2016ರ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಡೇವಿಡ್ ವಾರ್ನರ್ ಅವರನ್ನು 2021ನೇ ಆವೃತ್ತಿಯ ಐಪಿಎಲ್‌ನಲ್ಲಿ ಸಂಪೂರ್ಣ ನಿರ್ಲಕ್ಷಿಸಲಾಗಿತ್ತು. ಇನ್ನು ಅಚ್ಚರಿಯ ಸಂಗತಿಯೆಂದರೆ 2022ರ ಐಪಿಎಲ್‌ಗೂ ಮುನ್ನ ಆಸ್ಟ್ರೇಲಿಯಾದ ಆಟಗಾರರನ್ನು ಹೈದರಾಬಾದ್ ಫ್ರಾಂಚೈಸಿ ತಂಡದಿಂದಲೇ ಕೈಬಿಟ್ಟಿತ್ತು.
2021ರ ಐಪಿಎಲ್ ಟೂರ್ನಿಯ ವೇಳೆ ಡೇವಿಡ್ ವಾರ್ನರ್ ಹಾಗೂ ಸನ್‌ರೈಸರ್ಸ್ ಫ್ರಾಂಚೈಸಿ ನಡುವೆ ಎಲ್ಲವೂ ಸರಿಯಿರಲಿಲ್ಲ ಎನ್ನುವುದು ಸಾಬೀತಾಗಿತ್ತು. ಪರಿಣಾಮ ಟೂರ್ನಿಯ ಅರ್ಧದಲ್ಲೇ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಬಳಿಕ ಆಡುವ ಹನ್ನೊಂದರ ಬಳಗದಿಂದಲೂ ಗೇಟ್ ಪಾಸ್ ನೀಡಲಾಗಿತ್ತು. ಇದಾಗಿ ಬರೋಬ್ಬರಿ ಮೂರು ತಿಂಗಳ ಬಳಿಕ ಸನ್‌ರೈಸರ್ಸ್ ಫ್ರಾಂಚೈಸಿ ಕುರಿತಂತೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ತಂಡಕ್ಕೆ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ವಾರ್ನರ್, 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರನ್ ಬರ ಅನುಭವಿಸಿದ್ದರಿಂದ ಅವರನ್ನು ಹೈದರಾಬಾದ್ ಫ್ರಾಂಚೈಸಿ ರೀಟೈನ್ ಮಾಡಿಕೊಂಡಿರಲಿಲ್ಲ.
ಆದರೆ ಇದಾದ ಬಳಿಕ ಯುಎಇನಲ್ಲೇ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ವಾರ್ನರ್, ಟೂರ್ನಿಯ ಗರಿಷ್ಠ ಸ್ಕೋರರ್ ಆಗಿ ಹೊರಹೊಮ್ಮಿದ್ದರು.
ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ವರ್ತನೆಗೆ ಬೇಸತ್ತು, ವಾರ್ನರ್ ಕೆಲ ಪಂದ್ಯಗಳಲ್ಲಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಿದ್ದರು. ಹೀಗಿದ್ದೂ ಪ್ರೇಕ್ಷಕರ ಗ್ಯಾಲರಿಯಲ್ಲೇ ಕುಳಿತು ಸನ್‌ರೈಸರ್ಸ್ ತಂಡಕ್ಕೆ ಬೆಂಬಲ ಸೂಚಿಸಿದ್ದರು. ಫ್ರಾಂಚೈಸಿಯು ಆಟಗಾರರು ಪ್ರಯಾಣಿಸುತ್ತಿದ್ದ ಬಸ್‌ನೊಳಗೆ ಬರಲು ವಾರ್ನರ್‌ಗೆ ಅವಕಾಶ ನೀಡಿರಲಿಲ್ಲ ಎಂದೆಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿದ್ದವು.
ಇದೆಲ್ಲದರ ಕುರಿತಂತೆ ಖ್ಯಾತ ಕ್ರೀಡಾ ಪತ್ರಕರ್ತ ಬೋರಿಯಾ ಮಜುಂದರ್ ಜತೆ ಮಾತನಾಡಿರುವ ವಾರ್ನರ್, ನಾಯಕತ್ವದಿಂದ ಕೆಳಗಿಳಿಸಿದ ರೀತಿ ಹಾಗೂ ತಂಡದಿಂದ ಹೊರಗಿಟ್ಟಂತಹ ರೀತಿ ಯುವ ಕ್ರಿಕೆಟಿಗರ ಪಾಲಿಗೆ ಒಳ್ಳೆಯ ಸಂದೇಶವಾಗಲಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
2021ರ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಮುಖಭಂಗ ಅನುಭವಿಸಿತ್ತು. ನನ್ನನ್ನು ನಡೆಸಿಕೊಂಡು ರೀತಿಗೆ ಸನ್‌ರೈಸರ್ಸ್ ಅಭಿಮಾನಿಗಳ ಪಾಲಿಗೂ ಸಾಕಷ್ಟು ನೋವುಂಟು ಮಾಡಿತು ಎನ್ನುವುದರ ಅರಿವಿದೆ. ಅಭಿಮಾನಿಗಳ ಬೆಂಬಲದಿಂದಲೇ ಒಂದು ಬ್ರ್ಯಾಂಡ್ ಆಗಿ ರೂಪುಗೊಳ್ಳುವುದು ಎಂದು ವಾರ್ನರ್ ಹೇಳಿದ್ದಾರೆ.
ಮೈದಾನಕ್ಕೆ ಪಂದ್ಯ ನೋಡಲು ಬರುವಂತಹ ಯುವ ಅಭಿಮಾನಿಗಳು ಸಚಿನ್, ವಿರಾಟ್, ವಿಲಿಯಮ್ಸನ್, ಸ್ಟೀವ್ ಸ್ಮಿತ್ ಹಾಗೂ ಸ್ವತಃ ನನ್ನಂತಾಗಲು ಕನಸು ಕಾಣುತ್ತಿರುತ್ತಾರೆ. ನಾವು ಅಭಿಮಾನಿಗಳ ಜತೆ ಒಂದು ರೀತಿಯಲ್ಲಿ ಸಂಪರ್ಕ ಹೊಂದಿರುತ್ತೇವೆ. ನಾನು ಕ್ರಿಕೆಟ್ ಆಡುವಾಗಲೆಲ್ಲ ಅಭಿಮಾನಿಗಳ ಜತೆ ಒಂದಿಲ್ಲ ಒಂದು ರೀತಿಯಲ್ಲಿ ಕನೆಕ್ಟ್ ಆಗಿರುವುದಾಗಿ ವಾರ್ನರ್ ಹೇಳಿದ್ದಾರೆ.