IPL Auction 2022: ಪಾಕೆಟ್ ಡೈನಮೊ ನಿಕೋಲಸ್ ಪೂರನ್ ಮೇಲೆ ಕಣ್ಣಿಟ್ಟಿವೆ ಈ ನಾಲ್ಕು ಫ್ರಾಂಚೈಸಿಗಳು..!

First Published Dec 20, 2021, 5:40 PM IST

ಬೆಂಗಳೂರು: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್‌ ಪ್ರೀಮಿಯರ್ ಲೀಗ್ (Indian Premier League) ಯಶಸ್ವಿ 14 ಆವೃತ್ತಿಗಳು ಮುಗಿಸಿದ್ದು, ಇದೀಗ 15ನೇ ಆವೃತ್ತಿಯ ಟೂರ್ನಿಗೆ ಸಿದ್ದತೆಗಳು ಆರಂಭವಾಗಿ. 2022ನೇ ಸಾಲಿನ ಐಪಿಎಲ್ (IPL 2022) ಟೂರ್ನಿಯಲ್ಲಿ ಹೊಸದಾಗಿ ಎರಡು ತಂಡಗಳು ಸೇರ್ಪಡೆಯಾಗಿರುವುದರಿಂದ ಟೂರ್ನಿ ಆರಂಭಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದೆ. ಮೆಗಾ ಹರಾಜಿನಲ್ಲಿ ವೆಸ್ಟ್ ಇಂಡೀಸ್‌ನ ಸ್ಪೋಟಕ ಬ್ಯಾಟರ್‌ ನಿಕೋಲಸ್ ಪೂರನ್ (Nicholas Pooran) ಅವರನ್ನು ಖರೀದಿಸಲು ಈ ನಾಲ್ವರು ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮೆಗಾ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್‌ ಫ್ರಾಂಚೈಸಿಯು ನಿಕೋಲಸ್ ಪೂರನ್ ಅವರನ್ನು ತಂಡದಿಂದ ಕೈಬಿಟ್ಟಿದೆ. ವಿಸ್ಪೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯ ನಿಕೋಲಸ್ ಪೂರನ್‌ಗಿದೆ.

Nicholas Pooran

ಬ್ಯಾಟಿಂಗ್ ಮಾತ್ರವಲ್ಲದೇ ವಿಕೆಟ್‌ ಕೀಪಿಂಗ್‌ನಲ್ಲೂ ಚಾಕಚಕ್ಯತೆ ಮೆರೆಯಬಲ್ಲ ಪೂರನ್‌, ಇದುವರೆಗೂ ವಿಂಡೀಸ್ ಪರ 49 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 128.03 ಸ್ಟ್ರೈಕ್‌ರೇಟ್‌ನಲ್ಲಿ 845 ರನ್ ಚಚ್ಚಿದ್ದಾರೆ.

1. ಪೂರನ್ ಮೇಲೆ ಕಣ್ಣಿಟ್ಟಿದೆ ಕೋಲ್ಕತ ನೈಟ್ ರೈಡರ್ಸ್

ಮೆಗಾ ಹರಾಜಿಗೂ ಮುನ್ನ ಕೆಕೆಆರ್ ಫ್ರಾಂಚೈಸಿಯು ದಿನೇಶ್ ಕಾರ್ತಿಕ್ ಹಾಗೂ ಇಯಾನ್ ಮಾರ್ಗನ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಫಿನೀಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಬಲ್ಲ ಪೂರನ್ ಕೆಕೆಆರ್ ಪಾಲಿಗೆ ಒಳ್ಳೆಯ ಅಸ್ತ್ರವಾಗಬಲ್ಲರು.
 

ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ 26 ವರ್ಷದ ಪೂರನ್ ಕೆಕೆಆರ್‌ಗೆ ವರವಾಗಬಹುದು. ರಸೆಲ್, ನರೈನ್, ವೆಂಕಟೇಶ್ ಅಯ್ಯರ್ ಹಾಗೂ ವರುಣ್ ಚಕ್ರವರ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿರುವ ಕೆಕೆಆರ್ ಹರಾಜಿನಲ್ಲಿ ಪೂರನ್‌ಗೆ ಗಾಳ ಹಾಕುವ ಸಾಧ್ಯತೆಯಿದೆ.

