ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡಿದ್ದ ಆರ್‌ಸಿಬಿ ಡೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್, ಇದೀಗ 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲೂ ಮಿಂಚಿನ ದಾಳಿ ನಡೆಸಲು ಉತ್ಸುಕರಾಗಿದ್ದಾರೆ.
31 ವರ್ಷ ಹರ್ಷಲ್ ಪಟೇಲ್, ಕಳೆದ ಆವೃತ್ತಿಯಲ್ಲಿ ತೋರಿದ ಮಿಂಚಿನ ಪ್ರದರ್ಶನವನ್ನು ಈ ಬಾರಿಯು ತೋರಲಿದ್ದಾರೆ ಎನ್ನುವ ನಂಬಿಕೆಯಲ್ಲಿ, ಬೆಂಗಳೂರು ಮೂಲದ ಫ್ರಾಂಚೈಸಿಯು ಭಾರೀ ಮೊತ್ತ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.
ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಆದರೆ ಹರ್ಷಲ್ ಪಟೇಲ್ ಅವರನ್ನು ರೀಟೈನ್ ಮಾಡಿಕೊಂಡಿರಲಿಲ್ಲ
(photo Source- Instagram)
ಇನ್ನು ಕಳೆದ ತಿಂಗಳು ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಬರೋಬ್ಬರಿ 10.75 ಕೋಟಿ ರುಪಾಯಿ ನೀಡಿ ಹರ್ಷಲ್ ಪಟೇಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಹರ್ಷಲ್ ಪಟೇಲ್ ತಮಗೆ ಸಿಕ್ಕಿರುವ ಮೊತ್ತದ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ, ಬದಲಾಗಿ ಮತ್ತೊಮ್ಮೆ ಎದುರಾಳಿ ಬ್ಯಾಟರ್‌ಗಳನ್ನು ಕಾಡಲು ಸಿದ್ದತೆ ನಡೆಸಿದ್ದಾರೆ.
ಜವಾಬ್ದಾರಿ ವಿಚಾರದಲ್ಲಿ ಸಾಕಷ್ಟು ಒತ್ತಡವಿದೆ. ಆದರೆ ನಾನು ಒತ್ತಡದ ಕುರಿತಂತೆ ಹೆಚ್ಚಿನ ಯೋಚನೆ ಮಾಡಿಲ್ಲ. ಇದರ ಬದಲಾಗಿ ಇದೊಂದು ಅವಕಾಶ ಎಂದು ಭಾವಿಸುತ್ತೇನೆ ಹಾಗೂ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಎದುರು ನೋಡುತ್ತಿದ್ದೇನೆ ಎಂದು ಆರ್‌ಸಿಬಿ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ಹರ್ಷಲ್ ಪಟೇಲ್ ಹೇಳಿದ್ದಾರೆ.
2021ರ ಐಪಿಎಲ್ ಟೂರ್ನಿಯಲ್ಲಿ ಹರ್ಷಲ್ ಪಟೇಲ್ ಬರೋಬ್ಬರಿ 32 ವಿಕೆಟ್ ಕಬಳಿಸುವ ಮೂಲಕ, ಐಪಿಎಲ್ ಇತಿಹಾಸದಲ್ಲಿ ಆವೃತ್ತಿಯೊಂದರಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಡ್ವೇನ್ ಬ್ರಾವೋ ಜತೆ ಜಂಟಿ ಅಗ್ರಸ್ಥಾನ ಪಡೆದಿದ್ದರು. ಐಪಿಎಲ್‌ನಲ್ಲಿ ತೋರಿದ ಉತ್ತಮ ಪ್ರದರ್ಶನದಿಂದಾಗಿ ಹರ್ಷಲ್ ಪಟೇಲ್, ಟೀಂ ಇಂಡಿಯಾಗೂ ಪಾದಾರ್ಪಣೆ ಮಾಡಿದ್ದರು.
ನಿಜ ಹೇಳಬೇಕೆಂದರೆ, ಈ ಬಾರಿ ನಾನು ಮತ್ತಷ್ಟು ಆತ್ಮವಿಶ್ವಾಸವನ್ನು ಗಳಿಸಿದ್ದೇನೆ. ಕಳೆದ ವರ್ಷ ನನ್ನಿಂದ ಅತ್ಯುತ್ತಮ ಪ್ರದರ್ಶನ ಮೂಡಿಬಂದಿತ್ತು. ಇದಾದ ಬಳಿಕ ಭಾರತ ತಂಡವನ್ನು ಕೂಡಿಕೊಂಡೆ. ಭಾರತ ತಂಡ ಕೂಡಿಕೊಂಡ ಬಳಿಕ ನನ್ನ ಸಾಮರ್ಥ್ಯ ಹಾಗೂ ಕೌಶಲ್ಯದ ಬಗ್ಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ನನಗೆ ಸಿಕ್ಕ ಆತ್ಮವಿಶ್ವಾಸವನ್ನು ಈ ವರ್ಷದ ಐಪಿಎಲ್‌ಗೆ ಕೊಂಡೊಯ್ಯಲಿದ್ದು, ಮತ್ತಷ್ಟು ಉತ್ತಮ ಪ್ರದರ್ಶನ ತೋರಲಿದ್ದೇನೆ ಎನ್ನುವ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.