಆಫ್‌ನಲ್ಲಿ ಫಿಲ್ ಸಾಲ್ಟ್ ಅವರ ಅನುಪಸ್ಥಿತಿ ಕೆಕೆಆರ್ ತಂಡವನ್ನು ಕಾಡುವ ಸಾಧ್ಯತೆ ದಟ್ಟವಾಗಿದೆ.

6. ಮೋಯಿನ್ ಅಲಿ:

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್ರೌಂಡರ್ ಮೋಯಿನ್ ಅಲಿ ಕೂಡಾ ಈ ವಾರಾಂತ್ಯದಲ್ಲಿ ತವರಿಗೆ ವಾಪಾಸ್ಸಾಗಲಿದ್ದಾರೆ. ಚೆನ್ನೈ ಪರ ಮಧ್ಯಮ ಕ್ರಮಾಂಕದಲ್ಲಿ ಮಿಂಚುತ್ತಿರುವ ಮೋಯಿನ್ ಅಲಿ, ಆರ್‌ಸಿಬಿ ಎದುರಿನ ಪಂದ್ಯಕ್ಕೆ ಲಭ್ಯರಿರುತ್ತಾರೆಯೇ ಅಥವಾ ಇಲ್ಲವೇ ಎನ್ನುವ ಸ್ಪಷ್ಟ ಮಾಹಿತಿಯಿಲ್ಲ.

7. ಜಾನಿ ಬೇರ್‌ಸ್ಟೋವ್:

ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್ ಜಾನಿ ಬೇರ್‌ಸ್ಟೋವ್ ಕೂಡಾ ಈ ವಾರಾಂತ್ಯಕ್ಕೆ ಇಂಗ್ಲೆಂಡ್‌ಗೆ ವಾಪಾಸ್ಸಾಗಲಿದ್ದಾರೆ. ಪಂಜಾಬ್ ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವುದರಿಂದ ಬೇರೆ ಆಟಗಾರರಿಗೆ ಸ್ಥಾನ ಸಿಗಲಿದೆ.

8. ಸ್ಯಾಮ್ ಕರ್ರನ್:

ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಹಂಗಾಮಿಯಾಗಿ ಪಂಜಾಬ್ ತಂಡವನ್ನು ಮುನ್ನಡೆಸಿದ್ದ ಸ್ಯಾಮ್ ಕರ್ರನ್, ಜಾನಿ ಬೇರ್‌ಸ್ಟೋವ್ ಜತೆಗೆ ತವರಿಗೆ ವಾಪಾಸ್ಸಾಗಲಿದ್ದಾರೆ.

Latest Videos

click me!