RCB ಎದುರಿನ ಪಂದ್ಯಕ್ಕೂ ಮುನ್ನ ಮುಂಬೈಗೆ ಅತಿದೊಡ್ಡ ಶಾಕ್‌..! ಸ್ಟಾರ್‌ ಆಟಗಾರ ಟೂರ್ನಿಯಿಂದಲೇ ಔಟ್

First Published May 9, 2023, 1:19 PM IST

ಬೆಂಗಳೂರು: 16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯ ಮಹತ್ವದ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಮುಂಬೈನ ವಾಂಖೇಡೆ ಮೈದಾನದಲ್ಲಿಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಸೆಣಸಾಡಲಿವೆ. ಈ ಪಂದ್ಯಕ್ಕೂ ಮುನ್ನವೇ ಮುಂಬೈಗೆ ಬಿಗ್‌ ಶಾಕ್ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

2023ನೇ ಸಾಲಿನ 54ನೇ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್‌ ಪಂದ್ಯಕ್ಕೆ ಮುಂಬೈನ ವಾಖೇಂಡೆ ಮೈದಾನ ಆತಿಥ್ಯ ವಹಿಸಿದೆ.

ಎರಡೂ ತಂಡಗಳು ಕಳೆದ ಪಂದ್ಯದಲ್ಲಿ ಸೋಲಿನ ಕಹಿಯುಂಡಿವೆ. ಒಂದು ಕಡೆ ಮುಂಬೈ ಇಂಡಿಯನ್ಸ್ ತಂಡವು ಈ ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಶರಣಾಗಿದ್ದರೆ, ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಎದುರು ಮುಗ್ಗರಿಸಿತ್ತು. 

ಆರ್‌ಸಿಬಿ & ಮುಂಬೈ ತಂಡಗಳು ತಲಾ 5 ಪಂದ್ಯಗಳನ್ನು ಜಯಿಸಿದ್ದು, ಅಂಕಪಟ್ಟಿಯಲ್ಲಿ ಕ್ರಮವಾಗಿ 6 ಹಾಗೂ 7ನೇ ಸ್ಥಾನದಲ್ಲಿವೆ. ಈ ಪಂದ್ಯವನ್ನು ಜಯಿಸಿದ ತಂಡವು ನೇರವಾಗಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆಯಿಡಲಿದ್ದು, ಗೆಲುವಿಗಾಗಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಸಾಧ್ಯತೆಯಿದೆ.

ಈ ಮಹತ್ವದ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ಗೆ ಬಿಗ್‌ ಶಾಕ್ ಎದುರಾಗಿದ್ದು, ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್, 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. 

ಈ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಪಾಲಿಗೆ ಲೀಗ್ ಹಂತದಲ್ಲಿ ಇನ್ನೂ 4 ಪಂದ್ಯಗಳು ಬಾಕಿ ಇರುವಾಗಲೇ ಆರ್ಚರ್‌ ತಂಡವನ್ನು ತೊರೆದಿದ್ದಾರೆ. ತಮ್ಮ ಫಿಟ್ನೆಸ್ ಪುನ್ಚೇತನದ ಕಡೆಗೆ ಹೆಚ್ಚಿನ ಗಮನ ಹರಿಸುವ ಉದ್ದೇಶದಿಂದ ಆರ್ಚರ್ ತವರಿಗೆ ವಾಪಸ್ಸಾಗಿದ್ದಾರೆ.
 

ಜೋಫ್ರಾ ಆರ್ಚರ್, ಈ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಈ ಆವತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್ಚರ್‌ 5 ಪಂದ್ಯಗಳನ್ನಾಡಿ 9.50 ಎಕಾನಮಿಯಲ್ಲಿ ರನ್‌ ನೀಡಿ ಕೇವಲ 2 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು.
 

ಆರ್‌ಸಿಬಿ ಎದುರು ಮೊದಲ ಪಂದ್ಯವನ್ನು ಆಡಿದ ಬಳಿಕ ಆರ್ಚರ್‌, ಮೊಣಕೈ ನೋವು ಅನುಭವಿಸಿದ್ದರು. ಹೀಗಾಗಿಯೇ ಕೊಂಚ ಬಿಡುವು ಪಡೆದು ತಜ್ಞರೊಂದಿಗೆ ಸಮಾಲೋಚನೆ ನಡೆಸಲು ಬೆಲ್ಜಿಯಂಗೆ ಭೇಟಿ ನೀಡಿದ್ದರು.

ಇದೀಗ ಜೋಫ್ರಾ ಆರ್ಚರ್ ಬದಲಿಗೆ ಇಂಗ್ಲೆಂಡ್‌ನ ಅನುಭವಿ ಆಲ್ರೌಂಡರ್ ಹಾಗೂ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಕ್ರಿಸ್ ಜೋರ್ಡನ್‌, ಇದೀಗ ಮುಂಬೈ ಇಂಡಿಯನ್ಸ್ ತಂಡ ಕೂಡಿಕೊಂಡಿದ್ದಾರೆ.

click me!