IPL 2023 ಶಕೀಬ್ ಔಟ್, ಕೆಕೆಆರ್‌ ತಂಡ ಕೂಡಿಕೊಂಡ ಇಂಗ್ಲೆಂಡ್‌ನ ಹೊಡಿಬಡಿ ದಾಂಡಿಗ..!

First Published Apr 6, 2023, 12:04 PM IST

ಕೋಲ್ಕತಾ(ಏ.06): 16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಹಲವು ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಕೂಡಾ ಹೊರತಾಗಿಲ್ಲ. ಇದೆಲ್ಲದರ ನಡುವೆ ಕೆಕೆಆರ್ ತಂಡಕ್ಕೆ ಗುಡ್‌ ನ್ಯೂಸ್ ಸಿಕ್ಕಿದ್ದು, ಇದೀಗ ಇಂಗ್ಲೆಂಡ್‌ನ ಸ್ಪೋಟಕ ಆರಂಭಿಕ ಬ್ಯಾಟರ್‌ ತಂಡ ಕೂಡಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

2023ನೇ ಸಾಲಿನ ಐಪಿಎಲ್‌ ಟೂರ್ನಿ ಆರಂಭಕ್ಕೂ ಮುನ್ನವೇ ಕೋಲ್ಕತಾ ನೈಟ್‌ ರೈಡರ್ಸ್‌ ತಂಡವು ಫಿಟ್ನೆಸ್ ಸಮಸ್ಯೆಯಿಂದ ತನ್ನ ನಾಯಕ ಶ್ರೇಯಸ್ ಅಯ್ಯರ್ ಅವರ ಸೇವೆ ಬಳಸಿಕೊಳ್ಳಲು ವಿಫಲವಾಗಿದೆ.
 

ಇನ್ನು ಗಾಯದ ಮೇಲೆ ಬರೆ ಎನ್ನುವಂತೆ ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್‌, ವೈಯುಕ್ತಿಕ ಕಾರಣ ನೀಡಿ ಕಡೆ ಕ್ಷಣದಲ್ಲಿ ಐಪಿಎಲ್‌ನಿಂದ ಪಾಲ್ಗೊಳ್ಳದಿರಲು ತೀರ್ಮಾನಿಸಿದ್ದರು. ಇದು ಕೆಕೆಆರ್‌ಗೆ ಮತ್ತಷ್ಟು ಹಿನ್ನಡೆಯನ್ನುಂಟು ಮಾಡಿತ್ತು.
 

ಇದೆಲ್ಲದರ ನಡುವೆ ಮಹತ್ತರ ಬೆಳವಣಿಗೆಯೊಂದರಲ್ಲಿ, ಕೆಕೆಆರ್ ತಂಡವು ಶಕೀಬ್ ಅಲ್ ಹಸನ್ ಬದಲಿಗೆ ಸಾಕಷ್ಟು ಅಳೆದು ತೂಗಿ ಇಂಗ್ಲೆಂಡ್‌ನ ಸ್ಪೋಟಕ ಆರಂಭಿಕ ಬ್ಯಾಟರ್ ಜೇಸನ್ ರಾಯ್ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

1.50 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಜೇಸನ್ ರಾಯ್ ಅವರಿಗೆ ಇದೀಗ 2.80 ಕೋಟಿ ರುಪಾಯಿ ನೀಡಿ ಕೋಲ್ಕತಾ ನೈಟ್ ರೈಡರ್ಸ್‌ ತಂಡದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೆಕೆಆರ್ ಫ್ರಾಂಚೈಸಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಜೇಸನ್ ರಾಯ್, ಇದೀಗ ಇಂದು ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ನಡೆಯಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎದುರಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆದರೆ ಎಪ್ರಿಲ್‌ 09ರಂದು ಅಹಮದಬಾದ್‌ನಲ್ಲಿ ನಡೆಯಲಿರುವ ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದ ವೇಳೆಗೆ ಆಯ್ಕೆಗೆ ಲಭ್ಯರಿರಲಿದ್ದಾರೆ.

ಜೇಸನ್ ರಾಯ್, 2017ರಲ್ಲಿ ಗುಜರಾತ್ ಲಯನ್ಸ್ ತಂಡದ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಇನ್ನು 2021ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಕೊನೆಯ ಬಾರಿಗೆ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದರು.
 

ಜೇಸನ್‌ ರಾಯ್‌ ಆರಂಭಿಕನಾಗಿ ತಂಡ ಕೂಡಿಕೊಂಡರೆ, ಆಫ್ಘಾನಿಸ್ತಾನ ಮೂಲದ ರೆಹಮನುಲ್ಲಾ ಗುರ್ಬಾಜ್‌ ತಮ್ಮ ಸ್ಥಾನವನ್ನು ತ್ಯಾಗ ಮಾಡಬೇಕಾಗುತ್ತದೆ. ಪಂಜಾಬ್ ಎದುರಿನ ಪಂದ್ಯದಲ್ಲಿ ಗುರ್ಬಾಜ್‌, 16 ಎಸೆತಗಳಲ್ಲಿ 22 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದ್ದರು.
 

Jason Roy

ಈಗಾಗಲೇ ಮೊದಲ ಪಂದ್ಯ ಸೋತು ಕಂಗಾಲಾಗಿರುವ ನಿತೀಶ್ ರಾಣಾ ನೇತೃತ್ವದ ಕೆಕೆಆರ್ ತಂಡವು, ಇದೀಗ ಆರ್‌ಸಿಬಿ ಸವಾಲು ಸ್ವೀಕರಿಸಲು ಸಜ್ಜಾಗಿದೆ. ಇನ್ನು ಮೂರನೇ ಪಂದ್ಯ ಜೇಸನ್ ರಾಯ್ ಸೇರ್ಪಡೆ, ತಂಡದ ಅದೃಷ್ಟವನ್ನು ಬದಲಿಸಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
 

click me!