2. ರಾಜಸ್ಥಾನಕ್ಕೂ ಬೇಕಿದೆ ಪೂರನ್‌ರಂತ ಹಿಟ್ಟರ್

2022ರ ಐಪಿಎಲ್‌ನಲ್ಲಿ ವಿಂಡೀಸ್ ಮೂಲದ ಪಾಕೆಟ್ ಡೈನಮೊ ನಿಕೋಲಸ್ ಪೂರನ್‌ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ. ವಿಕೆಟ್ ಕೀಪರ್ ಆಗಿ ಈಗಾಗಲೇ ಜೋಸ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ ಇದ್ದಾರೆ. ಆದರೆ ಪೂರನ್ ಬಂದರೆ ಈ ಇಬ್ಬರು ಆಟಗಾರರ ಮೇಲಿನ ಒತ್ತಡ ಕಡಿಮೆಯಾಗಲಿದೆ.
 

ಬಟ್ಲರ್ ಹಾಗೂ ಸ್ಯಾಮ್ಸನ್ ಅಗ್ರಕ್ರಮಾಂಕದಲ್ಲಿ ಬ್ಯಾಟ್ ಬೀಸಿದರೆ, ನಿಕೋಲಸ್ ಪೂರನ್ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಬಹುದು. ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡುವ ಕಲೆಯನ್ನು ನಿಕೋಲಸ್ ಪೂರನ್ ಕರಗತ ಮಾಡಿಕೊಂಡಿದ್ದಾರೆ.

3. ಮುಂಬೈ ಫ್ರಾಂಚೈಸಿಯ ರಾಡರ್‌ನಲ್ಲಿ ಪೂರನ್..!

ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಈಗಾಗಲೇ ಎಡಗೈ ಹೊಡಿಬಡಿ ದಾಂಡಿಗರಾದ ಕ್ವಿಂಟನ್ ಡಿ ಕಾಕ್ ಹಾಗೂ ಇಶಾನ್‌ ಕಿಶನ್‌ ಅವರನ್ನು ತಂಡದಿಂದ ಕೈಬಿಟ್ಟಿರುವುದರಿಂದ, ಮತ್ತೋರ್ವ ಸ್ಪೋಟಕ ಬ್ಯಾಟರ್‌ ನಿಕೋಲಸ್ ಪೂರನ್ ಮೇಲೆ ಕಣ್ಣಿಟ್ಟಿದೆ.

ಹಾರ್ದಿಕ್ ಪಾಂಡ್ಯ ಅವರನ್ನು ಸಹಾ ಮುಂಬೈ ಫ್ರಾಂಚೈಸಿ ಕೈಬಿಟ್ಟಿರುವುದರಿಂದ, ಪೊಲ್ಲಾರ್ಡ್ ಜತೆಗೆ ನಿಕೋಲಸ್ ಪೂರನ್‌ ಅಬ್ಬರಿಸಿದರೆ ಮುಂಬೈ ಇಂಡಿಯನ್ಸ್ ತಂಡವು ಮತ್ತಷ್ಟು ಬಲಿಷ್ಠವಾಗಲಿದೆ.

4. ರಾಯಲ್ ಚಾಲೆಂಜರ್ಸ್ ಬೆಂಗಳೂರು ತೆಕ್ಕೆಗೆ ಸೇರುತ್ತಾರಾ ಪೂರನ್?

ರಾಯಲ್ ಚಾಲೆಂಜರ್ಸ್ ಅಭಿಮಾನಿಗಳ ವಲಯದಲ್ಲಿ ಇಂತದ್ದೊಂದು ಪ್ರಶ್ನೆ ಕಾಡಲಾರಂಭಿಸಿದೆ. ಎಬಿ ಡಿವಿಲಿಯರ್ಸ್‌ ಈಗಾಗಲೇ ನಿವೃತ್ತಿ ಘೋಷಿಸಿರುವುದರಿಂದ ನಿಕೋಲಸ್ ಪೂರನ್, ಆರ್‌ಸಿಬಿ ಪಾಲಿಗೆ ಉತ್ತಮ ಆಯ್ಕೆಯಾಗಬಲ್ಲರು.

ನಿಕೋಲಸ್ ಪೂರನ್ ಕಳೆದ ಐಪಿಎಲ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರೂ ಸಹಾ, ಯಾವಾಗ ಬೇಕಿದ್ದರೂ ಸಿಡಿಯುವ ಕ್ಷಮತೆಯನ್ನು ವಿಂಡೀಸ್ ಆಟಗಾರ ಹೊಂದಿದ್ದಾರೆ. ಹೀಗಾಗಿ ಆರ್‌ಸಿಬಿ ಕೂಡಾ ಪೂರನ್‌ಗೆ ಮಣೆ ಹಾಕುವ ಸಾಧ್ಯತೆಯಿದೆ.

click me!