14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್ ಆರಂಭವಾಗಿದ್ದು, ಏಪ್ರಿಲ್ 9ರಿಂದ ಚುಟುಕು ಕ್ರಿಕೆಟ್ ಸಂಗ್ರಾಮ ಆರಂಭವಾಗಲಿದೆ
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ.
ಕಳೆದ 13 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಶತಾಯಗತಾಯ ಕಪ್ ಗೆಲ್ಲಲು ಎಲ್ಲಾ ರಣತಂತ್ರ ಹೆಣೆದುಕೊಂಡು ಸಜ್ಜಾಗಿದೆ.
ಚೆನ್ನೈನಲ್ಲಿ ನಡೆದ ಆಟಗಾರರ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪಾರ್ಥಿವ್ ಪಟೇಲ್, ಕ್ರಿಸ್ ಮೋರಿಸ್ ಸೇರಿ 10 ಆಟಗಾರರಿಗೆ ಗೇಟ್‌ಪಾಸ್ ನೀಡಿತ್ತು. 12 ಆಟಗಾರನ್ನು ರೀಟೈನ್ ಮಾಡಿಕೊಂಡಿತ್ತು.
ಇದೀಗ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್, ಹರಾಜಿಗೂ ಮುನ್ನ ಇಂಗ್ಲೆಂಡ್ ಆಲ್ರೌಂಡರ್ ಮೋಯಿನ್ ಅಲಿಯನ್ನು ರಿಲೀಸ್ ಮಾಡಿ ಆರ್‌ಸಿಬಿ ಅತಿದೊಡ್ಡ ತಪ್ಪು ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲಾ 8 ತಂಡಗಳು ಈ ಬಾರಿ ತಟಸ್ಥ ಸ್ಥಳದಲ್ಲಿ ಪಂದ್ಯಗಳನ್ನಾಡಲಿದ್ದು, ಲೀಗ್ ಹಂತದ ಕೊನೆಯ 5 ಪಂದ್ಯಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತದ ಈಡನ್ ಗಾರ್ಡನ್ ಮೈದಾನದಲ್ಲಿ ಆಡಲಿದೆ.
ಈಡನ್ ಗಾರ್ಡನ್ ಮೈದಾನ ಸ್ಪಿನ್ನರ್‌ಗಳಿಗೆ ನೆರವಾಗಲಿದೆ. ತನ್ನ ತವರು ಮೈದಾನವಾದ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಹೆಚ್ಚಿನ ಪಂದ್ಯವಾಡುವ ನಿರೀಕ್ಷೆಯಿಂದಾಗಿ ಮೋಯಿನ್ ಅಲಿಯನ್ನು ತಂಡದಿಂದ ಕೈಬಿಟ್ಟಿದೆ. ಇದು ತಂಡಕ್ಕೆ ಮುಳುವಾಗುವ ಸಾಧ್ಯತೆಯಿದೆ ಎಂದು ಪಟೇಲ್ ಹೇಳಿದ್ದಾರೆ.
ಐಪಿಎಲ್ ಆಟಗಾರರ ಹರಾಜಿನಲ್ಲಿ 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಮೋಯಿನ್ ಅಲಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 7 ಕೋಟಿ ರುಪಾಯಿ ನೀಡಿ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಭಾರತೀಯ ಪಿಚ್‌ನಲ್ಲಿ ಪರಿಣಾಮಕಾರಿ ಸ್ಪಿನ್ ದಾಳಿ ನಡೆಸಬಲ್ಲ ಹಾಗೆಯೇ ಫಿಂಚ್ ಹಿಟ್ಟರ್ ಆಗಿ ಗುರುತಿಸಿಕೊಂಡಿರುವ ಮೋಯಿನ್ ಅಲಿ ಕೈ ಬಿಟ್ಟಿದ್ದು, ಆರ್‌ಸಿಬಿ ಹೊಡೆತ ಆಗಲಿದೆಯೇ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.